Thangalaan OTT: ಚಿಯಾನ್ ವಿಕ್ರಂ 'ತಂಗಲಾನ್' ಓಟಿಟಿ ಸ್ಟ್ರೀಮಿಂಗ್ ಡೇಟ್ ಫಿಕ್ಸ್
ಚಿಯಾನ್ ವಿಕ್ರಂ ನಟನೆಯ 'ತಂಗಲಾನ್' ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬಂದಿತ್ತು. ಆದರೆ ಈವರೆಗೆ ಸಿನಿಮಾ ಓಟಿಟಿಗೆ ಬಂದಿಲ್ಲ. ಸಿನಿಮಾ ತೆರೆಕಂಡು ತಿಂಗಳಿಗೆ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ನಡೆದಿತ್ತು. ಆದರೆ ತಡವಾಗಿತ್ತು. ಇದೀಗ ನಿರ್ಮಾಪಕರು ಈ ಬಗ್ಗೆ ಮಾತನಾಡಿದ್ದಾರೆ.
ಪಾ. ರಂಜಿತ್ ನಿರ್ದೇಶನದ 'ತಂಗಲಾನ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಒರಿಜಿನಲ್ 'KGF' ಕಥೆ ಎಂದು ಈ ಚಿತ್ರವನ್ನು ಬಿಂಬಿಸಲಾಗಿತ್ತು. ಆದರೆ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಒಬ್ಬೊಬ್ಬರು ಒಂದೊಂದು ರೀತಿ ಚಿತ್ರವನ್ನು ಬಣ್ಣಿಸಿದ್ದರು. ಕೆಲವರಿಗೆ ಬಹಳ ಇಷ್ಟವಾದರೆ ಬಹುತೇಕರು ಸಿನಿಮಾ ಚೆನ್ನಾಗಿಲ್ಲ ಎಂದುಬಿಟ್ಟರು.

ಬ್ರಿಟೀಷರು ಕರ್ನಾಟಕ, ತಮಿಳುನಾಡು ಗಡಿಯ ಬುಡಕಟ್ಟು ಜನಾಂಗದವರ ಸಹಾಯ ಪಡೆದು 'KGF' ಚಿನ್ನದ ಗಣಿಯನ್ನು ಹುಡುಕುವುದು, ಅಲ್ಲಿಂದ ಚಿನ್ನ ಅಗೆದು ತರಲು ಯತ್ನಿಸುವ ಕಥೆ ಚಿತ್ರದಲ್ಲಿದೆ. ಅದನ್ನು ಪಾ. ರಂಜಿತ್ ವಿಭಿನ್ನವಾಗಿ ತೆರೆಗೆ ತಂದಿದ್ದರು. ಅಸ್ಪೃಶ್ಯತೆ, ಜಾತಿ ಹೀಗೆ ಬೇರೆ ಬೇರೆ ವಿಚಾರಗಳನ್ನು ಈ ಕಥೆಯಲ್ಲಿ ಚರ್ಚಿಸಿದ್ದರು. ತಮಿಳ್ ಪ್ರಭ ಹಾಗೂ ಪಾ. ರಂಜಿತ್ ಸೇರಿ ಈ ಚಿತ್ರಕ್ಕೆ ಕಥೆ ಬರೆದಿದ್ದರು.
ಸ್ಟುಡಿಯೋ ಗ್ರೀನ್ ಹಾಗೂ ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ಗಳಲ್ಲಿ 'ತಂಗಲಾನ್' ಸಿನಿಮಾ ನಿರ್ಮಾಣವಾಗಿತ್ತು. ಚಿಯಾನ್ ವಿಕ್ರಂ ಟೈಟಲ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಎರಡ್ಮೂರು ಬೇರೆ ಬೇರೆ ಪಾತ್ರಗಳಲ್ಲಿ ತೆರೆಮೇಲೆ ಬಂದು ಪ್ರೇಕ್ಷಕರ ಹುಬ್ಬೇರಿಸಿದ್ದರು. ವಿಕ್ರಂ ಜೊತೆಗೆ ಪಾರ್ವತಿ ಮೆನನ್, ಮಾಳವಿಕಾ ಮೋಹನನ್, ಡೇನಿಯಲ್ ಕ್ಯಾಲ್ಟಗಿರೋನ್ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ. ಅಂದಾಜು 100 ರಿಂದ 150 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಾ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿತ್ತು.
ಪಾ. ರಂಜಿತ್ ಪ್ರಯತ್ನ ಹಾಗೂ ವಿಕ್ರಂ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. 1850ರ ಕಾಲಘಟ್ಟದಲ್ಲಿ 'ತಂಗಲಾನ್' ಚಿನ್ನದ ಕಥೆಯನ್ನು ಹೇಳಲಾಗಿದೆ. ಕನ್ನಡದ 'KGF' ಚಿತ್ರದಲ್ಲಿ ಚಿತ್ರದ ಗಣಿಯ ಸುತ್ತಾ ಒಂದು ಕಾಲ್ಪನಿಕ ಆಕ್ಷನ್ ಸಿನಿಮಾ ಕಟ್ಟಿಕೊಡಲಾಗಿತ್ತು. ಆದರೆ 'ತಂಗಲಾನ್' ಚಿತ್ರದಲ್ಲಿ 'KGF' ಚಿನ್ನ ತೆಗೆಯಲು ಆರಂಭದಲ್ಲಿ ಏನೆಲ್ಲಾ ಕಸರತ್ತುಗಳು ನಡೆದಿರಬಹುದು ಎನ್ನುವ ಕಥೆಯಿದೆ.

'ತಂಗಲಾನ್' ಸೀಕ್ವೆಲ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಮೊದಲ ಭಾಗದ ಫಲಿತಾಂಶ ನೋಡಿದ ಬಳಿಕ ಎರಡನೇ ಭಾಗ ಮಾಡುವುದು ಅನುಮಾನ ಎನ್ನಲಾಗ್ತಿದೆ. ಇದೆಲ್ಲದರ ನಡುವೆ 2 ತಿಂಗಳು ಕಳೆದರೂ ಯಾಕೆ ಸಿನಿಮಾ ಓಟಿಟಿಗೆ ಬಂದಿಲ್ಲ ಎನ್ನುವ ಬಗ್ಗೆ ನಿರ್ಮಾಪಕರಾದ ಜ್ಞಾನವೇಲ್ ರಾಜ ಮಾತನಾಡಿದ್ದಾರೆ. ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಅಪ್‌ಡೇಟ್ ಸಹ ಕೊಟ್ಟಿದ್ದಾರೆ.
ದೀಪಾವಳಿ ಹಬ್ಬಕ್ಕೆ 'ತಂಗಲಾನ್' ಚಿತ್ರವನ್ನು ಓಟಿಟಿಗೆ ತರಲು ನೆಟ್‌ಫ್ಲಿಕ್ಸ್ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ಹೇಳಿಕೇಳಿ 'ತಂಗಲಾನ್' ದೊಡ್ಡ ಸಿನಿಮಾ. ಹಾಗಾಗಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡಿದರೆ ಚೆನ್ನಾಗಿರುತ್ತದೆ. ಅದಕ್ಕೆ ಈ ನಿರ್ಣಯ. ಅದು ಬಿಟ್ಟು ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಯಾವುದೇ ಸಮಸ್ಯೆ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುಖಾಸುಮ್ಮನೆ ಚರ್ಚೆ ನಡೆಯುತ್ತಿದೆ ಅಷ್ಟೆ.
ಬೆಳಕಿನ ಹಬ್ಬದ ಸಡಗರಲ್ಲಿ ಅಕ್ಟೋಬರ್ 31ರ ರಾತ್ರಿ 12 ಗಂಟೆಗೆ 'ತಂಗಲಾನ್' ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ. ಈ ಬಾರಿ ದೀಪಾವಳಿಗೆ ಯಾವುದೇ ದೊಡ್ಡ ತಮಿಳು ಸಿನಿಮಾ ತೆರೆಗೆ ಬರ್ತಿಲ್ಲ. ಹಾಗಾಗಿ ತಮಿಳು ಪ್ರೇಕ್ಷಕರಿಗೆ 'ತಂಗಲಾನ್' ಸಿನಿಮಾ ಉತ್ತಮ ಆಯ್ಕೆ ಆಗುವ ನಿರೀಕ್ಷೆಯಿದೆ.
Disclaimer:
ದೀಪಾವಳಿಗೆ ಸಿನಿಮಾ ಓಟಿಟಿಗೆ ಬರುತ್ತದೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ನೆಟ್‌ಫ್ಲಿಕ್ಸ್ ಅಧಿಕೃತ ಮಾಹಿತಿ ನೀಡಿಲ್ಲ.


Click it and Unblock the Notifications











