ಓಟಿಟಿಯವರು ಕನ್ನಡ ಚಿತ್ರಗಳಿಗೆ, ಕನ್ನಡಿಗರಿಗೆ ಅವಮಾನ ಮಾಡ್ತಿದ್ದಾರೆ"; ದುನಿಯಾ ವಿಜಯ್
ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಒಂದ್ಕಡೆ ಪರಭಾಷಾ ಚಿತ್ರಗಳ ಹಾವಳಿ ಮತ್ತೊಂದು ಕಡೆ ಓಟಿಟಿ ಆರ್ಭಟ. ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ತಡವಾಗುತ್ತಿದೆ. ಇದಕ್ಕೂ ನಾನಾ ಕಾರಣಗಳಿವೆ. ಸದ್ಯ ಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಬಂದು ನೋಡಲು ಹಿಂದೇಟು ಹಾಕುತ್ತಿದ್ದಾರೆ.
ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಕೆಲವರು ಸಿನಿಮಾಗಳನ್ನು ಮಾಡುವುದು ತಡ ಮಾಡುತ್ತಿದ್ದಾರೆ. ದೊಡ್ಡ ಸಿನಿಮಾಗಳು ಬರದೇ ಜನ ಪರಭಾಷಾ ಸಿನಿಮಾಗಳನ್ನೇ ಹೆಚ್ಚು ನೋಡುತ್ತಿದ್ದಾರೆ. ಸಣ್ಣ ಸಿನಿಮಾಗಳು ಓಟಿಟಿಗೆ ಬಂದಾಗ ನೋಡೋಣ ಬಿಡು ಎನ್ನುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಈ ವರ್ಷ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ಇನ್ನು ತೆರೆಗೆ ಬಂದಿಲ್ಲ.

7 ತಿಂಗಳ ಬಳಿಕ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಆಗುತ್ತಿದೆ. ಈ ವಾರ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ತೆರೆಗಪ್ಪಳಿಸಲಿದೆ. ಮುಂದಿನ ವಾರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಬಿಡುಗಡೆ ಆಗಲಿದೆ. ಬಳಿಕ ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ', ಶಿವಣ್ಣನ 'ಬೈರತಿ ರಣಗಲ್' ಆರ್ಭಟ ಶುರುವಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ 'ಭೀಮ' ಸಿನಿಮಾ ರಿಲೀಸ್ ಆಗಬೇಕಿತ್ತು.
'ಸಲಗ' ಬಳಿಕ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿರುವ ಮತ್ತೊಂದು ಸಿನಿಮಾ 'ಭೀಮ'. ಈಗಾಗಲೇ ಸಾಂಗ್ಸ್‌ನಿಂದ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ದುನಿಯಾ ವಿಜಯ್ ಚಿತ್ರದ ಪ್ರಮೋಷನ್‌ನಲ್ಲಿ ಭಾಗಿ ಆಗುತ್ತಿದ್ದಾರೆ. ಚಿತ್ರವನ್ನು ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. 400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಭೀಮ'ನ ಆರ್ಭಟ ಶುರುವಾಗಲಿದೆ.
ಸಿನಿಮಾ ಪ್ರಚಾರದ ವೇಳೆ ಸುದ್ದಿಮನೆ ಯೂಟ್ಯೂಬ್ ಚಾನಲ್‌ನಲ್ಲಿ ಓಟಿಟಿ ಬಗ್ಗೆ ದುನಿಯಾ ವಿಜಯ್ ಮಾತನಾಡಿದ್ದಾರೆ. ತಮ್ಮ ಸಿನಿಮಾ ತಡವಾಗಲು ಓಟಿಟಿ ಕೂಡ ಕೊಂಚ ಮಟ್ಟಿಗೆ ಕಾರಣ ಎನ್ನಬಹುದು ಎಂದಿದ್ದಾರೆ. ಓಟಿಟಿಯಿಂದ ಕನ್ನಡ ಸಿನಿಮಾಗಳು, ಕನ್ನಡಿಗರಿಗೆ ಅವಮಾನವಾಗುತ್ತಿದೆ ಎಂದು ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಯಾಟಲೈಟ್ ರೈಟ್ಸ್ ಕೊಂಡುಕೊಳ್ಳಲು ಯಾರು ಮುಂದೆ ಬರ್ತಿಲ್ಲ ಎಂದು ಅಸಹಾಯ ವ್ಯಕ್ತಪಡಿಸಿದ್ದಾರೆ.

"ಭೀಮ ಚಿತ್ರವನ್ನು 125 ದಿನಗಳ ಚಿತ್ರೀಕರಣ ನಡೆಸಿದೆವು. ಬಳಿಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಇತ್ತು. ಬಳಿಕ ಎಲೆಕ್ಷನ್ ಎದುರಾಯಿತು. ನಂತರ ಎಲ್ಲಾ ನಿರ್ಮಾಪಕರು ಎದುರಿಸುತ್ತಿರುವ ನೋವು ಅಂದರೆ ಓಟಿಟಿಯಲ್ಲಿ ಕನ್ನಡ ಸಿನಿಮಾಗಳ ಕಡೆಗಣನೆ. ಕನ್ನಡ ಸಿನಿಮಾಗಳಿಗೆ ಅವರು ಮಾಡುತ್ತಿರುವ ಅವಮಾನ. ಅವರು ಸಿನಿಮಾಗಳನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವುದಕ್ಕಿಂತ ಅವಮಾನ ಮಾಡುತ್ತಿದ್ದಾರೆ" ಎಂದು ವಿಜಯ್ ಬೇಸರ ಹೊರಹಾಕಿದ್ದಾರೆ.
"ಕನ್ನಡಕ್ಕೆ ಗೌರವ ಕೊಡದೇ ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿದ್ದಾರೆ. ಅದರಿಂದ ನಿರ್ಮಾಪಕರು ನರಳುವಂತಾಗಿದೆ. ಇನ್ನು ಟಿವಿ ರೈಟ್ಸ್ ಕೂಡ ಕೊಂಡೊಕೊಳ್ಳಲು ಹಿಂದು ಮುಂದು ನೋಡುತ್ತಾರೆ. ವಿಧಿನೇ ಇಲ್ಲ ಎಂದು ಬಹಳ ಚೌಕಾಸಿ ಮಾಡುತ್ತಾರೆ. ಅದನ್ನು ನಂಬಿಕೊಂಡು ನಿರ್ಮಾಪಕರು ಸಿನಿಮಾ ಮಾಡುತ್ತಾರೆ. ಮೊದಲೇ ನಾವು ಸಿನಿಮಾ ಕೊಂಡುಕೊಳ್ಳಲ್ಲ ಎಂದು ಹೇಳಿಬಿಟ್ಟಿದ್ದರೆ ನಿರ್ಮಾಪಕರು ಸಿನಿಮಾ ಮಾಡ್ಬೇಕಾ? ಬೇಡ್ವಾ?" ಅಂತ ನಿರ್ಧರಿಸುತ್ತಿದ್ದರು"
"ಟಿವಿ, ಓಟಿಟಿ ಬಿಟ್ಟು ಬರೀ ಚಿತ್ರಮಂದಿರಗಳಲ್ಲಿ ಸಿನಿಮಾ ಕಲೆಕ್ಷನ್ ಎಂದು ಹೋದರೆ ಅಲ್ಲೂ ಸಮಸ್ಯೆಯಿದೆ. ಚಿತ್ರಮಂದಿರಗಳನ್ನು ಮುಚ್ಚುವಂತಾಗಿದೆ. ಸರಿಯಾಗಿ ದುರಸ್ತಿ ಮಾಡಲು ಆಗುತ್ತಿಲ್ಲ. ಇದೆಲ್ಲಾ ನಿರ್ಮಾಪಕರಿಗೆ ಆಗುವ ನಷ್ಟ. ಓಟಿಟಿ ಪ್ಲಾಟ್‌ಫಾರ್ಮ್ ಅವರು ಮೊದಲು ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ. ನೆಟ್‌ಫ್ಲಿಕ್ಸ್, ಅಮೇಜಾನ್ ಅವರು ಹೀಗೆ ಮಾಡ್ತಾರೆ. ಕೆಲ ಒಳ್ಳೆ ಸಿನಿಮಾ ತಗೊಂಡು ಬಳಿಕ ಮುಂದೆ ಬರ್ತಿಲ್ಲ. ಕನ್ನಡಕ್ಕೆ ಆದ್ಯತೆ ಕಮ್ಮಿ ಆಗ್ತಿದೆ. ಅದು ಒಂದು ರೀತಿ ಕನ್ನಡಿಗರಿಗೆ ಅವಮಾನ" ಎಂದು ವಿವರಿಸಿದ್ದಾರೆ.


Click it and Unblock the Notifications











