Pepe OTT: ದಸರಾ ಧಮಾಕ; ಓಟಿಟಿಗೆ ಬಂದ ವಿನಯ್ 'ಪೆಪೆ' ಸಿನಿಮಾ, ಈಗ್ಲೇ ನೋಡಿ
ಭಾರೀ ನಿರೀಕ್ಷೆ ಮೂಡಿಸಿದ್ದ 'ಪೆಪೆ' ಸಿನಿಮಾ ಹೀನಾಯವಾಗಿ ಸೋತಿತ್ತು. ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಹೀರೊ ಆಗಿ ಅಬ್ಬರಿಸಿದ್ದರು. ಆಗಸ್ಟ್ 30ಕ್ಕೆ ಸಿನಿಮಾ ತೆರೆಗಪ್ಪಳಿಸಿತ್ತು. ಇದೀಗ ಓಟಿಟಿಗೂ ಬಂದಿದೆ.
ವಿನಯ್ ರಾಜ್‌ಕುಮಾರ್ ಕರಿಯರ್‌ನಲ್ಲೇ 'ಪೆಪೆ' ಬಹಳ ವಿಭಿನ್ನವಾದ ಸಿನಿಮಾ. ಉದ್ದನೆಯ ಗಡ್ಡ ಬಿಟ್ಟು ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ತೆರೆಮೇಲೆ ಆರ್ಭಟಿಸಿದ್ದರು. ಕತ್ತಿ ಹಿಡಿದು ರಕ್ತಸಿಕ್ತ ಕಥೆ ಹೇಳಿದ್ದರು. ಟೀಸರ್, ಪೋಸ್ಟರ್‌ಗಳಿಂದ ಸಿನಿಮಾ ಬಹಳ ಸದ್ದು ಮಾಡಿತ್ತು. ಬಹಳ ತಡವಾಗಿ ಸಿನಿಮಾ ಬಿಡುಗಡೆ ಆಗಿತ್ತು. ಅದಕ್ಕೂ ಮುನ್ನ ಟ್ರೈಲರ್ ರಿಲೀಸ್ ಆಗಿ ಇನ್ನಿಲ್ಲ ಹೈಪ್ ಕ್ರಿಯೇಟ್ ಮಾಡಿತ್ತು.

'ಪೆಪೆ' ನಿಜಕ್ಕೂ ಸಾದಾ ಸೀದಾ ಸಿನಿಮಾ ಅಲ್ಲ. ಸಾಮಾನ್ಯ ಪ್ರೇಕ್ಷಕರಿಗೆ ಸುಲಭಕ್ಕೆ ಅರ್ಥವಾಗುವಂತೆ ಇರಲಿಲ್ಲ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿತ್ತು. ಕೇರಳ ಮೂಲದ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಚಿತ್ರದಲ್ಲಿ ಮಲಯಾಳಂ ಸಿನಿಮಾಗಳ ಛಾಯೆ ಎದ್ದು ಕಾಣುವಂತಿತ್ತು. ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಬಹಳ ದಿನಗಳ ನಂತರ ಮಯೂರ್ ಪಟೇಲ್ 'ಪೆಪೆ' ಚಿತ್ರದಲ್ಲೊಂದು ಒಳ್ಳೆ ಪಾತ್ರ ಮಾಡಿದ್ದರು. ಇನ್ನುಳಿದಂತೆ ಕಾಜಲ್ ಕುಂದರ್ ನಾಯಕಿಯಾಗಿ ಮಿಂಚಿದ್ದರು. ನವೀನ್ ಪಿ ಪಡಿಲ್, ಯಶ್ ಶೆಟ್ಟಿ, ಮೆದಿನಿ ಕೆಳಮನೆ, ರವಿಪ್ರಸಾದ್ ಮಂಡ್ಯ, ಬಾಲ ಬೆಲವಾಡಿ, ಅರುಣಾ ಬಾಲ್‌ರಾಜ್ 'ಪೆಪೆ' ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಷೇಕ್ ಕಾಸರಗೋಡ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿತ್ತು.

90ರ ದಶಕದಲ್ಲಿ 'ಪೆಪೆ' ಚಿತ್ರದ ಕಥೆ ಸಾಗುತ್ತದೆ. ಕೊಡಗಿನ ಬಳಿ ಬದಲಾಳು ಎನ್ನುವ ಕಾಲ್ಪನಿಕ ಊರು. ಆ ಊರಿನ ಪಕ್ಕದಲ್ಲಿ ಹರಿಯುವ ಒಂದು ತೊರೆ. ಆ ತೊರೆಯ ನೀರಿಗಾಗಿ ಊರಿನ 4 ಬೇರೆ ಬೇರೆ ಜಾತಿ ನಡುವೆ ನಡೆಯುವ ಸಂಘರ್ಷ. ದಲಿತರ ಮೇಲಿನ ದೌರ್ಜನ್ಯ ಹಾಗೂ ಹತ್ಯಾಕಾಂಡದ ಕಥೆ ಚಿತ್ರದಲ್ಲಿದೆ. ಆಕ್ಷನ್ ಸನ್ನಿವೇಶಗಳು ಸೊಗಸಾಗಿ ಮೂಡಿಬಂದಿದೆ. ವಿನಯ್ ನಟನೆಗೂ ಒಳ್ಳೆ ಅಂಕ ಸಿಕ್ಕಿತ್ತು.
ಮೂಡ ನಂಬಿಕೆ, ಜಾತಿ ಸಂಘರ್ಷ ಸೇರಿ ಸಾಕಷ್ಟು ಕೆಟ್ಟ ಆಚಾರಗಳ ಬಗ್ಗೆ 'ಪೆಪೆ' ಚಿತ್ರದಲ್ಲಿ ಚರ್ಚಿಸಲಾಗಿದೆ. ಇನ್ನು ಕೆಳವರ್ಗದ ಜನರ ಪ್ರತಿನಿಧಿಯಾಗಿ ರಾಯಪ್ಪನ ಮೊಮ್ಮಗ ಪ್ರದೀಪ ಆಗಿ ವಿನಯ್ ಕಾಣಿಸಿಕೊಂಡಿದ್ದರು. ಸಾಕಷ್ಟು ಅದ್ಭುತ ಸನ್ನಿವೇಶಗಳು, ಕ್ಯಾಮರಾ ಕೈಚಳಕ, ಎಡಿಟಿಂಗ್ 'ಪೆಪೆ' ಚಿತ್ರದಲ್ಲಿತ್ತು. ಸಿನಿಮಾ ನಿರೂಪಣೆ ಹೊಸತಾಗಿ ಇದ್ದರೂ ಕಥೆಯಲ್ಲಿ ಹೊಸತನವಿರಲಿಲ್ಲ. ಇತ್ತ ಕಮರ್ಷಿಯಲ್ ಗುಂಪಿಗೂ ಸೇರದ, ಅತ್ತ ಆರ್ಟ್ ಸಿನಿಮಾ ಎನಿಸಿಕೊಳ್ಳದೇ ನಡುವೆ 'ಪೆಪೆ' ಸಿನಿಮಾ ಮೂಡಿ ಬಂದಿತ್ತು.
'ಪೆಪೆ' ಸ್ಯಾಂಪಲ್ಸ್ ನೋಡಿ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲುತ್ತದೆ ಎಂದೇ ಕೆಲವರು ಭಾವಿಸಿದ್ದರು. ಆದರೆ ಮೊದಲ ದಿನದಿಂದಲೇ ಸಿನಿಮಾ ಪ್ರೇಕ್ಷಕರನ ಬರ ಎದುರಿಸಿತ್ತು. ಎರಡನೇ ವಾರಕ್ಕೆ ಬಹುತೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿತ್ತು. ಸಾಕಷ್ಟು ಜನ ಸಿನಿಮಾ ನೋಡುವ ಲೆಕ್ಕಾಚಾರದಲ್ಲಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಚಿತ್ರಕ್ಕೆ ರೆಸ್ಪಾನ್ಸ್ ಸಿಗಲಿಲ್ಲ.
ಓಟಿಟಿಯಲ್ಲಿ 'ಪೆಪೆ' ಸಿನಿಮಾ ನೋಡಲು ಸಾಕಷ್ಟು ಜನ ಕಾಯುತ್ತಿದ್ದರು. ಸದ್ಯ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗಿದೆ. ಈಗ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿ.


Click it and Unblock the Notifications











