ಬಿಡುಗಡೆಯಾಗಿ ಕೇವಲ ಒಂದೇ ತಿಂಗಳಿಗೆ ಓಟಿಟಿಗೆ ಬಂತು ಸೂಪರ್ ಸ್ಟಾರ್ ಅಭಿನಯದ ಸಿನಿಮಾ..!
ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ.
ಮತ್ತೊಂದು ಕಡೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರರಂಗದವರು ಗೊಣಗುತ್ತಿರುತ್ತಾರೆ. ಚಿತ್ರಮಂದಿರದಲ್ಲಿ ಚಿತ್ರ ಸೋತ ನಂತರ ಪ್ರೇಕ್ಷಕರನ್ನೇ ನೇರವಾಗಿ ಹೊಣೆಯಾಗಿಸುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಬಿಡುಗಡೆಯಾದ ನಾಲ್ಕು ವಾರಕ್ಕೆ ಚಿಯಾನ್ ವಿಕ್ರಮ್ ಅಭಿನಯದ ವೀರ ಧೀರ ಸೂರನ್ ಭಾಗ 2 ಚಿತ್ರ ಓಟಿಟಿಗೆ ಬಂದಿದೆ.

ಹೌದು, ವೀರ ಧೀರ ಸೂರನ್ 2 ಕಳೆದ ಮಾರ್ಚ್ 27ರಂದು ತೆರೆಗೆ ಬಂದಿದ್ದ ಚಿತ್ರ. ವಿಕ್ರಮ್ ತುಂಬಾ ಭರವಸೆ ಇಟ್ಟುಕೊಂಡಿದ್ದ ಚಿತ್ರ ಇದು. ಹೀಗಾಗಿಯೇ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲೆಡೆ ಹೋಗಿ ಚಿತ್ರದ ಪ್ರಚಾರವನ್ನು ವಿಕ್ರಮ್ ಮಾಡಿದ್ದರು. ಬೆಂಗಳೂರಿಗೆ ಕೂಡ ಬಂದು ಚಿತ್ರ ನೋಡುವಂತೆ ಮನವಿಯನ್ನು ಮಾಡಿದ್ದರು. ಆದರೆ, ನಿರೀಕ್ಷೆಯ ಭಾರವನ್ನೊತ್ತು ಬಂದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ವಿಕ್ರಮ್ ಸಾಹಸ ಸನ್ನಿವೇಶಗಳು ಚೆನ್ನಾಗಿದ್ದರು ಕೂಡ ಪ್ರೇಕ್ಷಕರಿಗೆ ಚಿತ್ರ ಅದ್ಯಾಕೋ ಹಿಡಿಸಲಿಲ್ಲ. ದಿನಸಿ ಅಂಗಡಿ ಮಾಲೀಕ, ಅಪರಾಧ ಮತ್ತು ನಿಗೂಢ ಕಾರ್ಯಾಚರಣೆಗೆ ಪ್ರೇಕ್ಷಕರು ಜೈ ಎನ್ನಲಿಲ್ಲ.
ಇನ್ನು ಬಿಡುಗಡೆಗೆ ಮುನ್ನವೇ ಈ ಚಿತ್ರ ವಿವಾದಕ್ಕೆ ಸಿಲುಕಿತ್ತು. ಚಿತ್ರದ ಸ್ಯಾಟಲೈಟ್ ಹಕ್ಕು ಹೊಂದಿರುವ ಬಿ4ಯು ಮನರಂಜನಾ ವಾಹಿನಿ, ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ನಾಲ್ಕು ವಾರಗಳ ಕಾಲ ಚಿತ್ರವನ್ನು ಬಿಡುಗಡೆ ಮಾಡದಂತೆ ದೆಹಲಿ ಹೈಕೋರ್ಟ್ ತಡೆ ವಿಧಿಸಿತ್ತು. ಆ ನಂತರ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಈ ವಿಚಾರ ಕೇವಲ ಸದ್ದು ಮಾಡಿತ್ತಷ್ಟೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲಿಲ್ಲ.
ಇಂಥಾ ವೀರ ಧೀರ ಸೂರನ್ 2 ಚಿತ್ರದ ಹಕ್ಕನ್ನು ಅಮೆಜಾನ್ ಪ್ರೈಮ್ ಖರೀದಿ ಮಾಡಿದೆ. ಈ ಏಪ್ರಿಲ್ 24ರಂದು ಚಿತ್ರದ ಪ್ರಸಾರವನ್ನು ಶುರು ಮಾಡಲಿದೆ. ಈ ಕುರಿತು ಘೋಷಣೆಯನ್ನು ಮಾಡಿರುವ ಅಮೆಜಾನ್ ಪ್ರೈಮ್ ಒಂದು ರಾತ್ರಿ, ಯಾವುದೇ ನಿಯಮಗಳಿಲ್ಲ, ಬದುಕುಳಿಯುವುದು ಮಾತ್ರ, ಎಲ್ಲವನ್ನೂ ಬದಲಾಯಿಸುವ ರಾತ್ರಿ ಎಂದು ಬರೆದುಕೊಂಡಿದೆ.
ಏಪ್ರಿಲ್ 24 ರಂದು ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ವೀರ ಧೀರ ಸೂರನ್ 2 ಏಕಕಾಲಕ್ಕೆ ಸ್ಟ್ರೀಮ್ ಆಗಲಿದೆ. ಇನ್ನು ಚಿತ್ರ ಕೇವಲ ತಮಿಳಿನಲ್ಲಿ ಮಾತ್ರ ಇಲ್ಲ. ಬದಲಿಗೆ ಈ ಚಿತ್ರವನ್ನು ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡಕ್ಕೆ ಡಬ್ ಮಾಡಲಾಗಿದೆ.ಹೀಗಾಗಿ ಆಸಕ್ತ ಕನ್ನಡಿಗರು ವೀರ ಧೀರ ಸೂರನ್ 2 ಚಿತ್ರವನ್ನು ಮನೆಯಲ್ಲಿ ಕುಳಿತುಕೊಂಡು ಕನ್ನಡದಲ್ಲಿಯೇ ನೋಡಬಹುದು.
ಇನ್ನುಳಿದಂತೆ ಎಸ್ ಯು ಅರುಣ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಜೊತೆ ಎಸ್ ಜೆ ಸೂರ್ಯ, ದುಷಾರ ವಿಜಯನ್, ಸೂರಜ್ ವೆಂಜರಮೂಡು, ಪೃದ್ವಿ ರಾಜ್, ಮಾಲಾ ಪಾರ್ವತಿ, ಶ್ರೀಜಾ ರವಿ ಹೀಗೆ ಅನೇಕರು ಚಿತ್ರದಲ್ಲಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು ರಿಯಾ ಶಿಬು, ಶಿಬು ಥಮೀನ್ಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಒಟ್ನಲ್ಲಿ ಸದ್ಯ ಬಾಕ್ಸಾಫೀಸ್‌ನಲ್ಲಿ ಸೋತ ವೀರ ಧೀರ ಸೂರನ್ ಈ ಏಪ್ರಿಲ್ 24ರಂದು ಓಟಿಟಿಗೆ ಲಗ್ಗೆ ಇಡಲಿದೆ. ಬೆಳ್ಳಿ ಪರದೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದ ಈ ಚಿತ್ರ ಓಟಿಟಿಯಲ್ಲಿ ಮೋಡಿ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











