ಭರ್ಜರಿ ಬೆಲೆಗೆ ಪ್ರಭಾಸ್ 'ಆದಿಪುರುಷ್' ಓಟಿಟಿ ರೈಟ್ಸ್ ಡೀಲ್? ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸದ್ಯ ಚಿತ್ರತಂಡ ಭರ್ಜರಿ ಪ್ರಚಾರ ಕೂಡ ನಡೆಸ್ತಿದೆ. ಇನ್ನು ಚಿತ್ರದ ಥ್ರಿಯೇಟ್ರಿಕಲ್ ರೈಟ್ಸ್ ಭರ್ಜರಿ ಬೆಲೆ ಮಾರಾಟವಾಗಿ ದಾಖಲೆ ಬರೆದಿದೆ. ಪೌರಾಣಿಕ ಕಥಾಹಂದರದ ಸಿನಿಮಾ ನೋಡಲು ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಥ್ರಿಡಿಯಲ್ಲಿ ರಾಮಾಯಣ ಕಾವ್ಯ ತೆರೆಮೇಲೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.
ಟೀ- ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿವೆ. ಟೀಸರ್ ಬಗ್ಗೆ ಟೀಕೆ ಎದುರಾದರೂ ಅದನ್ನು ಮೀರಿ ಹೊಸ ರೂಪದಲ್ಲಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದು ರಾವಣನಾಗಿ ಸೈಫ್ ಅಲಿಖಾನ್ ಸವಾಲ್ ಹಾಕುತ್ತಿದ್ದಾರೆ. ಕೃತಿ ಸನೂನ್ ಸೀತೆಯಾಗಿ ಬಣ್ಣ ಹಚ್ಚಿದ್ದು ಸನ್ನಿಸಿಂಗ್ ಲಕ್ಷ್ಮಣನಾಗಿ, ದೇವದತ್ತ ಹನುಮಂತನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಆದಿಪುರುಷ್' ಸಿನಿಮಾ ತೆರೆಗಪ್ಪಳಿಸಲಿದೆ. ಕನ್ನಡ ಡಬ್ಬಿಂಗ್ ಗುಣಮಟ್ಟ ಕೂಡ ಚೆನ್ನಾಗಿರುವಂತೆ ಕಾಣುತ್ತಿದೆ. ಈಗಾಗಲೇ ಕನ್ನಡ ಹಾಡುಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇಂದು ಸಂಜೆ(ಜೂನ್ 6) ತಿರುಪತಿಯಲ್ಲಿ 'ಆದಿಪುರುಷ್' ಚಿತ್ರದ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಈಗಾಗಲೇ ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ.
ಪ್ರೈಂ ವಿಡಿಯೋದಲ್ಲಿ 'ಆದಿಪುರುಷ್'?
ಜೂನ್ 16ಕ್ಕೆ 'ಆದಿಪುರುಷ್' ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಇನ್ನು ಚಿತ್ರದ ಡಿಜಿಟಲ್ ರೈಟ್ಸ್ ಕೂಡ ಮಾರಾಟವಾಗಿದೆ ಎನ್ನಲಾಗ್ತಿದ್ದು ಅಮೇಜಾನ್ ಪ್ರೈಂ ಸಂಸ್ಥೆ ಡೀಲ್ ಕುದುರಿಸಿಕೊಂಡಿದೆಯಂತೆ. ಕ್ರೇಜ್‌ಗೆ ತಕ್ಕಂತೆ 100 ಕೋಟಿ ರೂ.ಗೂ ಅಧಿಕ ಬೆಲೆಗೆ ಚಿತ್ರದ 5 ಭಾಷೆಗಳ ಓಟಿಟಿ ರೈಟ್ಸ್ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಪ್ರಭಾಸ್ ಹೀರೊ ಆಗಿರುವುದರಿಂದ ರಾಮಾಯಣ ಕಾವ್ಯದ ಕಥೆ ಆಗಿರುವುದರಿಂದ ಇಷ್ಟು ದೊಡ್ಡಮೊತ್ತಕ್ಕೆ ವ್ಯವಹಾರ ನಡೆದಿರುವ ಸಾಧ್ಯತೆಯಿದೆ.

ಓಟಿಟಿ ಸ್ಟ್ರೀಮಿಂಗ್ ಯಾವಾಗ?
ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳನ್ನು ರಿಲೀಸ್ ಆಗಿ 47 ದಿನಗಳ ನಂತರ ಓಟಿಟಿ ರಿಲೀಸ್‌ಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಪ್ಪಿ ತಪ್ಪಿ ಸಿನಿಮಾ 7 ವಾರಗಳ ನಂತರವೂ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಂಡರೆ ಮಾತುಕತೆ ನಡೆಸಿ ಸ್ಟ್ರೀಮಿಂಗ್ ಡೇಟ್ ಬದಲಿಸಲಾಗುತ್ತಿದೆ. ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಲೇ ಎರಡ್ಮೂರು ವಾರಕ್ಕೆಲ್ಲಾ ಓಟಿಟಿಗೆ ಬರ್ತಿದೆ. ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುವ ಸಿನಿಮಾಗಳು ಬಹಳ ಬೇಗ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡುವಂತಾಗಿದೆ. ಆಗಸ್ಟ್ ಮೊದಲ ವಾರ 'ಆದಿಪುರುಷ್' ಪ್ರೈಂ ವಿಡಿಯೋಗೆ ಬರುವ ಸಾಧ್ಯತೆಯಿದೆ.
ಹನುಮಂತನಿಗೆ ಒಂದು ಸೀಟ್ ಮೀಸಲು!
'ಆದಿಪುರುಷ್' ಚಿತ್ರತಂಡ ಸಿನಿಮಾ ಪ್ರದರ್ಶನ ಆಗುವ ಎಲ್ಲಾ ಥಿಯೇಟರ್‌ಗಳಲ್ಲೂ ಒಂದೊಂದು ಸೀಟ್ ಖಾಲಿ ಇಡಲು ತೀರ್ಮಾನಿಸಿದೆ. ಯಾಕಂದರೆ ರಾಮ ಎಲ್ಲೇ ಇದ್ದರೂ ಹನುಮಂತನೂ ಅಲ್ಲೇ ಇರುತ್ತಾನೆ ಎನ್ನುವ ನಂಬಿಕೆ ಹಲವರಲ್ಲಿದೆ. ರಾಮನಿಗೆ ಸಂಬಂಧಿಸಿದ ಹಬ್ಬ ಹರಿದಿನಗಳು, ಕಾರ್ಯಕ್ರಮಗಳು ನಡೆಯುತ್ತವೆಯೋ ಅಲ್ಲಿ ಹನುಮಂತನೂ ಇರುತ್ತಾನೆ ಎಂದು ಜನ ನಂಬಿದ್ದಾರೆ. 'ಆದಿಪುರುಷ್' ಸಿನಿಮಾ ವೀಕ್ಷಿಸಲು ಹನುಮ ಬರ್ತಾನೆ ಎನ್ನುವ ಸೂಚಕವಾಗಿ ಈ ನಿರ್ಧಾರಕ್ಕೆ ಬರಲಾಗಿದೆಯಂತೆ.
ಬಾಕ್ಸಾಫೀಸ್‌ನಲ್ಲಿ ದಾಖಲೆ?
ಬಾಹುಬಲಿ ನಂತರ ಪ್ರಭಾಸ್ ನಟನೆಯ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿವೆ. ಆದರೆ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಿಲ್ಲ. 'ಆದಿಪುರುಷ್' ರಾಮಾಯಣ ಕತೆ ಆಧರಿಸಿರುವುದರಿಂದ ಎಲ್ಲಾ ವರ್ಗದ ಪ್ರೇಕ್ಷಕರು ನೋಡುವ ನಿರೀಕ್ಷೆಯಿದೆ. ಮುಖ್ಯವಾಗಿ ಉತ್ತರಭಾರತದಲ್ಲಿ ಸಿನಿಮಾ ಹೆಚ್ಚು ಸದ್ದು ಮಾಡುವ ಸಾಧ್ಯತೆಯಿದೆ. ಈಗಾಗಲೇ ಸಿನಿಮಾ ಕಲೆಕ್ಷನ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಗಡಿ ದಾಟುತ್ತದೆ ಎನ್ನಲಾಗ್ತಿದೆ.


Click it and Unblock the Notifications











