'OG' ಪವನ್‌ಗೆ ಲೀಕಾಸುರರ ಕಾಟ; ಓಟಿಟಿಯಲ್ಲಿ ಎಲ್ಲಿ, ಯಾವಾಗ ಸಿನಿಮಾ ಸ್ಟ್ರೀಮಿಂಗ್?
ಡಿವಿವಿ ದಾನಯ್ಯ ನಿರ್ಮಾಣದ 'OG' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪೇಯ್ಡ್ ಪ್ರೀಮಿಯರ್ ಶೋಗಳು ಹಾಗೂ ಫಸ್ಟ್ ಡೇ ಕಲೆಕ್ಷನ್ ಜೋರಾಗಿದೆ. ಮತ್ತೊಂದು ಕಡೆ ಚಿತ್ರಕ್ಕೆ ಲೀಕಾಸುರರ ಕಾಟವೂ ಶುರುವಾಗಿದೆ. ಚಿತ್ರವನ್ನು ಪೈರಸಿ ಮಾಡಿ ಆನ್‌ಲೈನ್‌ನಲ್ಲಿ ಶೇರ್ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಚಿತ್ರಕ್ಕೆ ಕಂಟಕವಾಗಿ ಪರಿಣಮಿಸಿದೆ.
ದೊಡ್ಡ ಸಿನಿಮಾಗಳನ್ನು ಬೆಳ್ಳಿ ಪರದೆ ಮೇಲೆ ನೋಡಬೇಕು ಎಂದು ಸಿನಿರಸಿಕರು ಬಯಸುತ್ತಾರೆ. ಆದರೆ ಇಂಟರ್‌ನೆಟ್ ಜಮಾನದಲ್ಲಿ ಎಲ್ಲವೂ ಬೆರಳ ತುದಿಗೆ ಬರ್ತಿದೆ. ಬಿಡುಗಡೆಯಾಗದೇ ಇರುವ ಸಿನಿಮಾಗಳನ್ನೇ ಲೀಕ್ ಮಾಡುತ್ತಿದ್ದಾರೆ. ಇನ್ನು ತೆರೆಗೆ ಬಂದ ಸಿನಿಮಾಗಳ ಕಥೆ ಕೇಳುವುದೇ ಬೇಡ. ದೇಶವಿದೇಶಗಳಲ್ಲಿ ಸಿನಿಮಾ ರಿಲೀಸ್ ಆಗುವುದರಿಂದ ಕ್ಯಾಮರಾಗಳಲ್ಲಿ ಚಿತ್ರೀಕರಿಸಿ ಪೈರಸಿ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದೀಗ 'OG' ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿದೆ.

ಇವತ್ತಿನ ಕಾಲದಲ್ಲಿ ಅಷ್ಟು ಸುಲಭವಾಗಿ ಪೈರಸಿ ತಡೆಯೋಕೆ ಸಾಧ್ಯವಿಲ್ಲ ಎಂದು ಚಿತ್ರರಂಗದವರೇ ಹೇಳುತ್ತಾರೆ. ಒಂದು ಪೈರಸಿ ಲಿಂಕ್ ಡಿಲೀಟ್ ಆಗುತ್ತಿದ್ದಂತೆ ಮತ್ತೊಂದು ಕಡೆ ಅಪ್‌ಲೋಡ್ ಮಾಡುತ್ತಾರೆ. ಒಂದು ಪೈರಸಿ ವೆಬ್‌ಸೈಟ್ ಡಿಲೀಟ್ ಮಾಡಿದ್ರೆ, ಮತ್ತೊಂದು ಹೊಸ ವೆಬ್‌ಸೈಟ್ ಕ್ರಿಯೇಟ್ ಆಗುತ್ತದೆ. ಹಾಗಾಗಿ ಅದನ್ನು ತಡೆಯುವುದು ಅಷ್ಟು ಸುಲಭ ಅಲ್ಲ. ಆದರೆ ಪ್ರೇಕ್ಷಕರು ಪೈರಸಿ ಕಾಪಿ ನೋಡಿ ಪ್ರೋತ್ಸಾಹಿಸದೇ ಚಿತ್ರಮಂದಿರಗಳಲ್ಲೇ ಬಂದು ಸಿನಿಮಾ ನೋಡಬೇಕು. ಆಗ ಮಾತ್ರ ಚಿತ್ರರಂಗಕ್ಕೆ ಉಳಿಗಾಲ.
ಇನ್ನು ದೊಡ್ಡ ದೊಡ್ಡ ಸಿನಿಮಾಗಳನ್ನು 20 ದಿನಕ್ಕೆ ಓಟಿಟಿಗೆ ತರಲಾಗುತ್ತಿದೆ. ಪೈರಸಿ ಕಾಟವೂ ಅದಕ್ಕೆ ಪ್ರಮುಖ ಕಾರಣ. ಸಿನಿಮಾ ಚೆನ್ನಾಗಿದ್ಯಾ? ಚೆನ್ನಾಗಿಲ್ವಾ? ಚಿತ್ರಮಂದಿರಕ್ಕೆ ಹೋಗಿ ನೋಡ್ಬೇಕಾ? ಬೇಡ್ವಾ? ಎಂದು ನಿರ್ಧರಿಸುವ ವೇಳೆಗೆ ಪೈರಸಿ ಲೀಕ್ ಆಗುತ್ತಿದೆ. ಹಾಗಾಗಿ ತಡ ಮಾಡಿದರೆ ನಮಗೂ ನಷ್ಟ ಎಂದು ಓಟಿಟಿ ಸಂಸ್ಥೆಗಳು ಪಟ್ಟು ಹಿಡಿಯುತ್ತಿವೆ. 7 ವಾರಗಳ ನಂತರ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಎನ್ನುವ ನಿಯಮ ಈಗ ಯಾರೂ ಫಾಲೋ ಮಾಡ್ತಿಲ್ಲ. 'ಕೂಲಿ' ಸೇರಿದಂತೆ ದೊಡ್ಡ ಸಿನಿಮಾಗಲೇ 25 ದಿನಕ್ಕೆ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ.

ಅಂದಹಾಗೆ 'OG' ಚಿತ್ರದ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿದೆ. ಅಂದಾಜು 90 ಕೋಟಿ ರೂ.ಗೆ ರೈಟ್ಸ್ ಸೇಲ್ ಆಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಅಕ್ಟೋಬರ್ ಕೊನೆವಾರ ಅಥವಾ ನವೆಂಬರ್ ಮೊದಲ ವಾರವೇ ಸಿನಿಮಾ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆಯಿದೆ. ಅದಕ್ಕಿಂತ ಮುನ್ನ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುವ ಚರ್ಚೆ ನಡೀತಿದೆ.
ಇನ್ನು ಪೇಯ್ಡ್ ಪ್ರೇಮಿಯರ್ ಶೋಗಳು ಹಾಗೂ ಫಸ್ಟ್ ಡೇ ಕಲೆಕ್ಷನ್ ಸೇರಿ 'OG' ಸಿನಿಮಾ ಭಾರತದಲ್ಲೇ 90 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಬರಬೇಕಿದೆ. ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ಕೆಲ ನ್ಯೂನ್ಯತೆಗಳ ನಡುವೆಯೂ ಸಿನಿಮಾ ಮಾಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಎಲಿವೇಷನ್ ಸೀನ್ಸ್ ನೋಡಿ ಜನಸೇನಾನಿಗಳು ದಿಲ್‌ಖುಷ್ ಆಗಿದ್ದಾರೆ.
ಪ್ರಭಾಸ್ ನಟನೆಯ 'ಸಾಹೋ' ಹಾಗೂ 'OG' ಚಿತ್ರದ ಕಥೆಯನ್ನು ಸುಜಿತ್ ಲಿಂಕ್ ಮಾಡಿದ್ದಾರೆ. ಹಾಗಾಗಿ ಮುಂದೆ ಪ್ರಭಾಸ್ ಹಾಗೂ ಪವನ್ ಒಂದೇ ಚಿತ್ರದಲ್ಲಿ ನಟಿಸುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಈ ಬಗ್ಗೆ ಎಕ್ಸೈಟ್ ಆಗಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಸೇರಿ ಕೆಲ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಂದಾಜು 200 ಕೋಟಿ ರೂ. ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











