Bro: ಬಾಕ್ಸಾಫೀಸ್‌ನಲ್ಲಿ ಎದ್ದು ಬಿದ್ದ 'ಬ್ರೋ' ಓಟಿಟಿ ಎಂಟ್ರಿ ಡೇಟ್ ಫಿಕ್ಸ್.. ಪವನ್ ಸಿನಿಮಾ ಕನ್ನಡದಲ್ಲೂ ರಿಲೀಸ್
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ 'ಬ್ರೋ' ದಿ ಅವತಾರ್ ಸಿನಿಮಾ ಶೀಘ್ರದಲ್ಲೇ ಓಟಿಟಿಗೆ ಬರ್ತಿದೆ. ಜುಲೈ 28ಕ್ಕೆ ರಿಲೀಸ್ ಆಗಿದ್ದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ತಮಿಳಿನ 'ವಿನೋದಯ ಸಿತಂ' ರೀಮೆಕ್ ಆಗಿದ್ದ 'ಬ್ರೋ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.
ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದ್ದ ' ಬ್ರೋ' ಬಳಿಕ ಮುಗ್ಗಿರಿಸಿತ್ತು. ಮತ್ತೆ ಮೇಲೇಳಲೇ ಇಲ್ಲ. ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗೆ ಸೋದರಳಿಯ ಸಾಯಿ ಧರಮ್ ತೇಜ್ ಕೂಡ ನಟಿಸಿದ್ದರು. ಬಾಲಿವುಡ್‌ನ 'ಓಮೈ ಗಾಡ್' ಸಿನಿಮಾ ನೆನಪಿಸುವ ಕತೆ ಚಿತ್ರದಲ್ಲಿತ್ತು. ತಮಿಳಿನ ಸೀದಾ ಸಾದಾ ಸಿನಿಮಾವನ್ನು ಒಂಷ್ಟು ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ತೆಲುಗಿನಲ್ಲಿ ಕಟ್ಟಿಕೊಡಲಾಗಿತ್ತು.

ತಮಿಳಿನಲ್ಲಿ 'ವಿನೋದಯ ಸಿತಂ' ಸಿನಿಮಾ ನಿರ್ದೇಶಿಸಿ ನಟಿಸಿದ್ದ ಸಮುದ್ರ ಖನಿ ತೆಲುಗಿನಲ್ಲಿ ಆಕ್ಷನ್ ಕಟ್ ಹೇಳಿದ್ದರು. ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಜೀ ಸ್ಟುಡಿಯೋಸ್ ಸಂಸ್ಥೆಗಳು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದವು. ದಿನಕ್ಕೆ 2 ಕೋಟಿ ರೂ. ಸಂಭಾವನೆಯಂತೆ 25 ದಿನಗಳ ಕಾಲ ಪವನ್ ಕಲ್ಯಾಣ್ ಈ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದರು.
ಆಗಸ್ಟ್ 25ರಂದು ನೆಟ್‌ಫ್ಲಿಕ್ಸ್‌ನಲ್ಲಿ 'ಬ್ರೋ' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ವಿಶೇಷ ಅಂದ್ರೆ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ತೆಲುಗು ಜೊತೆಗೆ ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ಸಿನಿಮಾ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸಿಗಲಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್ ಕೊಂಡುಕೊಳ್ಳುವುದಿಲ್ಲ. ಆದರೆ ನಿಧಾನವಾಗಿ ದೊಡ್ಡ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡುತ್ತಿವೆ. ರೆಸ್ಪಾನ್ಸ್ ನೋಡಿಕೊಂಡು ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳುವ ಸಾಧ್ಯತೆಯಿದೆ.
ಕುಟುಂಬದ ಜವಾಬ್ದಾರಿ ಹೆಗಲೇರಿಸಿಕೊಂಡ ನಾಯಕ ಕಾಲದ ಜೊತೆ ಹೋರಾಟ ಮಾಡುತ್ತಾ ಬದುಕುತ್ತಿರುತ್ತಾನೆ. ಯಾರಿಗೂ ಸಮಯ ಕೊಡದೇ ಸದಾ ಕೆಲಸ, ಕೆಲಸ ಎಂದು ಓಡುತ್ತಿರುತ್ತಾನೆ. ಹೀಗಿರುವಾಗ ಹಠಾತ್ತನೆ ಆತ ಅಪಘಾತದಲ್ಲಿ ಜೀವ ಚೆಲ್ಲುತ್ತಾನೆ. ಆದರೆ ಆ ಕಾಲವೇ ಅವನಿಗೆ 90 ದಿನಗಳ ಹೆಚ್ಚಿನ ಆಯಸ್ಸು ನೀಡಿದರೇ ಏನಾಗುತ್ತದೆ? ಅನ್ನೋದು 'ಬ್ರೋ' ಸಿನಿಮಾ ಕತೆ.
ಕಾಲದ ಪ್ರತಿರೂಪವಾಗಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಈ ಹಿಂದೆ 'ಓ ಮೈಗಾಡ್' ರೀಮೆಕ್ 'ಗೋಪಾಲ ಗೋಪಾಲ' ಚಿತ್ರದಲ್ಲೂ ಇಂತದ್ದೇ ಪಾತ್ರದಲ್ಲಿ ಪವರ್ ಸ್ಟಾರ್ ಮಿಂಚಿದ್ದರು. ರಾಜಕೀಯರಂಗದಲ್ಲೂ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಹಾಗಾಗಿ ಪವನ್ ಕಾಲ್‌ಶೀಟ್‌ಗೆ ಭಾರೀ ಡಿಮ್ಯಾಂಡ್ ಇದೆ. ಡಿಮ್ಯಾಂಡ್‌ಗೆ ತಕ್ಕಂತೆ ಪವರ್ ಸ್ಟಾರ್ ಸಂಭಾವನೆ ಕೇಳುತ್ತಿದ್ದಾರೆ.
ಭಾರೀ ನಿರೀಕ್ಷೆ ಮೂಡಿಸಿದ್ದ 'ಬ್ರೋ' ಸಿನಿಮಾ ಮುಗ್ಗರಿಸಿದೆ. ಸದ್ಯ 'ಉಸ್ತಾದ್ ಭಗತ್ ಸಿಂಗ್', 'ಹರಿಹರ ವೀರಮಲ್ಲು' ಹಾಗೂ 'OG' ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ಬಣ್ಣ ಹಚ್ಚಿದ್ದಾರೆ. ಮುಂದಿನ ಆಂಧ್ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜನಸೇನಾನಿ ಪಕ್ಷ ಸಂಘಟನೆಯನ್ನು ಮುಂದುವರೆಸಿದ್ದಾರೆ.
'ಬ್ರೋ' ಚಿತ್ರಕ್ಕಾಗಿ ದಿನವೊಂದಕ್ಕೆ 2 ಕೋಟಿ ರೂ. ಸಂಭಾವನೆ ಪಡೆದಿದ್ದನ್ನು ಪವನ್ ಬಹಿರಂಗವಾಗಿ ಘೋಷಿಸಿದ್ದರು. ಆದರೆ ಅದಕ್ಕಿಂತಲೂ ಹೆಚ್ಚು ಸಂಭಾವನೆ ಸಿಕ್ಕಿದೆ ಎನ್ನುವುದು ಕೆಲವರ ವಾದ. 'ಬ್ರೋ' ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕತೆ, ಸಂಭಾಷಣೆ ಬರೆದಿದ್ದರು. ಎಸ್. ತಮನ್ ಸಂಗೀತ ನೀಡಿದ್ದರು. ಆದರೆ ಯಾವುದು ಕೂಡ ಪ್ರಯೋಜನವಾಗಿರಲಿಲ್ಲ.
ಓಟಿಟಿಗೆ ಇದು ಹೇಳಿಮಾಡಿಸಿದ ಸಿನಿಮಾ ಅನ್ನೋದು ಕೆಲವರ ವಾದ. ಅಭಿಮಾನಿಗಳ ಕೇಳುಚ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಫ್ಯಾಮಿಲಿ ಎಮೋಷನ್ ಚಿತ್ರದಲ್ಲಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಭಾರೀ ಮೊತ್ತವನ್ನು ನೀಡಿ ರೈಟ್ಸ್ ಖರೀದಿಸಿದೆ. ಮುಂದಿನ ವಾರವೇ ಸಿನಿಮಾ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ. ಇದನ್ನು ಸ್ವತಃ ನೆಟ್‌ಫ್ಲಿಕ್ಸ್ ಸಂಸ್ಥೆ ಘೋಷಿಸಿದೆ.


Click it and Unblock the Notifications











