ನೆಟ್‌ಫ್ಲಿಕ್ಸ್‌ನಲ್ಲಿ ಏಕಿಲ್ಲ ಕನ್ನಡ ಚಿತ್ರಗಳು? ದೊಡ್ಡ ಪ್ರಶ್ನೆ ಎತ್ತಿದ ಅಪ್ಪು ಫ್ಯಾನ್ಸ್
ಕನ್ನಡ ಚಿತ್ರರಂಗ ಎಷ್ಟೇ ಬೆಳೆದರೂ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದೆ. ಇಂದಿಗೂ ಸಹ ಚಿತ್ರಗಳ ಕೆಲ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮಾಡಲು, ಸೌಂಡ್ ಮಿಕ್ಸಿಂಗ್ ಮಾಡಲು, ಸೆಟ್ ಬಳಸಿ ಚಿತ್ರೀಕರಿಸಲು ನೆರೆ ರಾಜ್ಯಗಳಲ್ಲಿನ ಸ್ಟುಡಿಯೊ ಹಾಗೂ ಫಿಲ್ಮ್ ಸಿಟಿಗಳ ಮೇಲೆ ಅವಲಂಬಿತವಾಗಿದೆ ಕನ್ನಡ ಚಿತ್ರರಂಗ.
ಹೀಗೆ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಮಾತ್ರವಲ್ಲದೇ ಬಿಡುಗಡೆಯ ನಂತರವೂ ಸಹ ಕನ್ನಡ ಚಿತ್ರಗಳಿಗೆ ಎದುರಾಗುತ್ತಿರುವ ಸಮಸ್ಯೆ ಒಂದೆರಡಲ್ಲ. ಈ ಹಿಂದೆ ಪರಭಾಷಾ ಸಿನಿಮಾಗಳು ಬಿಡುಗಡೆಯಾದಾಗ ಕನ್ನಡ ಚಿತ್ರಗಳಿಗೆ ಬೆಂಗಳೂರಿನಲ್ಲಿಯೇ ಚಿತ್ರಮಂದಿರಗಳು ಸಿಗುತ್ತಿಲ್ಲ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಲ್ಲಿ ಬೆಲೆ ಇಲ್ಲ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿತ್ತು.
ಅದೇ ರೀತಿ ಇದೀಗ ವಿವಿಧ ಓಟಿಟಿ ವೇದಿಕೆಗಳಲ್ಲಿ ಕನ್ನಡ ಚಲನಚಿತ್ರಗಳಿಗೆ ಮನ್ನಣೆ ಸಿಗುತ್ತಿಲ್ಲ, ಕನ್ನಡ ಚಿತ್ರಗಳನ್ನು ಖರೀದಿಸುವಲ್ಲಿ ಓಟಿಟಿ ಕಂಪೆನಿಗಳು ಆಸಕ್ತಿ ತೋರುತ್ತಿಲ್ಲ ಎಂಬ ಸಮಸ್ಯೆಗಳು ಹಾಗೂ ಆರೋಪಗಳು ಹುಟ್ಟಿಕೊಂಡಿವೆ.
ಹೌದು, ಅದೆಷ್ಟೋ ಕನ್ನಡ ಚಿತ್ರಗಳ ಓಟಿಟಿ ಹಕ್ಕು ಇನ್ನೂ ಸಹ ಮಾರಾಟವಾಗದೇ ಹಾಗೆಯೇ ಉಳಿದಿರುವ ಉದಾಹರಣೆಗಳಿವೆ. ಈ ಸಮಸ್ಯೆಯ ವಿರುದ್ಧ ಇದೀಗ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಆನ್‌ಲೈನ್‌ನಲ್ಲಿ ದನಿ ಎತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಹೌದು, ಅಪ್ಪು ಡೈನಾಸ್ಟಿ ಎಂಬ ಟ್ವಿಟರ್ ಪುಟದಲ್ಲಿ ಟ್ವಿಟರ್ ಸ್ಪೇಸ್ ಸೃಷ್ಟಿಸಿ ಇಲ್ಲಿ ಕನ್ನಡ ಚಿತ್ರಗಳು ನೆಟ್‌ಫ್ಲಿಕ್ಸ್‌ನಲ್ಲಿ ಏಕಿಲ್ಲ ಎಂಬ ಸಮಸ್ಯೆಯ ಕುರಿತು ಚರ್ಚಿಸಲು ಮುಂದಾಗಿದ್ದಾರೆ.
ಈ ಚರ್ಚೆಯಲ್ಲಿ ಕನ್ನಡದ ಕೆಲ ಕಲಾವಿದರು, ಪತ್ರಕರ್ತರು ಹಾಗೂ ಸಿನಿ ರಸಿಕರು ಭಾಗವಹಿಸಲಿದ್ದು, ಇದಕ್ಕೆ ಕಾರಣವೇನು ಹಾಗೂ ಇದರಿಂದ ಆಗುತ್ತಿರುವ ಹಿನ್ನಡೆಗಳೇನು ಎಂಬುದರ ಕುರಿತು ಉತ್ತರಗಳು ಸಿಗುವ ಸಾಧ್ಯತೆಗಳಿವೆ.

ಇನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ನೆಟ್‌ಫ್ಲಿಕ್ಸ್ ಸೌತ್ ಯೋಜನೆಯನ್ನು ಜಾರಿಗೊಳಿಸಿ ಹೆಚ್ಚೆಚ್ಚು ದಕ್ಷಿಣ ಭಾರತದ ಸಿನಿಮಾಗಳನ್ನು ಖರೀದಿಸುವ ಕೆಲಸಕ್ಕೆ ಕೈಹಾಕಿತು. ಈ ಯೋಜನೆಯಡಿಯಲ್ಲಿ ತಮಿಳು ಹಾಗೂ ತೆಲುಗಿನ ಹಲವಾರು ಚಿತ್ರಗಳ ಓಟಿಟಿ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್ ಕನ್ನಡದ ಚಿತ್ರಗಳನ್ನು ಕಡೆಗಣಿಸಿತ್ತು. ಕನ್ನಡದ ಸಿನಿಮಾಗಳು ದೇಶದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವಾಗ ಇಂತಹ ನಡೆ ಏಕೆ ಎಂದು ಕನ್ನಡ ಸಿನಿ ರಸಿಕರು ನೆಟ್‌ಫ್ಲಿಕ್ಸ್ ವಿರುದ್ಧ ಕಿಡಿಕಾರಿದ್ದರು.
ಅಮೆಜಾನ್ ಪ್ರೈಮ್ ಹಾಗೂ ಇನ್ನುಳಿದ ಓಟಿಟಿ ವೇದಿಕೆಗಳಲ್ಲಿ ಕನ್ನಡ ಚಿತ್ರಗಳು ಸಮಾಧಾನಕರ ಸಂಖ್ಯೆಯಲ್ಲಿದ್ದು, ವಿಶ್ವದಾದ್ಯಂತ ಬಳಕೆದಾರರನ್ನು ಹೊಂದಿರುವ ನೆಟ್‌ಫ್ಲಿಕ್ಸ್‌ನಲ್ಲಿ ಏಕಿಲ್ಲ ಎಂಬ ಪ್ರಶ್ನೆ ಇದೀಗ ಎದ್ದಿದೆ. ಹೀಗೆ ವಿಶ್ವದಾದ್ಯಂತ ಬಳಕೆದಾರರನ್ನು ಹೊಂದಿರುವ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಿದರೆ ಕನ್ನಡ ಚಿತ್ರಗಳನ್ನು ವೀಕ್ಷಿಸುವ ವೀಕ್ಷಕರ ಸಂಖ್ಯೆ ಮತ್ತಷ್ಟು ಏರಲಿದೆ ಎಂಬುದು ಇಲ್ಲಿ ಗಮನಾರ್ಹ.


Click it and Unblock the Notifications











