ಓಟಿಟಿಗೆ ಬಂತು ಲವ್ ಮಾಕ್ಟೇಲ್ 3 ; ಎಲ್ಲಿ ನೋಡಬಹುದು ತಂದೆ-ಮಗಳ ಭಾವನಾತ್ಮಕ ಪಯಣ ? ಇಲ್ಲಿದೆ ಮಾಹಿತಿ
ಈಗೀಗ ಯಾವ ಭಾಷೆಯಲ್ಲಿ ನೋಡಿದರೂ ಕೂಡ ಸಿಕ್ವೆಲ್‌ಗಳ ಟ್ರೆಂಡ್ ಶುರುವಾಗಿದೆ. ಎಲ್ಲರಲ್ಲಿಯೂ ಈಗ ತಮ್ಮದೇ ಆದ ಫ್ರಾಂಚೈಸಿಯನ್ನು ತೆರೆಯುವ ಬಯಕೆ. ತಮ್ಮದೇ ಆದ ಯೂನಿವರ್ಸ್‌ಗೆ ಪ್ರೇಕ್ಷಕರನ್ನು ಕರೆದೊಯ್ಯುವ ಆಸೆ. ಆದರೆ .. ಅದು ಸುಲಭ ಅಲ್ಲ. ಯಾಕೆಂದರೆ ಮೊದಲ ಭಾಗ ಗೆದ್ದ ಹಿನ್ನೆಲೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಎರಡನೇ ಭಾಗ ಗೆದ್ದರೆ ಮೂರನೇ ಭಾಗದ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತೆ.
ಅಪ್ಪಿ.. ತಪ್ಪಿ.. ಚೂರು ಯಾಮಾರಿದರೂ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತೆ. ಚಿತ್ರ ಪಾತಾಳಕ್ಕೆ ಬೀಳುವ ಸಾಧ್ಯತೆ ಇರುತ್ತೆ. ಕೇವಲ ಸ್ಟಾರ್ ವ್ಯಾಲ್ಯೂ ಎನ್ ಕ್ಯಾಶ್ ಮಾಡಿಕೊಂಡು ಇಂದಿನ ಕಾಲದಲ್ಲಿ ಕ್ಯಾಶ್ ಎಣಿಸುವುದು ತುಂಬಾನೇ ಕಷ್ಟ. ಇದಕ್ಕೆ ''ಮುಂಗಾರು ಮಳೆ 2'' .. '' ಜೋಗಯ್ಯ'' .. ''ಕೋಟಿಗೊಬ್ಬ3'' .. ''ಡೆಡ್ಲಿ 2''.. ''.. ''ಕಲ್ಪನ 2''.. ಹೀಗೆ ಕನ್ನಡದಲ್ಲಿಯೇ ಹಲವಾರು ಉದಾಹರಣೆಗಳಿವೆ.

ಆದರೆ ''ಲವ್ ಮಾಕ್ಟೇಲ್'' ಫ್ರಾಂಚೈಸಿ ಇದಕ್ಕೆ ತದ್ವಿರುದ್ದ. ಚಿತ್ರರಂಗದಲ್ಲಿ ಸೀಕ್ವೆಲ್‌ಗಳು ಸೋಲುತ್ತವೆ ಎನ್ನುವ ಮಾತನ್ನು ಸುಳ್ಳಾಗಿಸಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಂದಲ್ಲ, ಎರಡಲ್ಲ, ಮೂರು ಬಾರಿ ಗೆಲುವಿನ ನಗೆ ಬೀರಿದರು. ಆದಿ ಮತ್ತು ನಿಧಿಮಾ ಕಥೆಯನ್ನು ಮೂರು ಬಾರಿ ಹೇಳಿ ಗೆದ್ದರು.
ಸದ್ಯ ಪ್ರೇಕ್ಷಕರ ಮನ ಮತ್ತು ಮನೆಯನ್ನು ಇನ್ನೊಮ್ಮೆ ಇವರಿಬ್ಬರು ತಲುಪಲು ಬರುತ್ತಿದ್ದಾರೆ.
ಹೌದು, ಕಳೆದ ಮಾರ್ಚ್ 19ರಂದು ಬಿಡುಗಡೆಯಾಗಿ, ಬಾಕ್ಸಾಫೀಸ್‌ನಲ್ಲಿ ಗೆದ್ದ, ಪ್ರೇಕ್ಷಕರ ಕಣ್ಣಂಚನ್ನೂ ಒದ್ದೆಯಾಗಿಸಿದ ''ಲವ್ ಮಾಕ್ಟೇಲ್ 3'' ಚಿತ್ರ ಈಗ ಓಟಿಟಿಗೆ ಬರುತ್ತಿದೆ. ಇನ್ನು ಈಗೀಗ ಚಿತ್ರ ಬಿಡುಗಡೆಯಾಗಿ ನಾಲ್ಕು ವಾರ ಕೂಡ ಆಗಿರುವುದಿಲ್ಲ. ಅಷ್ಟರಲ್ಲಿಯೇ ಓಟಿಟಿಯ ಅಂಗಳಕ್ಕೆ ಚಿತ್ರವೊಂದು ಬಂದಿರುತ್ತೆ. ಆದರೆ. ''ಲವ್ ಮಾಕ್ಟೇಲ್-3'' 50 ದಿನಗಳ ನಂತರ ಅಂದರೆ ಹೆಚ್ಚು ಕಡಿಮೆ 7 ವಾರದ ನಂತರ "ಓಟಿಟಿ''ಯಲ್ಲಿ ಪ್ರಸಾರವಾಗಲಿದೆ.

ಕಥಾಹಂದರ
ಆದಿಯ ಸ್ನೇಹಿತನ ಹೆಂಡತಿಯ ಸೀಮಂತದ ನೆಪದಲ್ಲಿ ಮೊದಲೆರಡು ಭಾಗದ ಪ್ರಮುಖ ಪಾತ್ರವರ್ಗ ಒಂದು ಕಡೆ ಸೇರುತ್ತೆ. ಇಲ್ಲಿಂದ ಸ್ನೇಹಿತ ಆದಿಯ ಕಥೆ ಹೇಳಲು ಶುರು ಮಾಡುತ್ತಾನೆ. ಇನ್ನು ''ಲವ್ ಮಾಕ್ಟೇಲ್''ನಲ್ಲಿ ಆದಿ ಮತ್ತು ನಿಧಿ ಪ್ರೇಮ ಕತೆ ಇತ್ತು. ''ಲವ್ ಮಾಕ್ಟೇಲ್ 2'' ರಮ್ಯಾಳನ್ನು ಅನಾಥಾಶ್ರಮದಿಂದ ಆದಿ ದತ್ತು ಪಡೆಯುವಲ್ಲಿಗೆ ಅಂತ್ಯವಾಗಿತ್ತು. ಅಲ್ಲಿಂದ ನಂತರದ ರಮ್ಯಾ ಮತ್ತು ಆದಿಯ ಬದುಕಿನ ಚಿತ್ರಣವೇ ಈ ''ಲವ್ ಮಾಕ್ಷೇಲ್-3''. ಕಳೆದುಕೊಂಡ ಹೆಂಡತಿಯ ನೆನಪಿನಲ್ಲಿ ಆದಿ ತನ್ನ ಮಗಳ ಹೆಸರನ್ನು ನಿಧಿ ಎಂದು ಬದಲಾಯಿಸಿರುತ್ತಾನೆ. ಆಕೆಗೆ ಏಳು ವರ್ಷವಾದ ನಂತರದ ಕಥೆ ಈ ಚಿತ್ರದಲ್ಲಿದೆ.
ತಾರಾಬಳಗ
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಬೇಬಿ ಸಂವೃತಾ, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್, ಅಭಿಲಾಷ್ ದಳಪತಿ, ದಿಲೀಪ್ ರಾಜ್, ರೇಖಾ ಕೂಡ್ಲಿಗಿ, ರಜನಿ ಭಾರದ್ವಾಜ್, ಶ್ವೇತಾ ಪ್ರಸಾದ್, ವೈಶಾಲಿ ದೀಪಕ್, ಜಗದೀಶ್, ಗಿರಿ ಶಿವಣ್ಣ.
ನಿರ್ದೇಶನ - ಡಾರ್ಲಿಂಗ್ ಕೃಷ್ಣ
ಕಥೆ- ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಯದುನಂದನ್.
ನಿರ್ಮಾಣ - ಡಾರ್ಲಿಮಗ್ ಕೃಷ್ಣ, ಮಿಲನಾ ನಾಗರಾಜ್
ಸಂಗೀತ- ನಕುಲ್ ಅಭ್ಯಂಕರ್
ಛಾಯಾಗ್ರಹಣ ಮತ್ತು ಸಂಕಲನ - ಶ್ರೀ ಕ್ರೇಜಿ ಮೈಂಡ್ಸ್
ಎಲ್ಲಿ ನೋಡಬಹುದು ? ಎಂದಿನಿಂದ ..?
''ಲವ್ ಮಾಕ್ಟೇಲ್ 3'' ಚಿತ್ರವನ್ನು ನೀವು ಚಿತ್ರಮಂದಿರದಲ್ಲಿ ನೋಡದಿದ್ದರೆ, ನೋಡಿಯೂ ಮತ್ತೊಮ್ಮೆ ನೋಡಬೇಕು ಅಂದುಕೊಂಡಿದ್ದರೆ ಈ ಚಿತ್ರವನ್ನು ನೀವು ಈ ಮೇ 8ರಿಂದ ''ಜೀ5'' ನಲ್ಲಿ ನೋಡಬಹುದು. ಸದ್ಯ ''ಲವ್ ಮಾಕ್ಟೇಲ್ 3'' ಚಿತ್ರದ ಓಟಿಟಿಯ ಬಿಡುಗಡೆಯ ದಿನಾಂಕವನ್ನು ಘೋಷಿಸಿರುವ ''ಜೀ5'' ಕೆಲವು ಕಥೆಗಳು ಹೃದಯಕ್ಕೆ ಹತ್ತಿರ, ಈ ಕಥೆ ಅದಕ್ಕೂ ಮಿಗಿಲು! ''ಲವ್ ಮಾಕ್‌ಟೇಲ್ 3''. ಆದಿಯ ಈ ಹೊಸ ಅಧ್ಯಾಯ ಕಣ್ತುಂಬಿಕೊಳ್ಳಿ ನಿಮ್ಮ ನೆಚ್ಚಿನ Z5 ಕನ್ನಡದಲ್ಲಿ ಎಂದು ಟ್ರೇಲರ್ ಹಂಚಿಕೊಂಡಿದೆ. ಹಲವರು ಕಾತುರದಿಂದ ಕಾಯುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ. ಆಸಕ್ತ ಚಿತ್ರಪ್ರೇಮಿಗಳು ಮೇ 8ರಿಂದ ಮನೆ ಮಂದಿ ಜೊತೆ ಕುಳಿತು ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.


Click it and Unblock the Notifications