'ಫ್ರೆಂಚ್ ಬಿರಿಯಾನಿ' ಉಣಬಡಿಸಲಿದ್ದಾರೆ ಪುನೀತ್: ನಾಯಕನಾಗಿ ದಾನಿಶ್ ಸೇಠ್
ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಗುಣಮಟ್ಟದ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ. ಹೊಸಬರಿಗೆ, ಪ್ರತಿಭಾವಂತರಿಗೆ ಅವಕಾಶ ನೀಡುವ ಜೊತೆ-ಜೊತೆಗೆ ಉತ್ತಮ ಕತೆಯುಳ್ಳ, ಪೂರ್ಣ ಮಾಸ್ ಅಲ್ಲದ ಅಲ್ಪ ಭಿನ್ನ ಮಾದರಿಯ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ.
Recommended Video
ತಮ್ಮ ಪಿಆರ್‌ಕೆ ಪ್ರೊಡಕ್ಷನ್‌ನಿಂದ ಈಗಾಗಲೇ ಕವಲುದಾರಿ, ಮಾಯಾಬಜಾರ್ ಅಂಥಹಾ ಸಿನಿಮಾಗಳನ್ನು ನೀಡಿರುವ ಪುನೀತ್ ರಾಜ್‌ಕುಮಾರ್. ಇದೀಗ ಮುಂದಿನ ಸಿನಿಮಾವಾಗಿ 'ಫ್ರೆಂಚ್ ಬಿರಿಯಾನಿ' ಎಂಬ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ.
ಈ ಸಿನಿಮಾವನ್ನು ಪ್ರತಿಭಾವಂತ ಯುವ ನಿರ್ದೇಶಕ ಪನ್ನಗಾಭರಣ ನಿರ್ದೇಶಿಸುತ್ತಿದ್ದು, ನಟ, ನಿರೂಪಕ ದಾನಿಶ್ ಸೇಠ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಆಟೋ ಡ್ರೈವರ್, ಫ್ರೆಂಚ್ ವ್ಯಕ್ತಿ ನಡುವಿನ ಕತೆ
ಇದೊಂದು ಭಿನ್ನ ಕತೆಯ ಸಿನಿಮಾ ಆಗಿದ್ದು, ಶಿವಾಜಿ ನಗರದ ಆಟೋ ಡ್ರೈವರ್ ಒಬ್ಬ ಹಾಗೂ ಫ್ರೆಂಚ್ ವ್ಯಕ್ತಿಯೊಬ್ಬನ ನಡುವೆ ನಡೆವ ಕತೆಯಾಗಿದೆ. ಕೇವಲ ಮೂರು ದಿನದ ಘಟನೆಗಳನ್ನು ಸಿನಿಮಾ ಒಳಗೊಂಡಿದೆಯಂತೆ.

ಪನ್ನಗಾಭರಣ ವೈಯಕ್ತಿಕ ಅನುಭವ
ಸಿನಿಮಾ ಕತೆಯನ್ನು ಅವಿನಾಶ್ ಬೆಲಕೇಲ ಬರೆದಿದ್ದಾರೆ. ಈ ಸಿನಿಮಾ ನಿರ್ದೇಶಕ ಪನ್ನಗಾಭರಣ ಅವರ ವೈಯಕ್ತಿಕ ಅನುಭವ ಆಧರಿಸಿದೆಯಂತೆ. ಸಿನಿಮಾಕ್ಕೆ ಸಂಗೀತವನ್ನು ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ನೀಡಿದ್ದಾರೆ.

ಹಲವು ಹೊಸ ಮತ್ತು ಅನುಭವಿ ನಟರು
ಸಿನಿಮಾದಲ್ಲಿ ದಾನಿಶ್ ಸೇಟ್ ಹೊರತಾಗಿ, ನಾಗಭೂಶಣ್, ದಿಶಾ ಮದನ್, ಫ್ರೆಂಚ್ ವಲಸಿಗನಾಗಿ ಸಲಾ ಯೂಸಫ್, ಸಿಂಧು ಶ್ರೀನಿವಾಸಮೂರ್ತಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಲಾಕ್‌ಡೌನ್ ನಂತರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯಲಿದೆ.

ಜೂನ್ ವೇಳೆಗೆ ಸಿನಿಮಾ ತೆರೆಗೆ ಬರಲಿದೆ
ಜೂನ್ ವೇಳೆಗೆ ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ಪನ್ನಗಾಭರಣ ಹೇಳಿದ್ದು, ಕೊರೊನಾ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನೇರವಾಗಿ ಓಟಿಟಿ ಗೆ ಬಿಡುಗಡೆ ಮಾಡುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದಿದ್ದಾರೆ.


Click it and Unblock the Notifications











