ಓಟಿಟಿಯಿಂದ ಮಾಯವಾಗಿದ್ದ 'ಗಂಧದಗುಡಿ' ಯೂಟ್ಯೂಬ್‌ನಲ್ಲಿ ಪ್ರತ್ಯಕ್ಷ; ನೋಡೋಕೆ ಎಷ್ಟು ಹಣ ಕೊಡಬೇಕು ಗೊತ್ತಾ?
ಪುನೀತ್ ರಾಜ್‌ಕುಮಾರ್ ಕನಸಿನ ಡಾಕ್ಯೂ ಸಿನಿಮಾ 'ಗಂಧದಗುಡಿ' ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಬಂದಿದೆ. ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ಅಮೇಜಾನ್ ಪ್ರೈಂಗೆ ಬಂದಿತ್ತು. ತಿಂಗಳ ಹಿಂದೆ ಅಲ್ಲಿಂದ ಮಾಯವಾಗಿತ್ತು. ದಿಢೀರನೆ ಸಿನಿಮಾ ಯಾಕೆ ತೆಗೆದರು? ಎನ್ನುವ ಬಗ್ಗೆ ಚರ್ಚೆ ನಡೀತಿತ್ತು.
ಅಮೋಘವರ್ಷ ನಿರ್ದೇಶನದಲ್ಲಿ ಕರ್ನಾಟಕದ ಕಾಡು ಮೇಡು ಅಲೆದು ಅಪ್ಪು ಈ ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ರಿಲೀಸ್ ವೇಳೆಗೆ ಪವರ್ ಸ್ಟಾರ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು. 'ಗಂಧದಗುಡಿ' ಚಿತ್ರವನ್ನು ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ನೋಡಿ ಗೆಲ್ಲಿಸಿದ್ದರು. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲೇ ಸಿನಿಮಾ ಬಿಡುಗಡೆ ಆಗಿತ್ತು. ಪುನೀತ್ ರಾಜ್‌ಕುಮಾರ್ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಅಮೋಘ ವರ್ಷ ಅದಕ್ಕೂ ಮುನ್ನ ಕೂಡ ಕೆಲ ಡಾಕ್ಯೂಮೆಂಟರಿಗಳನ್ನು ಮಾಡಿದ್ದರು. ಆದರೆ 'ಗಂಧದಗುಡಿ'ಯನ್ನು ಸಿಲ್ವರ್‌ಸ್ಕ್ರೀನ್‌ಗಳಲ್ಲಿ ತೋರಿಸಲು ಅಪ್ಪು ಮನಸ್ಸು ಮಾಡಿದ್ದರು. ಅದಕ್ಕೆ ಅಮೋಘವರ್ಷ ಕೈ ಜೋಡಿಸಿದ್ದರು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಪ್ರಪಂಚಕ್ಕೆ ತೋರಿಸುವ ಸಾಹಸ ಮಾಡಲಾಗಿತ್ತು. ತೆರೆಮೇಲೆ ದೃಶ್ಯಕಾವ್ಯದಂತೆ 'ಗಂಧದಗುಡಿ' ಅನಾವರಣವಾಗಿತ್ತು.
ಪುನೀತ್ ರಾಜ್‌ಕುಮಾರ್ ನಟಿಸಿದ ಅಷ್ಟೂ ಕಮರ್ಷಿಯಲ್ ಸಿನಿಮಾಗಳು ಒಂದು ತೂಕವಾದರೆ 'ಗಂಧದಗುಡಿ' ಮತ್ತೊಂದು ತೂಕ ಎನ್ನುವಂತಿದೆ. ಬೇರೆ ಸಿನಿಮಾಗಳಲ್ಲಿ ಪವರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದ ಅಪ್ಪು ಈ ಸಿನಿಮಾದಲ್ಲಿ ತಾವು ತಾವಾಗಿಯೇ ಕಾಣಿಸಿಕೊಂಡಿದ್ದರು. ಚಿಕ್ಕಂದಿನಿಂದಲೂ ಹಾವುಗಳಂದ್ರೆ ಅಪ್ಪುಗೆ ಬಹಳ ಭಯವಿತ್ತು. ಆದರೂ ಆಗುಂಬೆ ಕಾಡುಗಳಲ್ಲಿ ಸುತ್ತಾಡಿ ಹಾವುಗಳ ಬಗ್ಗೆ ಮಾಹಿತಿ ಪಡೆದಿದ್ದರು. ಇನ್ನೂ ಸಾಗರದಾಳಕ್ಕೆ ಇಳಿದು ಮತ್ಸಲೋಕದ ಪರಿಚಯ ಮಾಡಿಸಿದ್ದರು.

ಅಮೇಜಾನ್ ಪ್ರೈಂನಲ್ಲಿ ದಿಢೀರನೆ ಸಿನಿಮಾ ತೆಗೆದಿದ್ದು ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಶೀಘ್ರದಲ್ಲೇ ಸಿನಿಮಾ ಅಪ್‌ಲೋಡ್ ಆಗುತ್ತದೆ ಎಂದು ಭಾವಿಸಿದ್ದರು. ಆದರೆ ಬೇರೆ ಬೇರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ವೀಕ್ಷಕರು ಹಣ ಕೊಟ್ಟು ಸಿನಿಮಾ ನೋಡಬೇಕಿದೆ. ಸದ್ಯ ಯುಟ್ಯೂಬ್, ಐಟ್ಯೂನ್ಸ್, ಗೂಗಲ್ ಟಿವಿ ಹಾಗೂ ಆಪಲ್ ಟಿವಿಯಲ್ಲಿ 'ಗಂಧದಗುಡಿ' ಸಿನಿಮಾ ಸಿಗುತ್ತಿದೆ.
ಸದ್ಯ ಯೂಟ್ಯೂಬ್‌ನಲ್ಲಿ 100 ರೂಪಾಯಿಗೆ 'ಗಂಧದಗುಡಿ' ಸಿನಿಮಾ ಬಾಡಿಗೆಗೆ ಪಡೆಯಬಹುದು. ಅದೇ ರೀತಿ 150 ರೂಪಾಯಿಗೆ ಸಿನಿಮಾ ಕೊಂಡುಕೊಳ್ಳುವ ಅವಕಾಶವಿದೆ. ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಇದೇ ದರ ನಿಗದಿಪಡಿಸಲಾಗಿದೆ. 9 ತಿಂಗಳ ಅವಧಿಗೆ ಮಾತ್ರ ಅಮೇಜಾನ್ ಪ್ರೈಂ ಜೊತೆ ಸಿನಿಮಾ ಸ್ಟ್ರೀಮಿಂಗ್‌ಗೆ ಒಪ್ಪಂದ ಆಗಿತ್ತು, ಅದಕ್ಕೆ ತೆಗೆದರು ಎಂದು ಕೆಲವರು ಹೇಳುತ್ತಿದ್ದಾರೆ.
ಇತ್ತೀಚೆಗೆ ಅಮೇಜಾನ್ ಪ್ರೈಂ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದೆ. ಒಂದು ವೇಳೆ ಕೊಂಡುಕೊಂಡರೂ 6 ತಿಂಗಳು, 9 ತಿಂಗಳಿಗೆ ಮಾತ್ರ ಒಪ್ಪಂದ ಮಾಡಿಕೊಳ್ಳುತ್ತಿದೆ ಎನ್ನಲಾಗ್ತಿದೆ. 'ಗಂಧದಗುಡಿ' ರೀತಿಯಲ್ಲೇ ಇನ್ನು ಕೆಲ ಸಿನಿಮಾಗಳನ್ನು ಇದೇ ರೀತಿ ತೆಗೆದು ಹಾಕಿದೆ.
ಅಂದಹಾಗೆ ಅಕ್ಟೋಬರ್ 28, 2022ರಂದು 'ಗಂಧದಗುಡಿ' ಸಿನಿಮಾ ಥಿಯೇಟರ್‌ಗೆ ಬಂದಿತ್ತು. ಇಡೀ ಚಿತ್ರರಂಗ ಚಿತ್ರವನ್ನು ನೋಡಿ ಖುಷಿಪಟ್ಟಿತ್ತು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿ ಅಪ್ಪುನ ಕಣ್ತುಂಬಿಕೊಂಡಿದ್ದರು. ಕರುನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವ ವೈವಿಧ್ಯ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸಿದ ಈ ಡಾಕ್ಯು ಸಿನಿಮಾ ಸೂಪರ್ ಹಿಟ್ ಆಗಿತ್ತು.
ಅಜನೀಶ್ ಲೋಕನಾಥ್ ಸಂಗೀತ, ಪ್ರತೀಕ್ ಶೆಟ್ಟಿ ಛಾಯಾಗ್ರಹಣ 'ಗಂಧದಗುಡಿ' ಚಿತ್ರಕ್ಕಿತ್ತು. ಮಾರ್ಚ್ 18, 2023ರಂದು ಅಪ್ಪು ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ಓಟಿಟಿಗೆ ಬಂದಿತ್ತು.


Click it and Unblock the Notifications











