Salaar OTT: ಬಿಗ್ ಸರ್‌ಪ್ರೈಸ್: 'ಸಲಾರ್' ಓಟಿಟಿಗೆ ಎಂಟ್ರಿಗೆ ಕ್ಷಣಗಣನೆ, ಹೊಂಬಾಳೆ ಫಿಲ್ಮ್ಸ್ ಸ್ವೀಟ್ ಶಾಕ್
ಸೂಪರ್ ಹಿಟ್ 'ಸಲಾರ್' ಪಾರ್ಟ್-1 ಚೇಸ್‌ಫೈರ್ ಓಟಿಟಿ ರಿಲೀಸ್ ಘೋಷಣೆ ಆಗಿದೆ. ಕಳೆದ ತಿಂಗಳು ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡಿತ್ತು. ಇದೀಗ ತಿಂಗಳಿಗೂ ಮೊದಲೇ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಈ ಸುದ್ದಿ ಕೇಳಿ ಸಿನಿರಸಿಕರು ಖುಷಿಯಾಗಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಕಂಡಿತ್ತು. ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿತ್ತು. ಭಾರೀ ಮೊತ್ತಕ್ಕೆ ಡೀಲ್ ನಡೆದಿರುವುದಾಗಿ ವರದಿ ಆಗಿತ್ತು. ಸದ್ಯ ಹಿಂದಿ ಬಿಟ್ಟು ತೆಲುಗು, ಕನ್ನಡ, ತಮಿಳು, ಮಲಯಾಳಂ ವರ್ಷನ್ ಸ್ಟ್ರೀಮಿಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ ವರ್ಷವೇ ಚಿತ್ರದ ಸೀಕ್ವೆಲ್ ತೆರೆಗೆ ತರುವ ಪ್ರಯತ್ನಗಳು ನಡೀತಿದೆ.

ಕನ್ನಡದ 'ಉಗ್ರಂ' ಕಥೆಯನ್ನೇ ಸಾಕಷ್ಟು ಬದಲಾವಣೆ ಜೊತೆಗೆ ಬಹಳ ದೊಡ್ಡಮಟ್ಟದಲ್ಲಿ ಪ್ರಶಾಂತ್ ನೀಲ್ ಹೇಳಿದ್ದಾರೆ. ಕನ್ನಡದಲ್ಲಿ ಶ್ರೀಮುರಳಿ ಹಾಗೂ ತಿಲಕ್ ಮಾಡಿದ್ದ ಪಾತ್ರಗಳನ್ನು ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಿಭಾಯಿಸಿದ್ದಾರೆ. ದೇವ- ವರದರಾಜ್ ಬ್ರೊಮ್ಯಾನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಈಗಾಗಲೇ ತೆರೆಮೇಲೆ ಸಿನಿಮಾ ನೋಡಿದವರು, ನೋಡದವರು ಓಟಿಟಿಯಲ್ಲಿ ನೋಡಲು ಸಿದ್ಧರಾಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಸಲಾರ್' ಸಿನಿಮಾ ನಿರ್ಮಿಸಿದೆ. ತೆಲುಗು ಕಲಾವಿದರು ಜೊತೆಗೆ ಕನ್ನಡ ಕಲಾವಿದರು ಹಾಗೂ ತಂತ್ರಜ್ಞರು ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಶಾರುಖ್ ಖಾನ್ ನಟನೆಯ 'ಡಂಕಿ' ಎದುರು ಅಬ್ಬರಿಸಿದ್ದ 'ಸಲಾರ್' ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಟ್ಟಿದ್ದು ಸುಳ್ಳಲ್ಲ. ಅದನ್ನು ಮೀರಿ ಎರಡೂ ಸಿನಿಮಾಗಳು ಗೆದ್ದವು. 'ಸಲಾರ್' ಕೈ ಕೊಂಚ ಮೇಲಾಗಿತ್ತು.
ಅದಾಗಲೇ 'ಉಗ್ರಂ' ಸಿನಿಮಾ ನೋಡಿದ್ದ ಕೆಲವರಿಗೆ 'ಸಲಾರ್' ರುಚಿಸಲಿಲ್ಲ. ಇನ್ನು ತಮಿಳು ಪ್ರೇಕ್ಷಕರಿಂದಲೂ ಅಷ್ಟೇನು ರೆಸ್ಪಾನ್ಸ್ ಸಿಗಲಿಲ್ಲ. ಇನ್ನುಳಿದಂತೆ ತೆಲುಗು ರಾಜ್ಯಗಳಲ್ಲಿ, ಉತ್ತರ ಭಾರತ, ಕೇರಳ ಹಾಗೂ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಸಂಕ್ರಾಂತಿ ವೀಕೆಂಡ್‌ನಲ್ಲಿ ಕೂಡ ಸಿನಿಮಾ ಗಳಿಕೆ ಚೆನ್ನಾಗಿತ್ತು. ಇದೀಗ ದಿಢೀರನೇ ಚಿತ್ರವನ್ನು ಓಟಿಟಿಗೆ ತರುತ್ತಿರುವುದ ಅಚ್ಚರಿ ಮೂಡಿಸಿದೆ.
ಇಂದು(ಜನವರಿ 19) ಮಧ್ಯರಾತ್ರಿ 12 ಗಂಟೆಯಿಂದಲೇ 'ಸಲಾರ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದು ನಿಜಕ್ಕೂ ಸರ್‌ಪ್ರೈಸ್ ಎನ್ನಬಹುದು. ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ 28 ದಿನಕ್ಕೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿರೋದು ಅಚ್ಚರಿಯೇ ಸರಿ. ಹೆಚ್ಚು ಮೊತ್ತಕ್ಕೆ ಬೇಗ ಸ್ಟ್ರೀಮಿಂಗ್ ಮಾಡಲು ಒಪ್ಪಂದ ಆಗಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ.
ಖಾನ್ಸರ್ ಎನ್ನುವ ಕಾಲ್ಪನಿಕ ಪ್ರಪಂಚದಲ್ಲಿ ದೇವ ಹಾಗೂ ವರದ ಎನ್ನುವ ಇಬ್ಬರೂ ಆತ್ಮೀಯ ಸ್ನೇಹಿತರ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಆಪ್ತಮಿತ್ರರು ಆಜನ್ಮ ಶತ್ರುಗಳಾದರೆ ಏನಾಗುತ್ತದೆ ಎನ್ನುವುದನ್ನು 2 ಭಾಗಗಳಲ್ಲಿ ನೀಲ್ ಕಟ್ಟಿಕೊಡುತ್ತಿದ್ದಾರೆ. ಮುಂದಿನ ಭಾಗಕ್ಕೆ ಪೀಠಿಕೆಯ ಜೊತೆ ಜೊತೆಗೆ ಈ ಭಾಗದಲ್ಲಿ ಒಂದೊಳ್ಳೆ ಡ್ರಾಮಾ ತೋರಿಸಿ ಚಿತ್ರತಂಡ ಗೆದ್ದಿದೆ. ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ.

ಜಗಪತಿ ಬಾಬು, ಈಶ್ವರಿ ರಾವ್, ಟಿನ್ನು ಆನಂದ್ ಜೊತೆಗೆ ಕನ್ನಡ ಕಲಾವಿದರಾದ ಗರುಡ ರಾಮ್, ದೇವರಾಜ್, ಪ್ರಮೋದ್, ನವೀನ್ ಶಂಕರ್ ಸೇರಿದಂತೆ ದೊಡ್ಡ ತಾರಾಗಣ 'ಸಲಾರ್' ಚಿತ್ರದಲ್ಲಿದೆ. 'ಸಲಾರ್ ಪಾರ್ಟ್-2 ಶೌರ್ಯಾಂಗ ಪರ್ವ' ಹೆಸರಿನಲ್ಲಿ ಚಿತರದ ಸೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದ್ದು 2ನೇ ಭಾಗ ನೋಡಲು ಸಿನಿರಸಿಕರು ಕುತೂಹಲದಿಂದ ಕಾಯುವಂತಾಗಿದೆ.


Click it and Unblock the Notifications











