Hari Hara Veera Mallu OTT: ದಿಢೀರನೆ ಓಟಿಟಿಗೆ ಬಂದ 'ಹರಿಹರ ವೀರಮಲ್ಲು'; ಕನ್ನಡದಲ್ಲೇ ನೋಡಿ
ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಓಟಿಟಿಗೆ ಬಂದಿದೆ. ಮಧ್ಯರಾತ್ರಿ(ಆಗಸ್ಟ್ 20)ಯಿಂದಲೇ ಸಿನಿಮಾ ಸ್ಟ್ರೀಮಿಂಗ್ ಆರಂಭವಾಗಿದೆ. ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಕಥಾಹಂದರ ಸಿನಿಮಾ ಜುಲೈ 24ರಂದು ತೆರೆಗೆ ಬಂದಿತ್ತು. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಭಾರೀ ಓಪನಿಂಗ್ ಪಡೆದಿದ್ದ 'ಹರಿಹರ ವೀರಮಲ್ಲು' ಸಿನಿಮಾ 2ನೇ ದಿನವೇ ಸೋಲುಂಡಿತ್ತು.
ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರದ ಡಿಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದು ಉನ್ನತ ಸ್ಥಾನಕ್ಕೇರಿದ ಬಳಿಕ ಬಿಡುಗಡೆಯಾದ ಮೊದಲ ಸಿನಿಮಾ ಇದು. 5 ವರ್ಷಗಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕುಂಟುತ್ತಲೇ ಇತ್ತು. ಪದೇ ಪದೇ ಸಿನಿಮಾ ಬಿಡುಗಡೆ ದಿನಾಂಕ ಬದಲಾಗಿತ್ತು. ಅಂತಿಮವಾಗಿ 4 ದಿನಗಳ ಚಿತ್ರೀಕರಣ ಬಾಕಿಯಿತ್ತು. ಇತ್ತೀಚೆಗೆ ಶೂಟಿಂಗ್‌ನಲ್ಲಿ ಪವನ್ ಭಾಗಿ ಆಗಿದ್ದರು. ಅಂತೂ ಇಂತೂ ಸಿನಿಮಾ ತೆರೆಗೆ ಬಂದಿತ್ತು.

ಪವನ್ ಈಗಾಗಲೇ ರಾಜಕೀಯರಂಗದಲ್ಲಿ ಸಕ್ರಿಯವಾಗಿ ಭಾಗಿ ಆಗುತ್ತಿದ್ದಾರೆ. ಮುಂದಿನ ಚುನಾವಣೆ ದಿಶೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗುತ್ತಿದ್ದಾರೆ. ಹಾಗಾಗಿ ಮುಂದೆ ಅವರು ಸಿನಿಮಾಗಳಲ್ಲಿ ನಟಿಸುವುದು ಅನುಮಾನ. ಅರ್ಧಕ್ಕೆ ನಿಲ್ಲಿಸಿರುವ 'OG' ಹಾಗೂ 'ಉಸ್ತಾದ್ ಭಗತ್ ಸಿಂಗ್' ಚಿತ್ರಗಳು ಚಿತ್ರೀಕರಣ ಮುಗಿಸಿ ತೆರೆಗೆ ಬಂದರೆ ಸಾಕು ಎನ್ನುವಂತಾಗಿದೆ. ಹಾಗಾಗಿ ಪವನ್ ಕೊನೆಯ ಸಿನಿಮಾಗಳನ್ನು ಅಭಿಮಾನಿಗಳು ದೊಡ್ಡದಾಗಿ ಸಂಭ್ರಮಿಸಲು ಬಯಸಿದ್ದಾರೆ. ಅದೇ ರೀತಿ 'ಹರಿಹರ ವೀರಮಲ್ಲು' ಚಿತ್ರಕ್ಕೆ ಭಾರೀ ಸ್ವಾಗತ ಸಿಕ್ಕಿತ್ತು.
ಭಾರೀ ನಿರೀಕ್ಷೆ ಹುಟ್ಟಾಕಿದ್ದ 'ಹರಿಹರ ವೀರಮಲ್ಲು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಮೊದಲ ಶೋನಿಂದಲೇ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಸಿನಿಮಾ ಚೇತರಿಸಿಕೊಳ್ಳಲೇ ಇಲ್ಲ. ತೆರೆಕಂಡ 30 ದಿನಕ್ಕೂ ಮುನ್ನ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬಂದಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ವೀಕ್ಷಿಸಬಹುದು. ಮೊಘಲರ ಆಳ್ವಿಕೆಯ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆ ಕಟ್ಟಿಕೊಡಲಾಗಿದೆ.

ಐತಿಹಾಸಿಕ ಘಟನಾವಳಿಗಳ ಹಿನ್ನಲೆಯಲ್ಲಿ ಒಂದು ಕಾಲ್ಪನಿಕ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ವೀರ ಯೋಧನ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ಅಬ್ಬರಿಸಿದ್ದಾರೆ. ನಿಧಿ ಅಗರ್‌ವಾಲ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಗ್ರಾಫಿಕ್ಸ್ ಹಾಗೂ ಕೆಲವು ಕಡೆಗಳಲ್ಲಿ ಪವನ್ ಬದಲು ಡ್ಯೂಪ್ ಬಳಸಿ ಚಿತ್ರೀಕರಿಸಿರುವುದು ಪ್ರೇಕ್ಷಕರಿಗೆ ಬೇಸರ ತಂದಿದೆ.
ಮೊದಲಿಗೆ ಕ್ರಿಶ್ 'ಹರಿಹರ ವೀರಮಲ್ಲು' ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ ಕೆಲ ಭಿನ್ನಭಿಪ್ರಾಯಗಳಿಂದ ಅವರು ಹೊರಬಂದಿದ್ದರು. ಬಳಿಕ ಜ್ಯೋತಿಕೃಷ್ಣ ಎಂಬುವವರು ಸಿನಿಮಾ ಕಂಪ್ಲೀಟ್ ಮಾಡಿದ್ದರು. ರತ್ನಂ ಹಾಗೂ ದಯಾಕರ್ ರಾವ್ ಚಿತ್ರಕ್ಕೆ ನೂರಾರು ಕೋಟಿ ಬಂಡವಾಳ ಹೂಡಿ ಕೈಸುಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ 2ನೇ ದಿನಕ್ಕೆ ವೀರಮಲ್ಲು ಆರ್ಭಟ ನಿಂತು ಹೋಗಿತ್ತು. ಇದು 'ಸು ಫ್ರಮ್ ಸೋ' ಚಿತ್ರದ ಗಳಿಕೆಗೆ ಪ್ಲಸ್ ಆಗಿತ್ತು.
ಒಟ್ಟಾರೆ ಚಿತ್ರಮಂದಿರಗಳಲ್ಲಿ ಸೋಲುಂಡ ಸಿನಿಮಾ ಇದೀಗ ಓಟಿಟಿಗೆ ವೇದಿಕೆಗೆ ಬಂದಿದೆ. ಸ್ಮಾಲ್ ಸ್ಕ್ರೀನ್‌ನಲ್ಲಿ ಸಿನಿಮಾ ನೋಡುವವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಪವನ್ ಕಲ್ಯಾಣ್ ಕೈಯಲ್ಲಿರುವ 2 ಸಿನಿಮಾಗಳನ್ನು ಮುಗಿಸುತ್ತೇನೆ. ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳುವುದು ಅನುಮಾನ ಎನ್ನುವಂತೆ ಮಾತನಾಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಮತ್ತಷ್ಟು ಬೇಸರವಾಗಿದೆ.


Click it and Unblock the Notifications











