The Raja Saab OTT: ಓಟಿಟಿಗೆ 'ರಾಜಾಸಾಬ್'; ಪ್ರಭಾಸ್ ಕಾಮಿಡಿ ಹಾರರ್ ಥ್ರಿಲ್ಲರ್ ಎಲ್ಲಿ ನೋಡ್ಬೋದು
ಮಾರುತಿ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಬಹುಕೋಟಿ ವೆಚ್ಚದ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಭರ್ಜರಿ ಓಪನಿಂಗ್ ಪಡೆದಿದ್ದ ಸಿನಿಮಾ ಬಳಿಕ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಇದೀಗ ಸಿನಿಮಾ ಓಟಿಟಿಗೆ ಬರ್ತಿದೆ.
ವಿಪರ್ಯಾಸ ಅಂದ್ರೆ 25 ದಿನ ಪೂರೈಸುತ್ತಿದ್ದಂತೆ 'ದಿ ರಾಜಾಸಾಬ್' ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಈ ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಜನವರಿ 9ರಂದು ತೆರೆಗೆ ಬಂದಿತ್ತು. 'ಕಲ್ಕಿ 2898AD' ಬಳಿಕ ಪ್ರಭಾಸ್ ಹೀರೊ ಆಗಿ ನಟಿಸಿದ್ದ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿತ್ತು. ಸಂಜಯ್ ದತ್, ಜರೀನಾ ವಹಾಬ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. 300 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.

ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ 'ದಿ ರಾಜಾಸಾಬ್' ಸಿನಿಮಾ ಬಿಡುಗಡೆ ಆಗಿತ್ತು. ಸುಗ್ಗಿ ಸಂಭ್ರಮದಲ್ಲಿ ತೆಲುಗು, ತಮಿಳಿನಲ್ಲಿ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತದೆ. ಅದೇ ಕಾರಣಕ್ಕೆ ಚಿತ್ರವನ್ನು ವರ್ಷದ ಆರಂಭದಲ್ಲೇ ತೆರೆಗೆ ತರುವ ಪ್ರಯತ್ನ ನಡೆದಿತ್ತು. ಆದರೆ ಸಿನಿಮಾ ಮಾತ್ರ ಗೆಲ್ಲಲಿಲ್ಲ. ಪ್ರಭಾಸ್ ಸಿನಿಮಾ ಬಿಟ್ಟು ತೆಲುಗಿನ ಇನ್ನು 4 ಸಿನಿಮಾಗಳು ಬಿಡುಗಡೆಯಾಗಿ ಗೆದ್ದವು. ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು.
ರಾಜಾಸಾಬ್ ಓಟಿಟಿ
ಜಿಯೋ ಹಾಟ್‌ಸ್ಟರ್‌ಗೆ 'ದಿ ರಾಜಾಸಾಬ್' ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿತ್ತು. ಫೆಬ್ರವರಿ 6ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂದರೆ ತಿಂಗಳಿಗೂ ಮುನ್ನ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದೆ. ಓಟಿಟಿಗೆ ಪ್ರಿಯರಿಗೆ ಇದು ಖುಷಿಯ ವಿಚಾರ. ಆದರೆ ದೊಡ್ಡ ಸಿನಿಮಾಗಳು ಇಷ್ಟು ಬೇಗ ಓಟಿಟಿಗೆ ಬಂದರೆ ಜನ ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಬರಲು ಹಿಂದೇಟು ಹಾಕುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ರಾಜಾ ಸಾಬ್ ಬಾಕ್ಸಾಫೀಸ್
20 ದಿನಕ್ಕೆ 'ದಿ ರಾಜಾ ಸಾಬ್' ಸಿನಿಮಾ ವಿಶ್ವಾದ್ಯಂತ ಒಟ್ಟು 206.75 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಭಾರತದಲ್ಲಿ 144.57 ಕೋಟಿ ರೂ. ನೆಟ್ ಕಲೆಕ್ಷನ್ ಹಾಗೂ 172.5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಇನ್ನು ವಿದೇಶಗಳಲ್ಲಿ ಈ ಚಿತ್ರ 34.25 ಕೋಟಿ ರೂ. ಗಳಿಸಿದೆ ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ.
ನಿರ್ಮಾಪಕರಿಗೆ ನಷ್ಟ
'ಬಾಹುಬಲಿ' ಸರಣಿ ಸಿನಿಮಾಗಳ ಬಳಿಕ ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಆರಂಭದಲ್ಲಿ 'ದಿ ರಾಜಾ ಸಾಬ್' ಚಿಕ್ಕ ಸಿನಿಮಾ ಎಂದೇ ಭಾವಿಸಲಾಗಿತ್ತು. ಬಳಿಕ ಸಿನಿಮಾ ಬಜೆಟ್ ಹೆಚ್ಚಿತ್ತು. ಸದ್ಯ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮುಗಿದಿದೆ. ಒಟ್ಟಾರೆ ನಿರ್ಮಾಪಕರಿಗೆ 100 ಕೋಟಿ ರೂ. ನಷ್ಟ ತಂದೊಡ್ಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ.
ಓಟಿಟಿ ಡೀಲ್
ಅಂದಾಜು 150 ಕೋಟಿ ರೂ.ಗೆ 'ದಿ ರಾಜಾ ಸಾಬ್' ಚಿತ್ರದ ಓಟಿಟಿ ಡೀಲ್ ಕುದುರಿಸಲಾಗಿದೆ ಎಂದು ಹೇಳಲಾಗ್ತಿದೆ. ಹಾಗಾಗಿ ನಿರ್ಮಾಪಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಭಾರೀ ನಷ್ಟ ಚಿತ್ರದಿಂದ ಎದುರಾಗಿದೆ ಎನ್ನಲಾಗ್ತಿದೆ. ಪ್ರಭಾಸ್ ಮುಖ ನೋಡಿ ಭಾರೀ ಬಂಡವಾಳ ಹೂಡುವವರಿಗೆ ಇದು ಗುಣಪಾಠವಾಗಿದೆ. ಒಳ್ಳೆ ಕಥೆ ಸಿನಿಮಾ ಮಾಡಬೇಕು, ಸ್ಟಾರ್ ನಟನನ್ನು ನಂಬಿ ಹಣ ಹಾಕಿದ್ರೆ ವಾಪಸ್ ಬರುವುದು ಗ್ಯಾರಂಟಿ ಇಲ್ಲ ಎನ್ನುವುದು ಖಚಿತವಾದಂತಾಗಿದೆ.


Click it and Unblock the Notifications











