ಟಿವಿ ಬದಲು ಒಟಿಟಿಯಲ್ಲಿ ಪ್ರಸಾರ ಆಗುತ್ತಿರುವುದೇಕೆ ಬಿಗ್‌ಬಾಸ್? ಕಾರಣ ವಿವರಿಸಿದ ಪರಮೇಶ್ವರ್ ಗುಂಡ್ಕಲ್
ಬಿಗ್‌ಬಾಸ್ ಹೊಸ ಸೀಸನ್ ಪ್ರಾರಂಭವಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ ಬಿಗ್‌ಬಾಸ್ ಒಟಿಟಿಯಲ್ಲಿ ಪ್ರಾರಂಭವಾಗುತ್ತಿದೆ. ಅದೂ 24*7 ಮಾದರಿಯಲ್ಲಿ!
ಬಿಗ್‌ಬಾಸ್ ರಿಯಾಲಿಟಿ ಶೋ, ವೂಟ್ ಒಟಿಟಿಯಲ್ಲಿ ದಿನದ 24 ಗಂಟೆಯೂ ಲೈವ್ ಪ್ರಸಾರವಾಗಲಿದೆ. ದಿನದ 24 ಗಂಟೆಯೂ ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಮನೆಯ ಒಳಗೆ ಏನು ಮಾಡುತ್ತಿದ್ದಾರೆ ಎಂಬುದರ ಆ ಕ್ಷಣದ ಮಾಹಿತಿ ಲಭ್ಯವಾಗಲಿದೆ.
ಬಿಗ್‌ಬಾಸ್ ಒಟಿಟಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬಿಗ್‌ಬಾಸ್ ಒಟಿಟಿಯಲ್ಲಿ ಅದೂ 27*7 ಲೈವ್ ಪ್ರಸಾರವಾಗುತ್ತಿದೆ. ಟಿವಿಯಲ್ಲಿ ಉತ್ತಮವಾಗಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್ ಅನ್ನು ಒಟಿಟಿಗೆ ತೆಗೆದುಕೊಂಡು ಬರಲು ಕಾರಣವೇನು ಎಂಬುದನ್ನು, ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ವಿವರಿಸಿದ್ದಾರೆ.
''ಬಿಗ್‌ಬಾಸ್ ಶೋ ನಲ್ಲಿ ಜನ ನೋಡುವುದು ವ್ಯಕ್ತಿತ್ವವನ್ನು. ಅದೇ ರೀತಿಯ ಮನೆ, ಅಷ್ಟೇ ಕ್ಯಾಮೆರಾ ಎಲ್ಲವೂ ಇರುತ್ತದೆ. ಬಿಗ್‌ಬಾಸ್ ಮನೆಯ ಒಳಗೆ ನಡೆಯುವ ವಿಷಯವನ್ನು ಸೆರೆ ಹಿಡಿವ ತಂತ್ರಜ್ಞದಲ್ಲಿ ಆಧುನಿಕತೆ ಬಂದಿರಬಹುದು. ಆದರೆ ಒಟ್ಟಾರೆ ಬಿಗ್‌ಬಾಸ್ ಎಂದರೆ ವ್ಯಕ್ತಿತ್ವ ಮತ್ತು ಆ ಮನೆಯಲ್ಲಿ ಒಂದೆಡೆ ಸೇರುವ ಭಿನ್ನ ಭಿನ್ನ ಪಾತ್ರಗಳು. ಹದಿನಾರು ಜನ ಆ ಮನೆಯಲ್ಲಿ ಇಂತಿಷ್ಟು ಹೇಗೆ ಒಬ್ಬರೊಟ್ಟಿಗೊಬ್ಬರು ಬದುಕುತ್ತಾರೆ ಎಂದು ನೋಡುವ ಕುತೂಹಲವೇ ಬಿಗ್‌ಬಾಸ್ ಅನ್ನು ವೀಕ್ಷಕರ ಮೆಚ್ಚಿನ ಶೋ ಆಗಿಸಿದೆ'' ಎಂದರು ಪರಮೇಶ್ವರ್ ಗುಂಡ್ಕಲ್.

ವ್ಯಕ್ತಿತ್ವಗಳು, ವ್ಯಕ್ತಿಗಳೇ ಬಿಗ್‌ಬಾಸ್‌ನ ಆತ್ಮ
''ವ್ಯಕ್ತಿತ್ವಗಳನ್ನು ಹೇಗೆ ಪ್ರೇಕ್ಷಕರು ಗುರುತಿಸುತ್ತಾರೆ? ಒಬ್ಬ ವ್ಯಕ್ತಿ, ದೊಡ್ಡ, ಮಧ್ಯಮ ಹಾಗೂ ಸಣ್ಣ ವಿಷಯಗಳಿಗೆ ಅವನು ಪ್ರತಿಕ್ರಿಯಿಸುವ ರೀತಿಯ ಆಧಾರದ ಮೇಲೆ ಅವನ ವ್ಯಕ್ತಿತ್ವ ಅಳೆಯಬಹುದು. ಆದರೆ ಟಿವಿಯಲ್ಲಿ, ಆ ದಿನ ನಡೆದಿರುವ ದೊಡ್ಡ ವಿಷಯಗಳು, ಮಧ್ಯಮ ವಿಷಯಗಳಷ್ಟೆ ಎಪಿಸೋಡ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಸಣ್ಣ ಪುಟ್ಟ ವಿಷಯಗಳನ್ನು ಬಿಟ್ಟುಬಿಟ್ಟಿರುತ್ತೇವೆ. ಅಸಲಿಗೆ ಈ ರೀತಿಯ ಸಣ್ಣ ಪುಟ್ಟ ವಿಷಯಗಳೇ ಎಷ್ಟೋ ಬಾರಿ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧಾರ ಮಾಡುತ್ತವೆ'' ಎಂದು ವಿಶ್ಲೇಷಿಸಿದ್ದಾರೆ ಗುಂಡ್ಕಲ್.

''ಬಿಗ್‌ಬಾಸ್ ಒಂದು ಪರಿಪೂರ್ಣ ಶೋ ಆಗಲಿದೆ''
''ಒಬ್ಬ ವ್ಯಕ್ತಿ ಸಾಮಾನ್ಯ ದಿನಗಳಲ್ಲಿ ಹೇಗಿರುತ್ತಾನೆ. ಆ ದಿನದ ತೀರ ಬೋರಿಂಗ್ ಸಮಯದಲ್ಲಿಯೂ ಸಹ ಅವನು ಹೇಗೆ ವರ್ತಿಸುತ್ತಿದ್ದಾನೆ. ದೊಡ್ಡ ವಿಷಯಗಳ ಜೊತೆಗೆ ಸಣ್ಣ-ಪುಟ್ಟ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ಅವನ ವ್ಯಕ್ತಿತ್ವ ಅಳೆಯಲು ಮುಖ್ಯವಾಗುತ್ತದೆ. ಟಿವಿಯಲ್ಲಿ ಈ ಅವಕಾಶ ಇರಲಿಲ್ಲ. ಆದರೆ ಒಟಿಟಿ ಕಾರಣದಿಂದ ಈ ಬಾರಿ ಅವಕಾಶ ಇದೆ. ಒಟಿಟಿಯಲ್ಲಿ ದಿನದ 24 ಗಂಟೆಯೂ ಲೈವ್ ಇರುವ ಕಾರಣ ಪ್ರತಿಯೊಬ್ಬ ವ್ಯಕ್ತಿ ದಿನಪೂರ್ತಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ಗುರುತಿಸಬಹುದಾಗಿದೆ. ಒಂದು ರೀತಿಯಲ್ಲಿ ಈ ವೂಟ್ ಶೋ ಮೂಲಕ ಬಿಗ್‌ಬಾಸ್ ಒಂದು ಪರಿಪೂರ್ಣ ಶೋ ಆಗಲಿದೆ'' ಎಂದಿದ್ದಾರೆ ಪರಮೇಶ್ವರ್.

ನಾನು ಸಹ ಅಡಿಕ್ಟ್ ಆಗಿದ್ದೆ: ಪರಮೇಶ್ವರ್
''ಬಿಗ್‌ಬಾಸ್ ಸೆಟ್‌ನ ಹೊರಗೆ ಒಂದು ಸೆಟಪ್ ಇದೆ. ಅಲ್ಲಿ ಆ ದಿನದ ಪೂರ್ಣ ಫುಟೇಜು ಲಭ್ಯವಿರುತ್ತದೆ. ಅಲ್ಲಿ ನಾವು ಕೆಲಸ ಮಾಡಿ ಆ ದಿನದ ಎಪಿಸೋಡ್ ತಯಾರಿಸುತ್ತಿದ್ದೆವು. ಅಲ್ಲಿ ಒಮ್ಮೊಮ್ಮೆ ನಮ್ಮ ಕೆಲಸ ಬಿಟ್ಟು ಗಂಟೆಗಟ್ಟಲೆ ಮನೆಯಲ್ಲಿ ನಡೆಯುವುದನ್ನು ನೋಡಿಕೊಂಡು ಇರುತ್ತಿದ್ದೆವು. ಆಗಲೇ ನನಗೆ ಅನ್ನಿಸುತ್ತಿದ್ದು, ಇದು ಎಷ್ಟು ಅಡಿಕ್ಟಿವ್, ಎಷ್ಟು ಫ್ಯಾಷನೇಟಿಂಗ್ ಎಂದು. ಈ ಖುಷಿ ಇಲ್ಲಿ ಕೆಲಸ ಮಾಡುವವರಿಗೆ ಮಾತ್ರವಲ್ಲ ರಾಜ್ಯದ ಎಲ್ಲರಿಗೂ ಧಕ್ಕಬೇಕು ಎಂದುಕೊಳ್ಳುತ್ತಿದ್ದೆ. ಅದು ವೂಟ್‌ನಿಂದ ಸಾಧ್ಯವಾಗುತ್ತಿದೆ'' ಎಂದರು ಪರಮೇಶ್ವರ್.

ಆಗಸ್ಟ್ 06 ರಿಂದ ಪ್ರಸಾರ
ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಎಕ್ಸ್‌ಕ್ಲೂಸಿವ್ ಆಗಿ ವೂಟ್‌ನಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 06 ರಂದು ಏಳು ಗಂಟೆಗೆ ಪ್ರಸಾರ ಆರಂಭಿಸುವ ಈ ಶೋ ಅಂದಿನಿಂದ ಮುಂದಿನ 42 ದಿನಗಳ ವರೆಗೆ ಸತತವಾಗಿ ದಿನದ 24 ಗಂಟೆಯೂ ಲೈವ್ ನಲ್ಲಿ ಪ್ರಸಾರವಾಗಲಿದೆ. ಈ ವೂಟ್‌ನ ಬಿಗ್‌ಬಾಸ್ ಮುಗಿದ ಬಳಿಕ ಟಿವಿ ಬಿಗ್‌ಬಾಸ್ ಪ್ರಾರಂಭವಾಗಲಿದೆ.


Click it and Unblock the Notifications











