ನಾನು ಮಾಡಿದ ಸಿನಿಮಾ ನೋಡಿ ಪ್ರೇಕ್ಷಕರು ಬೈಯುತ್ತಿದ್ದಾರೆ: ನಿರ್ದೇಶಕ ಅಳಲು
ಸಿನಿಮಾ ನೋಡಿ ಅದು ಇಷ್ಟವಾಗದಿದ್ದರೆ ಪ್ರೇಕ್ಷಕರು ಬೇಸರ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ದೀಪಿಕಾ ಪಡುಕೋಣೆ ನಟಿಸಿರುವ ಹೊಸ ಹಿಂದಿ ಸಿನಿಮಾ ನೋಡಿದ ಪ್ರೇಕ್ಷಕರು ನಿರ್ದೇಶಕನಿಗೆ ಸಂದೇಶ ಕಳಿಸಿ ಕೆಟ್ಟ-ಕೆಟ್ಟದಾಗಿ ಬೈದಿದ್ದಾರೆ. ಇದನ್ನು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ.
ಶಕುನ್ ಭಾತ್ರಾ ನಿರ್ದೇಶಿಸಿ, ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ, ಸಿದ್ಧಾಂತ್ ಚತುರ್ವೇದಿ ನಟಿಸಿರುವ 'ಗೆಹರಾಹಿಯಾ' ಸಿನಿಮಾ ಕೆಲವು ದಿನಗಳ ಹಿಂದೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಗ್ಗೆ ಹಲವರು ಋಣಾತ್ಮಕ ವಿಮರ್ಶೆಗಳನ್ನು ನೀಡಿದರು.
ತಮ್ಮ ಸಿನಿಮಾದ ಬಗ್ಗೆ ಬಂದ ನೆಗೆಟಿವ್ ಕಮೆಂಟ್‌ಗಳ ಬಗ್ಗೆ ಮಾತನಾಡಿರುವ ನಿರ್ದೇಶಕ ಶಕುನ್ ಭಾತ್ರಾ, ಸಿನಿಮಾ ನೋಡಿದವರು ತಮಗೆ ಇಮೇಲ್ ಮಾಡಿ ಕೆಟ್ಟದಾಗಿ ಬೈದಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ.
''ಇಮೇಲ್‌ನ ಸಬ್ಜೆಕ್ಟ್‌ನಲ್ಲೇ ಕೆಟ್ಟ ಹಿಂದಿ ಬೈಗುಳವಿತ್ತು. ಸಂದೇಶದಲ್ಲಂತೂ ಇನ್ನೂ ಕೆಟ್ಟದಾಗಿ ಬೈಯ್ಯಲಾಗಿತ್ತು. ಸಿನಿಮಾ ಮಾಡಲು ಬರದಿದ್ದರೆ ಬೇರೆ ಏನಾದರೂ ಕೀಳುವ ಕೆಲಸ ಮಾಡು ಎಂದೆಲ್ಲ ಬರೆದಿದ್ದರು ಒಬ್ಬ ಸಿನಿಮಾ ನೋಡಿದ ವ್ಯಕ್ತಿ. ಇಂಥ ಹಲವು ಇಮೇಲ್‌ಗಳು, ವಾಟ್ಸ್‌ಆಪ್ ಸಂದೇಶಗಳು ನನಗೆ ಬಂದಿವೆ'' ಎಂದಿದ್ದಾರೆ ಶಕುನ್ ಭಾತ್ರಾ.

ಸಂದೇಶಗಳಿಂದ ನನಗೆ ಬೇಸರವಿಲ್ಲ: ಶಕುನ್ ಭಾತ್ರಾ
ಆದರೆ ಇಂಥಹಾ ಸಂದೇಶಗಳಿಂದ ನನಗೆ ಬೇಸರವೇನೂ ಇಲ್ಲ. ಸಿನಿಮಾ ನೋಡಿದ ಕೆಲವರು ಒಳ್ಳೆಯ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಬ್ರಿಸ್‌ಬೇನ್‌ನ ಮನಶಾಸ್ತ್ರಜ್ಞರೊಬ್ಬರು ಸಂದೇಶ ಕಳಿಸಿ, ನನ್ನ ಸಿನಿಮಾದಲ್ಲಿನ ಪಾತ್ರಗಳ ಮನಸ್ಥಿತಿ, ಮನೋ ಆರೋಗ್ಯದ ಬಗ್ಗೆ ಚರ್ಚೆ ಮಾಡಿದರು. ವ್ಯಕ್ತಿಯ ಮನೋ ವ್ಯಾಕುಲತೆಯನ್ನು, ವಾಂಛೆಗಳನ್ನು ಸಿನಿಮಾದಲ್ಲಿ ಚೆನ್ನಾಗಿ ಬಿಂಬಿಸಲಾಗಿದೆ ಎಂದು ಹೊಗಳಿದ್ದಾರೆ'' ಎಂದಿದ್ದಾರೆ ಶಕುನ್ ಭಾತ್ರಾ. ಇಂಥಹಾ ಸಂದೇಶಗಳಿಂದ ನಾನು ಇನ್ನಷ್ಟು ಕಲಿಯುತ್ತೇನೆ, ನಾನು ಸರಿಯಾದ ದಾರಿಯಲ್ಲಿದ್ದೇನೆ ಎಂದು ಮನದಟ್ಟು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಭಾತ್ರಾ.

ಅನೈತಿಕ ಸಂಬಂಧದ ಕತೆಯುಳ್ಳ ಸಿನಿಮಾ
'ಗೆಹರಾಯಿಯಾ' ಸಿನಿಮಾದಲ್ಲಿ ವಿವಾಹಿತ ಮಹಿಳೆ (ದೀಪಿಕಾ) ತನ್ನ ಸಂಬಂಧಿಯ ಬಾಯ್‌ಫ್ರೆಂಡ್ ಜೊತೆ ಅನೈತಿಕ ಸಂಬಂಧ ಹೊಂದುವ ಕತೆಯನ್ನು ಹೊಂದಿದೆ. ಸಿನಿಮಾದ ಕತೆಯ ಆಯ್ಕೆ, ಪ್ರೆಸೆಂಟ್ ಮಾಡಿರುವ ರೀತಿ, ಸಂಭಾಷಣೆ, ಪತಿ-ಪತ್ನಿ ಸಂಬಂಧದ ಬಗ್ಗೆ ಪಾಶ್ಚಿಮಾತ್ಯ ನಿಲವುಗಳ ಬಗ್ಗೆ ಹಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಬಾಲಿವುಡ್ ಸಿನಿಮಾ ವಿಮರ್ಶಕರು ಸಹ ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳನ್ನು ನೀಡಿಲ್ಲ. ಸಿನಿಮಾದಲ್ಲಿನ ಅತಿಯಾದ ರೊಮ್ಯಾಂಟಿಕ್ ದೃಶ್ಯಗಳು, ಗ್ಲಾಮರ್ ಹೆಚ್ಚಿನ ಜನರಿಗೆ ಹಿಡಿಸಿಲ್ಲ.

ಭಾಸ್ಕರ್ ರಾವ್ ಟ್ವೀಟ್
ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಹ ಸಿನಿಮಾ ಬಗ್ಗೆ ಬೇಸರದ ಟ್ವಿಟ್ ಮಾಡಿದ್ದರು, 'ಗೆಹರಾಹಿಯಾ' ಸಿನಿಮಾವನ್ನು 20 ನಿಮಿಷ ಸಹ ನೋಡಲು ಸಾಧ್ಯವಾಗಲಿಲ್ಲ. ನನಗೆ ಒಂದು ರೀತಿ ಮುಜುಗರ ಎನಿಸಲು ಆರಂಭವಾಯ್ತು. ನಾನು ದೀಪಿಕಾ ಪಡುಕೋಣೆಯ ಅಭಿಮಾನಿ, ಆಕೆ ತನ್ನ ಸಾಧನೆಯಿಂದ, ಧೈರ್ಯದಿಂದ ಕೋಟ್ಯಂತರ ಜನರಿಗೆ ಮಾದರಿ ಆಗಿದ್ದಾಳೆ. ಆದರೆ 'ಗೆಹರಾಯಿಯಾ' ಸಿನಿಮಾದಲ್ಲಿನ ಅನೈತಿಕ ಸಂಬಂಧ, ಮನೆ ಮುರಿಯುವ ವರ್ತನೆಗಳು ಕೆಲವರಿಗೆ ಹಿಡಿಸಬಹುದೇನೋ, ನನಗೆ ಹಿಡಿಸಲಿಲ್ಲ'' ಎಂದಿದ್ದಾರೆ.

ದೀಪಿಕಾ ಪಡುಕೋಣೆ ಅಭಿಮಾನಿಗಳ ಬೇಸರ
ಭಾಸ್ಕರ್ ರಾವ್ ಮಾತ್ರವೇ ಅಲ್ಲ ದೀಪಿಕಾ ಪಡುಕೋಣೆಯ ಹಲವು ಅಭಿಮಾನಿಗಳು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯರು ಒಪ್ಪಬಹುದಾದ ಕತೆಯನ್ನು ಈ ಸಿನಿಮಾ ಹೊಂದಿಲ್ಲವೆಂದು. ಪರಿ ಪತ್ನಿ ಸಂಬಂಧವನ್ನು ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ನೋಡಲಾಗಿದೆಯೆಂದು ಹಲವರು ಸಿನಿಮಾ ಬಗ್ಗೆ ಟೀಕಿಸಿದ್ದಾರೆ. ಸಿನಿಮಾವು ಫೆಬ್ರವರಿ 11 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಕರಣ್ ಜೋಹರ್ ಸೇರಿದಂತೆ ಹಲವರು ಬಂಡವಾಳ ಹೂಡಿದ್ದರು.


Click it and Unblock the Notifications











