ಮನೆಯಲ್ಲಿ ''ಕಲ್ಕಿ 2898 AD'' ನೋಡಲು ದಿನವಲ್ಲ ತಿಂಗಳಾನುಗಟ್ಟಲೆ ಕಾಯಬೇಕು..!
ಒಂದಾದ ಮೇಲೊಂದು ಸೋಲು ನೋಡಿದ್ದ ಪ್ರಭಾಸ್, ಕಲ್ಕಿ 2898 ಎಡಿ ಚಿತ್ರದ ಮೂಲಕ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. ದಕ್ಷಿಣ-ಉತ್ತರ ಎನ್ನದೇ ಈ ಚಿತ್ರವನ್ನು ಮುಗಿ ಬಿದ್ದು ಜನ ನೋಡಿದ್ದಾರೆ. ಇನ್ನೂ ನೋಡ್ತಿದ್ದಾರೆ. ಇದರ ಪರಿಣಾಮ ಕಲ್ಕಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದಿದೆ. ಗಳಿಕೆ 1000 ಕೋಟಿಯ ಗಡಿಯನ್ನೂ ದಾಟಿದೆ. ಈ ಮೂಲಕ ಕಲ್ಕಿ 2898 ಎಡಿ ಸಿನಿಮಾ ಐತಿಹಾಸಿಕ ದಾಖಲೆ ಬರೆದ 07ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.
ಇಂಥಾ ಕಲ್ಕಿ ಚಿತ್ರ ನೋಡಲು ದುಬಾರಿ ಟಿಕೆಟ್ ಖರೀದಿಸುವ ಬದಲು ಮನೆಯಲ್ಲಿಯೇ ಸಕುಟುಂಬ ಸಮೇತ ನೋಡಬಹುದು ಎಂದು ಅನೇಕರು ಅಂದುಕೊಂಡಿದ್ದರು. ಅವರಿಗೆ ಈಗ ಕಲ್ಕಿ ಚಿತ್ರತಂಡ ನಿರಾಸೆಯನ್ನು ಮಾಡಿದೆ.

ಹೌದು, ಅಸಲಿಗೆ ಎಷ್ಟೇ ದೊಡ್ಡ ಸಿನಿಮಾ ಇರಲಿ 45 ದಿನಕ್ಕೆ ಆ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗುತ್ತೆ. ಇನ್ನೂ ಕೆಲವೊಮ್ಮೆ 25 ದಿನಕ್ಕೆ ಓಟಿಟಿಯಲ್ಲಿ ಚಿತ್ರ ಪ್ರಸಾರವಾದ ಉದಾಹರಣೆ ಕೂಡ ಇದೆ. ಕಲ್ಕಿ 2898ಎಡಿ ಈ ಸಂಪ್ರದಾಯವನ್ನೇ ಮುಂದುವರೆಸಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆಗಸ್ಟ್ 15ರ ಆಸು ಪಾಸಿನಲ್ಲಿ ಕಲ್ಕಿ ಸಿನಿಮಾವನ್ನು ನೋಡಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಈಗ ಕಲ್ಕಿ 2898 ಎಡಿ ಚಿತ್ರದ ಕುರಿತು ಹೊಸ ಸುದ್ದಿ ಕೇಳಿ ಬರುತ್ತಿದೆ. ದಿನ ಅಲ್ಲ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಅವರನ್ನ ನೋಡಲು ತಿಂಗಳಾನುಗಟ್ಟಲೆ ಕಾಯಬೇಕು ಎಂಬ ಮಾತು ಕೇಳಿ ಬರುತ್ತಿದೆ.
ನಿಮಗೆ ಗೊತ್ತಿರಲಿ.. ಕಲ್ಕಿ 2898 ಚಿತ್ರಕ್ಕೆ ಹತ್ ಹತ್ರ 600 ಕೋಟಿ ಖರ್ಚು ಮಾಡಲಾಗಿದೆ. ಹೀಗಾಗಿ ಅದ್ಧೂರಿತನದಿಂದ ಕೂಡಿರುವ ಹಾಲಿವುಡ್ ಸ್ಟೈಲ್ ನಲ್ಲಿ ಮೂಡಿ ಬಂದಿರುವ ಕಲ್ಕಿಯನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡಲಿ ಅನ್ನುವ ಆಸೆ ನಿರ್ಮಾಪಕರದ್ದು. ಇನ್ನೂ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿದ್ದಾರೆ. ಒಪ್ಪಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದು ಸಾವಿರ ಕೋಟಿ ಹಣ ಹರಿದು ಬಂದಿದೆ. ಹೀಗಿರುವಾಗ ಆತುರಾತುರವಾಗಿ ಓಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿರುವ ಚಿತ್ರದ ನಿರ್ಮಾಪಕ ಅಶ್ವಿನಿ ದತ್, ಹತ್ತು ವಾರದ ನಂತರವಷ್ಟೇ ಕಲ್ಕಿ 2898 ಎಡಿ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾತು ಈಗ ಹೈದ್ರಾಬಾದ್ To ಮುಂಬೈ ಕೇಳಿ ಬರುತ್ತಿದೆ.

ಈ ಹತ್ತು ವಾರದ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ಜೂನ್ 27ಕ್ಕೆ ತೆರೆಗೆ ಬಂದ ಕಲ್ಕಿ 2898 ಸಿನಿಮಾ ಓಟಿಟಿಯಲ್ಲಿ ಪ್ರಸಾರವಾಗುವುದು ಸೆಪ್ಟೆಂಬರ್‌ನಲ್ಲಿಯೇ. ಯಾರಿಗೆ ಗೊತ್ತು ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಲ್ಕಿ 2898 ಓಟಿಟಿಯಲ್ಲಿ ಪ್ರಸಾರವಾದರು ಆಗಬಹುದು. ಅಂದ್ಹಾಗೇ ಈ ಚಿತ್ರದ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂ ಹಾಗೂ ನೆಟ್‌ಫ್ಲಿಕ್ಸ್ ಪಾಲಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ವರ್ಷನ್‌ಗಳು ಪ್ರೈಂ ವೀಡಿಯೋಗೆ ಬರೋದು ಪಕ್ಕಾ ಆಗಿದೆ. ಹಿಂದಿ ವರ್ಷನ್ ಮಾತ್ರ ನೆಟ್‌ಫ್ಲಿಕ್ಸ್‌ಗೆ ಬರುತ್ತೆ ಎಂಬ ಸುದ್ದಿ ಇದೆ.


Click it and Unblock the Notifications











