99 ರೂ ಕೊಟ್ಟು ಮನೆಯಲ್ಲೇ ಕುಳಿತು ರಿಲೀಸ್ ದಿನ ಚಿತ್ರ ನೋಡುವ ಯೋಜನೆ ಜಾರಿ; ಹೀಗಾದ್ರೆ ಥಿಯೇಟರ್ಸ್ ಕಥೆ?
ಒಟ್ಟಿಗೆ ಎರಡರಿಂದ ಮೂರು ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದರೆ ಚಿತ್ರಮಂದಿರಗಳ ಕೊರತೆ ಕಾಡಲು ಆರಂಭಿಸಿಬಿಡುತ್ತದೆ. ಕೆಲವೆಡೆ ಒಂದೇ ಚಿತ್ರಮಂದಿರದಲ್ಲಿ ಒಂದೇ ದಿನ ಶೋಗಳನ್ನು ಹಂಚಿಕೊಂಡು ಪ್ರದರ್ಶನಗಳನ್ನು ಮಾಡುತ್ತವೆ ಕೆಲ ಚಿತ್ರಮಂದಿರಗಳು.
ಇದು ದೊಡ್ಡ ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾದಾಗಿನ ಕಥೆಯಾದರೆ, ದೊಡ್ಡ ನಟರ ಚಿತ್ರಗಳು ಇಲ್ಲದಾಗಿನ ಕಥೆ ಇದಕ್ಕೆ ತದ್ವಿರುದ್ಧ. ಪ್ರೇಕ್ಷಕರಿಲ್ಲದೇ ಅದೆಷ್ಟೋ ಚಿಕ್ಕ ಚಿತ್ರಗಳ ಮೊದಲ ಪ್ರದರ್ಶನವೇ ರದ್ದಾದ ಉದಾಹರಣೆಗಳು ಇವೆ.

ಅದರಲ್ಲಿಯೂ ಕೊವಿಡ್ ಬಳಿಕ ಇಂತಹ ಘಟನೆಗಳು ಜರುಗಿದ್ದು ಹೆಚ್ಚು. ವರ್ಷದ ಕಾಲ ಮನೆಯಲ್ಲಿಯೇ ಇದ್ದ ಜನರು ಓಟಿಟಿ ಕಡೆ ಸಮಯಹರಣಕ್ಕೆಂದು ಮುಖ ಮಾಡಿ ಬಳಿಕ ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡುಬಿಟ್ಟರು. ಭಾರತದಲ್ಲಿ ಓಟಿಟಿ ಚಂದಾದಾರರ ಸಂಖ್ಯೆ ಗಣನೀಯ ಹೇರಿಕೆ ಕಂಡಿದ್ದು ಹಾಗೂ ಓಟಿಟಿಯಲ್ಲಿ ಮೂಲೆಗುಂಪಾಗಿದ್ದ ಅದೆಷ್ಟೋ ಚಿತ್ರಗಳು ಮತ್ತು ವೆಬ್ ಸರಣಿಗಳು ಲಕ್ಷಾನುಗಟ್ಟಲೇ ವೀಕ್ಷಣೆಗಳನ್ನು ಕಂಡದ್ದು ಈ ಲಾಕ್‌ಡೌನ್ ದಿನಗಳಲ್ಲಿಯೇ.
ಇನ್ನು ಕುಟುಂಬವೊಂದು ಚಿತ್ರಮಂದಿರಕ್ಕೆ ತೆರಳಿ ಒಂದು ಚಿತ್ರವನ್ನು ನೋಡಲು ಖರ್ಚು ಮಾಡುತ್ತಿದ್ದ ಹಣದಲ್ಲಿ ಅಪ್ಲಿಕೇಶನ್‌ವೊಂದರ ವರ್ಷದ ಚಂದಾದಾರತ್ವವನ್ನು ಸುಲಭವಾಗಿ ಖರೀದಿಸಬಹುದಾದ ಕಾರಣ ಅದೆಷ್ಟೋ ಜನರು ಚಿತ್ರಮಂದಿರಗಳಿಗೆ ತೆರಳುವುದನ್ನೇ ಬಿಟ್ಟುಬಿಟ್ಟರು.
ಹೀಗಾಗಿ ಕೊವಿಡ್ ನಂತರ ಬಿಡುಗಡೆಗೊಂಡ ಕೆಲವೊಂದಷ್ಟು ಬಿಗ್ಗೆಸ್ಟ್ ಸೆನ್ಸೇಷನಲ್ ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳಾವುವೂ ಸಹ ಅವುಗಳ ಕಥೆಗೆ ತಕ್ಕನಾದ ಗುರುತಿಸುವಿಕೆಯನ್ನು ಪಡೆದುಕೊಳ್ಳಲಾಗಲಿಲ್ಲ.
ಹೀಗೆ ಓಟಿಟಿ ಹವಾ ಒಂದು ರೀತಿಯ ಹೊಡೆತವನ್ನೇ ಚಿತ್ರಮಂದಿರಗಳ ಮೇಲೆ ನೀಡಿತ್ತು. ಚಿತ್ರ ಬಿಡುಗಡೆಗೊಂಡು ಇಂತಿಷ್ಟು ದಿನಗಳು ಕಳೆದ ಬಳಿಕ ಓಟಿಟಿಗೆ ಬರುವ ನಿಯಮವಿರುವಾಗಲೇ ಚಿತ್ರಮಂದಿರಗಳ ಸ್ಥಿತಿ ಈ ಹಂತ ತಲುಪಿರುವಾಗ ಇನ್ನು ಚಿತ್ರವೊಂದನ್ನು ಅದರ ಥಿಯೇಟ್ರಿಕಲ್ ರಿಲೀಸ್ ದಿನವೇ ಓಟಿಟಿಯಲ್ಲಿ ವೀಕ್ಷಿಸುವ ಯೋಜನೆ ಜಾರಿಗೆ ತಂದರೆ ಸಿನಿಮಾ ಮಂದಿರಗಳ ಕಥೆ ಏನಾಗಬೇಡ.
ಇಂತಹ ಗಾಢವಾದ ಪ್ರಶ್ನೆಯನ್ನು ಹುಟ್ಟುಹಾಕಿರುವುದು ಆಂಧ್ರಪ್ರದೇಶ ಸರ್ಕಾರ ತೆಗೆದುಕೊಂಡಿರುವ 'ಫಸ್ಟ್ ಡೇ ಪಸ್ಟ್ ಶೋ ಪ್ರೋಗ್ರಾಂ' ಯೋಜನೆ. ಹೌದು, ಅಲ್ಲಿನ ಜನರು 99 ರೂಪಾಯಿಗಳನ್ನು ಪಾವತಿಸಿ ಬಿಡುಗಡೆ ದಿನವೇ ಚಿತ್ರವೊಂದನ್ನು ವೀಕ್ಷಿಸುವ ಚಂದಾದಾರತ್ವವನ್ನು ಪಡೆದುಕೊಂಡು ಚಿತ್ರವನ್ನು ಮನೆಯಲ್ಲಿಯೇ ಸ್ಮಾರ್ಟ್ ಟಿವಿ ಮೂಲಕ ವೀಕ್ಷಿಸಬಹುದಾಗಿದೆ. ಇನ್ನು ಈ ಯೋಜನೆಯನ್ನು ಜೂನ್ 2ರಿಂದ ವಿಶಾಖಪಟ್ಟಣದಲ್ಲಿ ಆರಂಭಿಸಿಲಾಗುತ್ತಿದೆ.
ಈ ಸುದ್ದಿಯನ್ನು ಕೇಳಿದ ಕೆಲವರು ಸದ್ಯ ಟಿಕೆಟ್ ಬುಕ್ ಮಾಡದೇ, ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸದೇ, ಎಲ್ಲಿಗೂ ಪ್ರಯಾಣಿಸದೇ, ಗುಂಪಿನಲ್ಲಿ ತಳ್ಳಾಟವಿಲ್ಲದೇ, ಅನಾಯಾಸವಾಗಿ ಮನೆಯಲ್ಲೇ ಕುಳಿತು ಚಿತ್ರವನ್ನು ವೀಕ್ಷಿಸಬಹುದು ಎಂದು ಸಂತಸ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲ ಸಿನಿ ರಸಿಕರು ಈ ಯೋಜನೆ ಚಿತ್ರಮಂದಿರಗಳಿಗೆ ಮಾರಕ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಇಂತಹ ಯೋಜನೆಯಿಂದ ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ಅದೆಷ್ಟೋ ಚಿತ್ರಮಂದಿರಗಳು ಮುಚ್ಚಿ ಹೋಗಲಿವೆ ಎಂದು ಸಿನಿ ರಸಿಕರು ಬೇಸರ ಹೊರಹಾಕಿದ್ದಾರೆ. ಹಾಗೆ ನೋಡಿದರೆ ಕೇವಲ ಚಿತ್ರಮಂದಿರಗಳಿಗೆ ಮಾತ್ರವಲ್ಲ. ಈ ರೀತಿ ಓಟಿಟಿಯಲ್ಲಿ ಬಿಡುಗಡೆಯಾಗುವ ಚಿತ್ರಗಳಿಗೂ ಸಹ ಇದು ಅತಿದೊಡ್ಡ ಕಂಟಕವೇ. ಏಕೆಂದರೆ ದೊಡ್ಡ ಮಟ್ಟದ ಸೆಕ್ಯೂರಿಟಿ ಇರುವ ನೆಟ್‌ಫ್ಲಿಕ್ಸ್ ರೀತಿಯ ದೈತ್ಯ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಚಿತ್ರವೊಂದು ಕೆಲವೇ ನಿಮಿಷಗಳಲ್ಲಿ ಅದೇ ಗುಣಮಟ್ಟದಲ್ಲಿ ಪೈರಸಿಯಾಗಿ ಹಲವು ವೆಬ್ ತಾಣಕ್ಕೆ ಲಗ್ಗೆ ಇಡುವ ಕಾಲವಿದು.
ಹೀಗಿರುವಾಗ ಫಸ್ಟ್ ಡೇ ಫಸ್ಟ್ ಶೋ ಯೋಜನೆಯಡಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಸಮಯಕ್ಕೆ ಓಟಿಟಿಯಲ್ಲಿಯೂ ಸಹ ಚಿತ್ರಗಳು ಬಿಡುಗಡೆಯಾಗುವುದರಿಂದ ಪೈರಸಿ ಚಿತ್ರಗಳನ್ನು ಹರಿಬಿಡುವವರಿಗೆ ಹಬ್ಬವೇ ಸರಿ..


Click it and Unblock the Notifications











