ಬಿಡುಗಡೆಯಾಗಿ 14 ದಿನ ಆಗಿಲ್ಲ, ಆಗಲೇ ಓಟಿಟಿಗೆ ಬಂದ ಕಾರ್ತಿಯ 'ವಾ ವಾಥಿಯಾರ್' ; ಕನ್ನಡದಲ್ಲೂ ನೋಡಬಹುದು
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರೆ ಅದೇ ದೊಡ್ಡ ಸಾಧನೆಯಾಗಿತ್ತು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳ ಹಾವಳಿ ಹೆಚ್ಚಾಗಿದೆ.
ಚಿತ್ರಮಂದಿರಗಳ ಅಳಿವು ಉಳಿವಿನ...ವಿಚಾರದಲ್ಲಿ ಆತಂಕ ಶುರುವಾಗಿದೆ. ಯಾಕೆಂದರೆ ಚಿತ್ರವೊಂದು ತೆರೆಗೆ ಬಂದು ಒಂದು ತಿಂಗಳು ಕೂಡ ಆಗಿರುವುದಿಲ್ಲ. ಆಗಲೇ ಓಟಿಟಿಗೆ ಆ ಚಿತ್ರ ಬಂದು ಬಿಡುತ್ತೆ. ಇದರಿಂದ ಪ್ರೇಕ್ಷಕ ಹೇಗಿದ್ದರೂ ತಿಂಗಳೊಳಗೆ ಫೋನ್ ಅಥವಾ ಟಿವಿಯಲ್ಲಿ ಸಿನಿಮಾ ಬಂದೇ ಬರುತ್ತದೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕು? ಎಂಬ ಯೋಚನೆ ಮಾಡುತ್ತಿದ್ದಾನೆ. ಚಿತ್ರಮಂದಿರಕ್ಕೆ ಹೋಗದೇ ಮನೆಯಲ್ಲಿಯೇ ಕಾಯುತ್ತಿದ್ದಾನೆ.

ಪ್ರೇಕ್ಷಕ ಮಹಾಪ್ರಭುವಿನ ಈ ''ವೇಯ್ಟಿಂಗ್ ಪಾಲಿಸಿ''ಯಿಂದಾಗಿ ಹಲವು ಚಿಕ್ಕ-ಪುಟ್ಟ ಚಿತ್ರಗಳು ನೆಲಕಚ್ಚುತ್ತಿವೆ. ದೊಡ್ಡ ಸ್ಟಾರ್‌ಗಳ ಚಿತ್ರಗಳು ಕೂಡ ಮಕಾಡೆ ಮಲಗುತ್ತಿವೆ.
ಇನ್ನು ಚಿತ್ರತಂಡಗಳ ಮತ್ತು ನಿರ್ಮಾಪಕರ ಧೋರಣೆ ಕೂಡ ಹಾಗೇ ಇದೆ. ತೆರೆಗೆ ಬಂದು ತಿಂಗಳ ಒಳಗೆ ಓಟಿಟಿಗೆ ಚಿತ್ರ ಬಂದರೆ ಆದಾಯಕ್ಕೆ ಧಕ್ಕೆ ಆಗುತ್ತೆ ಎಂದು ವಾದ ಮಾಡುವ ನಿರ್ಮಾಪಕರೇ ತಮ್ಮ ಚಿತ್ರ ಅಪ್ಪಿ-ತಪ್ಪಿ ಫ್ಲಾಪ್ ಆದರೆ ಮೊದಲು ಓಡಿ ಹೋಗಿ ಇದೇ ಓಟಿಟಿಯವರ ಹತ್ತಿರ ವ್ಯಾಪಾರ ಕುದುರಿಸಿಕೊಳ್ಳುತ್ತಾರೆ. ತಮಗಾದ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳಲು ತಿಂಗಳು ತುಂಬುವ ಮುನ್ನವೇ ಓಟಿಟಿಗೆ ತಮ್ಮ ಚಿತ್ರವನ್ನು ನೀಡುತ್ತಾರೆ. ಇದಕ್ಕೆ ''ವಾ ವಾಥಿಯಾರ್'' ಸದ್ಯದ ಉದಾಹರಣೆ.
ಹೌದು, ''ವಾ ವಾಥಿಯಾರ್''.. ಪಕ್ಕದ ಮನೆಯ ಸ್ಟಾರ್ ಕಾರ್ತಿ ಅಭಿನಯದ ಚಿತ್ರ. ಎರಡು ವಾರದ ಹಿಂದೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಂದ ಚಿತ್ರ ಇದು. ಅಪಾರವಾದ ನಿರೀಕ್ಷೆಗಳನ್ನೊತ್ತು ಬಂದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಪವಾಡ ಮಾಡುವ ವಿಶ್ವಾಸ ಇತ್ತು. ಆದರೆ, ಒಂದು ಕಡೆ ತಮಿಳಿನದ್ದೇ ಚಿತ್ರ ''ಪರಾಶಕ್ತಿ''... ಮತ್ತೊಂದು ಕಡೆ ಚಿರಂಜೀವಿ ಅಭಿನಯದ ''ಮನ ಶಂಕರ ವರ ಪ್ರಸಾದ ಗಾರು''..ಇನ್ನೊಂದು ಕಡೆ ''ದಿ ರಾಜಾ ಸಾಬ್''.. ಈ ಎಲ್ಲ ಚಿತ್ರಗಳ ಅಬ್ಬರದ ನಡುವೆ ''ವಾ ವಾಥಿಯಾರ್'' ಹೇಳ ಹೆಸರಿಲ್ಲದಂತಾಯ್ತು.
ನಿಜಾ.. ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವಂತೆ ಮೊದಲ ದಿನ ₹ 1.65 ಕೋಟಿಯನ್ನು ದೋಚಿದ್ದ ಈ ಚಿತ್ರ ಎರಡನೇ ದಿನ ₹ 2.35 ಕೋಟಿಯನ್ನು ಗಳಿಸಿತ್ತು. ಭರವಸೆಯನ್ನು ಮೂಡಿಸಿತ್ತು. ಆದರೆ ಆ ನಂತರ ಈ ಭರವಸೆ ಹುಸಿಯಾಯ್ತು. ಅಂದಾಜು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಕೇವಲ 10 ಕೋಟಿಯನ್ನು ಮಾತ್ರ ಗಳಿಸಿ ಚಿತ್ರಮಂದಿರಗಳಿಂದ ಎತ್ತಂಗಡಿ ಆಯ್ತು.

ಈ ಹಿನ್ನೆಲೆ ನಾಲ್ಕು ವಾರಗಳ ನಂತರವಷ್ಟೇ ಓಟಿಟಿಯಲ್ಲಿ ಬಿಡುಗಡೆ ಎಂಬ ನಿಯಮವನ್ನು ಗಾಳಿಗೆ ತೂರಿದ ನಿರ್ಮಾಪಕರು ಕೇವಲ ಹದಿನಾಲ್ಕೇ ದಿನಕ್ಕೆ ತಮ್ಮ ಚಿತ್ರವನ್ನು ಓಟಿಟಿಯ ಮಡಿಲಿಗೆ ಹಾಕಿದ್ದಾರೆ. ಓಟಿಟಿಯವರು ನೀಡಿದಷ್ಟು ದುಡ್ಡು ತೆಗೆದುಕೊಂಡು ಕೈ ತೊಳೆದುಕೊಂಡಿದ್ದಾರೆ.
ಸದ್ಯ ಈ ಚಿತ್ರವನ್ನು ಇಷ್ಟು ಬೇಗ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದಲ್ಲಿಯೇ ಹಲವರು ತಮ್ಮ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದ್ದಾರೆ. ಹೀಗಾದರೆ ಚಿತ್ರಮಂದಿರದ ಕಥೆ ಏನು..? ಪ್ರೇಕ್ಷಕರು ಚಿತ್ರಮಂದಿರಕ್ಕೆ ಯಾಕೆ ಬರುತ್ತಾರೆ..? ಎನ್ನುವ ವಾದವನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಎಂಜಿಆರ್ ತತ್ವ ಮತ್ತು ಆದರ್ಶಗಳನ್ನು ಪಾಲಿಸುವ ರಾಮೇಶ್ವರನ್ ಎಂಬ ವ್ಯಕ್ತಿಯ ಸುತ್ತ ಸುತ್ತುವ ಈ ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಲನ್ ಕುಮಾರಸಾಮಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಸಂತೋಷ್ ನಾರಾಯಣ್ ಸಂಗೀತ ನಿರ್ದೇಶನ ಇದೆ.ಇಂದಿನಿಂದಲೇ (ಜನವರಿ 28) ''ಅಮೆಜಾನ್ ಪ್ರೈಮ್''ನಲ್ಲಿ ಈ ಚಿತ್ರ ಪ್ರಸಾರವಾಗುತ್ತಿದ್ದು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಈ ಚಿತ್ರವನ್ನು ನೋಡಬಹುದು. ಆಸಕ್ತ ಕನ್ನಡದ ಕಲಾಪ್ರಿಯರು ಕನ್ನಡದಲ್ಲಿ ಕೂಡ ''ವಾ ವಾಥಿಯಾರ್'' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.
a new superhero in a new avatar is coming to meet you 😎🔥#VaaVaathiyaarOnPrime, New Movie, Jan 28@Karthi_Offl @IamKrithiShetty #NalanKumarasamy @Music_Santhosh@VaaVaathiyaar @StudioGreen2 @gnanavelraja007 #Rajkiran #Sathyaraj #Anandaraj @GMSundar_ #Karunakaran… pic.twitter.com/jaweyUGM9c
— prime video IN (@PrimeVideoIN) January 27, 2026


Click it and Unblock the Notifications











