ತೇರೆ ಇಷ್ಕ್ ಮೇ ಅತಿರಂಜಿತ ದೃಶ್ಯ, ನೆಟ್ಟಿಗರ ಕಿಲಾಡಿ ಕಾಮೆಂಟ್: 2200 ಪುಟಗಳ ಪಿಎಚ್‌ಡಿ ಪ್ರಬಂಧ ನೋಡಿ ಸಂಶೋಧಕರು ಶಾಕ್
ಬಣ್ಣದ ಲೋಕದಲ್ಲಿ ದಿನಕ್ಕೊಂದು ಹೊಸ ಸಾಹಸಗಳು ನಡೆಯುತ್ತಲೇ ಇರುತ್ತವೆ. ನಿರ್ದೇಶಕರು ತಮಗೆ ತೋಚಿದ ಕಲ್ಪನೆಯನ್ನು ತೆರೆಯ ಮೇಲೆ ತರುತ್ತಾರೆ. ಆದರೆ ಇಂದು ಪ್ರೇಕ್ಷಕರು ಅಷ್ಟು ಸುಲಭವಾಗಿ ಯಾವುದನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಪ್ರತಿಯೊಂದು ಫ್ರೇಮ್ ಅನ್ನೂ ಈಗಿನ ಸಿನಿಪ್ರಿಯರು ಭೂತಗನ್ನಡಿ ಹಿಡಿದು ನೋಡುತ್ತಿದ್ದಾರೆ.
ಕಲಾತ್ಮಕತೆ ಎನ್ನುವುದು ಒಂದು ಮಿತಿಯಲ್ಲಿದ್ದರೆ ಚಂದ. ಸೃಜನಶೀಲತೆಯ ಹೆಸರಿನಲ್ಲಿ ವಾಸ್ತವಕ್ಕೆ ದೂರವಾದ ಸಂಗತಿಗಳನ್ನು ತೋರಿಸಿದಾಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗುತ್ತದೆ. ಇದಕ್ಕೆ ಕೈಗನ್ನಡಿ ಎಂಬಂತೆ ಓಟಿಟಿಯಲ್ಲಿ ಇತ್ತೀಚಿಗಷ್ಟೇ ಪ್ರಸಾರವಾಗಲು ಶುರುವಾದ ಧನುಷ್ ಮತ್ತು ಕೃತಿ ಸನೋನ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರದ ಚಿಕ್ಕ ದೃಶ್ಯವೊಂದು ಈಗ ವ್ಯಾಪಕ ಸದ್ದು ಮಾಡುತ್ತಿದೆ. ಟ್ರೋಲ್ ಆಗುತ್ತಿದೆ.

ಹೌದು, ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿ ಬಹಳ ಬುದ್ಧಿವಂತರು ಎಂದು ತೋರಿಸುವಾಗ ನಿರ್ದೇಶಕರು ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಆದರೆ ಆ ಬುದ್ಧಿವಂತಿಕೆ ಎನ್ನುವುದು ಅತಿರಂಜಿತವಾದಾಗ ಅದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಈಗಿನ ಒಂದು ಹೊಸ ಚಿತ್ರದಲ್ಲಿ ಬಂದ ಒಂದು ದೃಶ್ಯವು ಇಡೀ ಸಂಶೋಧನಾ ಲೋಕವನ್ನೇ ಕೆರಳಿಸಿದೆ.
ಪಿಎಚ್‌ಡಿ ಪ್ರಬಂಧದ ಆ 2,200 ಪುಟಗಳು
''ತೇರೆ ಇಷ್ಕ್ ಮೇ'' ಚಿತ್ರದಲ್ಲಿ ಹೀರೋಯಿನ್ ಮುಕ್ತಿ ತನ್ನ ಪಿಎಚ್‌ಡಿ ಪ್ರಬಂಧದ ಬಗ್ಗೆ ಮಾತನಾಡುತ್ತಾಳೆ.ಈ ಸಮಯದಲ್ಲಿ ಒಂದು ಸೀನ್ ನೋಡಿ ರಿಸರ್ಚ್ ಸ್ಕಾಲರ್ಸ್‌ಗಳು ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ಕಥೆಯಲ್ಲಿ ನಾಯಕಿ ತನ್ನ ಥೀಸಿಸ್ ಅನ್ನು ಹಿಡಿದು ಬರುತ್ತಾಳೆ. ಅದು ಬರೋಬ್ಬರಿ 2,200 ಪುಟಗಳ ಬೃಹತ್ ಪುಸ್ತಕ.
ಹೌದು, ನೀವು ಕೇಳಿದ್ದು ನಿಜ. ಸಾಮಾನ್ಯವಾಗಿ ಒಂದು ಪಿಎಚ್‌ಡಿ ಪ್ರಬಂಧ 200 ರಿಂದ 400 ಪುಟಗಳಷ್ಟಿರುತ್ತದೆ. ಆದರೆ ಇಲ್ಲಿ ತೋರಿಸಿರುವ ಆ ದಪ್ಪನೆಯ ಪುಸ್ತಕ ನೋಡಿ ಗೂಗಲ್ ಕೂಡ ಒಂದು ಕ್ಷಣ ತಲೆ ಕೆಡಿಸಿಕೊಂಡಿರಬಹುದು.
ಸಂಶೋಧಕರ ಆಕ್ರೋಶ ಮತ್ತು ಕಾಲೆಳೆತ
ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ. "ಇದು ಥೀಸಿಸ್ ಅಲ್ಲ, ಇಡೀ ಪ್ರಪಂಚದ ಇತಿಹಾಸ" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "ಇದನ್ನು ಓದಬೇಕಾದರೆ ಆರು ವರ್ಷ ಬೇಕು" ಎಂದು ತಮಾಷೆ ಮಾಡುತ್ತಿದ್ದಾರೆ.

ಸಂಶೋಧಕರು ಹೇಳುವುದೇನು?
ಬಾಲಿವುಡ್ ಸಿನೆಮಾಗಳಲ್ಲಿ ಇಂತಹ ಅತಿರಂಜಿತ ದೃಶ್ಯಗಳು ಸಾಮಾನ್ಯ. ಆದರೆ ಈ ಬಾರಿ ಸಂಶೋಧಕರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. "ಪಿಎಚ್‌ಡಿ ಮಾಡುವುದು ಅಷ್ಟು ಸುಲಭನಾ?" ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ನಿಜಾ ಸಿನಿಮಾ ಅಂದ ಮೇಲೆ ಸ್ವಲ್ಪ ಮಸಾಲೆ ಇರಲೇಬೇಕು. ಆದರೆ ಅದು ನಂಬುವಂತಿರಬೇಕು. 2,200 ಪುಟಗಳ ಪ್ರಬಂಧ ಎನ್ನುವುದು ಅತಿಶಯೋಕ್ತಿ ಎನಿಸುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಸದ್ಯ ಈ ದೃಶ್ಯದ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ.
ಅಂದ ಹಾಗೆ, ಆನಂದ್ ಎಲ್ ರಾಯ್ ನಿರ್ದೇಶನದ ''ತೇರೆ ಇಷ್ಕ್ ಮೇ'' ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಿತ್ತು. ಆದರೆ ಒಂದು ವಾರದಲ್ಲಿ ''ಧುರಂಧರ್'' ಬಂದು ಅಪ್ಪಳಿಸಿತು. ''ಧುರಂಧರ್'' ಅಲೆಯ ನಡುವೆಯೂ ಕೂಡ ನೂರು ಕೋಟಿಯ ಗಡಿಯನ್ನು ದಾಟಿತ್ತು. ಚಿತ್ರದ ನಿರ್ದೇಶಕ ಆನಂದ್ ಎಲ್ ರಾಯ್ ಖುದ್ದು ಮಾಹಿತಿ ಹಂಚಿಕೊಂಡಂತೆ ವಿಶ್ವದೆಲ್ಲೆಡೆಯಿಂದ ಈ ಚಿತ್ರ 161.36 ಕೋಟಿಯನ್ನು ಗಳಿಸಿದೆ. ಸದ್ಯ ಈ ಚಿತ್ರ ಜನವರಿ 23ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಆಸಕ್ತರು ಮನೆಯಲ್ಲಿಯೇ ಕುಳಿತು ನೋಡಬಹುದು.


Click it and Unblock the Notifications











