ಎರಡೆರಡು ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಭಾಸ್ 'ಕಲ್ಕಿ' ಸ್ಟ್ರೀಮಿಂಗ್; ಎಲ್ಲಿ, ಯಾವಾಗ?
ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫಿಕ್ಷನ್ 'ಕಲ್ಕಿ 2898 AD' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಎರಡು ವಾರದ ಹಿಂದೆಯೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲಾಯಿತು.
ಈಗಾಗಲೇ ಚಿತ್ರತಂಡ ಪ್ರಮೋಷನ್ ಆರಂಭಿಸಿದೆ. ಇತ್ತೀಚಿಗೆ ಚಿತ್ರದ ವಿಶೇಷ ಪಾತ್ರವನ್ನು ಪರಿಚಯಿಸಿದೆ. ಭೈರವ(ಪ್ರಭಾಸ್) ಜೊತೆ ಒಡನಾಡಿ ಆಗಿರುವ ಪುಟ್ಟ ರೋಬೊ ಚಿಟ್ಟಿಯನ್ನು ಪರಿಚಯಿಸಿತ್ತು. ಅದರ ಬಗ್ಗೆ ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ಸಿಗಲಿದೆ. ಕೀರ್ತಿ ಸುರೇಶ್ ಬುಜ್ಜಿಗೆ ವಾಯ್ಸ್ ಕೊಟ್ಟಿದ್ದಾರೆ. ಇನ್ನು 'ಕಲ್ಕಿ 2898 AD' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.

ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ 'ಕಲ್ಕಿ 2898 AD' ಸಿನಿಮಾ ನಿರ್ಮಾಣವಾಗುತ್ತಿದೆ. 'ಮಹಾನಟಿ' ಬಳಿಕ ನಾಗ್ ಅಶ್ವಿನ್ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಸಣ್ಣ ಸಣ್ಣ ಗ್ಲಿಂಪ್ಸ್ ರಿಲೀಸ್ ಆಗಿ ಸಿನಿಮಾ ಬಗ್ಗೆ ಹೈಪ್ ಹೆಚ್ಚಿಸಿದೆ.
'ಕಲ್ಕಿ 2898 AD' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ವೈರಲ್ ಆಗುತ್ತಿದೆ. ನೆಟ್‌ಫ್ಲಿಕ್ಸ್ ಹಾಗೂ ಅಮೇಜಾನ್ ಪ್ರೈಂ ಚಿತ್ರದ ಪೋಸ್ಟ್ ಓಟಿಟಿ ಸ್ಟ್ರೀಮಿಂಗ್ ರೈಟ್ಸ್ ಕೊಂಡುಕೊಂಡಿವೆ ಎನ್ನಲಾಗ್ತಿದೆ. ಬರೋಬ್ಬರಿ 175 ಕೋಟಿ ರೂ.ಗೆ ಡೀಲ್ ಕುದುರಿಸಿರುವ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. ಜೂನ್ 27ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅಲ್ಲಿಂದ ಮುಂದೆ 50 ದಿನಗಳ ಬಳಿಕ ಸಿನಿಮಾ ಓಟಿಟಿಗೆ ಎಂಟ್ರಿ ಕೊಡುವ ನಿರೀಕ್ಷೆಯಿದೆ.

ಹಿಂದಿ, ಇಂಗ್ಲೀಷ್ ವರ್ಷನ್ ನೆಟ್‌ಫ್ಲಿಕ್ಸ್ ಹಾಗೂ ತೆಲುಗು, ತಮಿಳು, ಕನ್ನಡ, ಮಲಯಾಳಂ ವರ್ಷನ್ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಬಹುದು ಎನ್ನಲಾಗ್ತಿದೆ. ದೊಡ್ಡ ಸಿನಿಮಾಗಳೇ ಇತ್ತೀಚೆಗೆ 20 ದಿನಕ್ಕೆಲ್ಲಾ ಓಟಿಟಿಗೆ ಬಂದುಬಿಡುತ್ತಿದೆ. ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಕೂಡ 28 ದಿನಕ್ಕೆಲ್ಲಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಬಳಿಕ ಕೂಡ ಸಿನಿಮಾ ಥಿಯೇಟರ್‌ಗಳಲ್ಲಿ ಸದ್ದು ಮಾಡಿತ್ತು.
ದ್ವಾಪಕ ಯುಗದಿಂದ ಶುರುವಾಗಿ ಇನ್ನು ಹಲವು ವರ್ಷಗಳ ಭವಿಷ್ಯ ಕಥೆ ಈ ಚಿತ್ರದಲ್ಲಿ ಇರುತ್ತದೆ.
'ಕಲ್ಕಿ' ಅವತಾರದ ಹಿನ್ನೆಲೆಯಲ್ಲಿ ಕಥೆಯನ್ನು ಹೇಳುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ರಾಣಾ, ರಾಜಮೌಳಿ ಸೇರಿದಂತೆ ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ದೇಶ ವಿದೇಶದ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಚಿತ್ರಕ್ಕಿದೆ.
'ಕಲ್ಕಿ' ಚಿತ್ರದ ಸೀಕ್ವೆಲ್ ಕೂಡ ಬರುವ ನಿರೀಕ್ಷೆಯಿದೆ. ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. 2ನೇ ಭಾಗದಲ್ಲಿ ಆ ಪಾತ್ರ ದೊಡ್ಡದಾಗಿ ಇರುತ್ತದೆ ಎನ್ನಲಾಗ್ತಿದೆ. ಇನ್ನು ಮಹಾಭಾರತದ ಅಶ್ವತ್ಥಾಮನ ಪಾತ್ರದಲ್ಲಿ ಬಿಗ್‌ಬಿ ಅಮಿತಾಬ್ ಬಚ್ಚನ್ ಬಣ್ಣ ಹಚ್ಚಿದ್ದಾರೆ. ಭೈರವನ ಜೋಡಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಚಿತ್ರದಲ್ಲಿ ಟೈಮ್ ಟ್ರಾವೆಲಿಂಗ್ ಕಾನ್ಸೆಪ್ಟ್ ಬಳಸಿಕೊಳ್ಳಲಾಗಿದ್ದು ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆ ಚಿತ್ರದಲ್ಲಿ ಹೇಳುತ್ತಿದ್ದಾರೆ.
'ಕಲ್ಕಿ' ಜೊತೆಗೆ ಪ್ರಭಾಸ್ 'ರಾಜಾ ಸಾಬ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಸಲಾರ್'-2 ಸಿನಿಮಾ ಕೂಡ ಅವರ ಕೈಯಲ್ಲಿದೆ. ಸಂದೀಪ್ ರೆಡ್ಡಿ ವಂಗಾ ಹಾಗೂ ಹನು ರಾಘವಪುಡಿ ನಿರ್ದೇಶನದ ಚಿತ್ರಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











