Raayan Ott Release Date: ಧನುಷ್ ಬ್ಲಾಕ್‌ಬಸ್ಟರ್ 'ರಾಯನ್' ಓಟಿಟಿ ರಿಲೀಸ್ ಡೇಟ್ ಘೋಷಣೆ
ಈ ವರ್ಷ ಸತತ ಸೋಲಿನಿಂದ ಕಂಗೆಟ್ಟಿದ್ದ ತಮಿಳು ಚಿತ್ರರಂಗಕ್ಕೆ 'ರಾಯನ್' ಗೆಲುವಿನ ಟಾನಿಕ್ ಕೊಟ್ಟಿದ್ದಾರೆ. ಧನುಷ್ ನಿರ್ದೇಶಿಸಿ ನಟಿಸಿರುವ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.
ಧನುಷ್ ವೃತ್ತಿ ಜೀವನನದ ಮೈಲಿಗಲ್ಲು ಸಿನಿಮಾ ಇದು. ಹಾಗಾಗಿ ಭಾರೀ ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನು ಧನುಷ್ ನಟನೆಯ 50ನೇ ಸಿನಿಮಾ ತಲುಪಿತ್ತು. ಅದೇ ಕಾರಣಕ್ಕೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ಜುಲೈ 26ಕ್ಕೆ ತೆರೆಗೆ ಬಂದಿದ್ದ ಆಕ್ಷನ್ ಕ್ರೈಂ ಸಿನಿಮಾ 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಚರ್ಚೆ ಶುರುವಾಗಿದೆ.

ಇದಕ್ಕೂ ಮುನ್ನ ಧನುಷ್ 'ಪಾ ಪಾಂಡಿ' ಎನ್ನುವ ಸಿನಿಮಾ ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ ಅಂಬಿ 'ನಿಂಗೆ ವಯಸ್ಸಾಯ್ತೊ' ಹೆಸರಿನಲ್ಲಿ ಆ ಸಿನಿಮಾ ರೀಮೆಕ್ ಆಗಿತ್ತು. ಇದೀಗ 'ರಾಯನ್' ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಕಾತವರಾಯನ್ ಆಗಿ ತೆರೆಮೇಲೆ ಅಬ್ಬರಿಸಿ ಗೆದ್ದಿದ್ದಾರೆ.
ಅಷ್ಟಕ್ಕೂ 'ರಾಯನ್' ಸಿನಿಮಾ ಕಥೆ ಏನು ಎನ್ನುವುದನ್ನು ನೋಡುವುದಾದರೆ ಕಾತವರಾಯನ್ (ಧನುಷ್) ಬಾಲ್ಯದಲ್ಲೇ ತನ್ನ ಪೋಷಕರನ್ನು ಕಳೆದುಕೊಳ್ಳುತ್ತಾನೆ. ಇಬ್ಬರೂ ಕಿರಿಯ ಸಹೋದರರನ್ನು (ಸಂದೀಪ್ ಕಿಶನ್, ಕಾಳಿದಾಸು ಜಯರಾಮ್) ಹಾಗೂ ತಂಗಿ ದುರ್ಗಾ (ದುಷಾರ ವಿಜಯನ್)ಳನ್ನು ಬೆಳೆಸುವ ಜವಾಬ್ದಾರಿ ಅವನ ಹೆಗಲೇರುತ್ತದೆ. ಇವರೇ ತನ್ನ ಪ್ರಪಂಚ ಎಂದು ಅವನು ಬದುಕುತ್ತಿರುತ್ತಾನೆ. ಈ ಹಾದಿಯಲ್ಲಿ ಶೇಖರ್ (ಸೆಲ್ವರಾಘವನ್) ಅವರ ಮಾರ್ಗದರ್ಶಕನಾಗಿ ನಿಸಲ್ಲುತ್ತಾನೆ.
ಅದೇ ಹಳ್ಳಿಯಲ್ಲಿ ದುರೈ (ಸರವಣನ್) ಮತ್ತು ಸೇತು (ಎಸ್‌ಜೆ ಸೂರ್ಯ) ನಡುವಿನ ಗ್ಯಾಂಗ್ ವಾರ್‌ನಿಂದ ಕಾತವರಾಯನ್ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಆತನ ಸಹೋದರರು, ಸಹೋದರಿ ಕೂಡ ಇದರಿಂದ ಸಂಕಷ್ಟ ಎದುರಿಸುವಂತಾಗುತ್ತದೆ. ರಾಯನ್ ತನ್ನವರನ್ನು ಈ ಸಮಸ್ಯೆಗಳಿಂದ ಕಾಪಾಡುತ್ತಾನಾ? ಈ ಪ್ರಯಾಣದಲ್ಲಿ ಯಾರನ್ನು ಕಳೆದುಕೊಳ್ಳುತ್ತಾನೆ? ಎನ್ನುವುದೇ ಇನ್ನುಳಿದ ಕಥೆ.

ಮೇಲ್ನೋಟಕ್ಕೆ 'ರಾಯನ್' ಕಥೆ ಸಿಂಪಲ್ ಎನಿಸಿದರೂ ಅದನ್ನು ಸೊಗಸಾಗಿ ಧನುಷ್ ತೆರೆಗೆ ತಂದಿದ್ದಾರೆ. ರಾಯನ್ ಸಹೋದರನಾಗಿ ತೆಲುಗು ನಟ ಸಂದೀಪ್ ಕಿಶನ್ ನಟನೆಯೂ ಚೆನ್ನಾಗಿದೆ. ಸೆಲ್ವ ರಾಘವನ್, ಪ್ರಕಾಶ್ ರಾಜ್, ಅಪರ್ಣಾ, ವರಲಕ್ಷ್ಮಿ ಶರತ್‌ಕುಮಾರ್, ರವಿ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಓಂ ಪ್ರಕಾಶ್ ಛಾಯಾಗ್ರಹಣ, ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲೈನಿಧಿ ಮಾರನ್ 'ರಾಯನ್' ಸಿನಿಮಾ ನಿರ್ಮಿಸಿದ್ದಾರೆ. ಅಂದಾಜು 80 ಕೋಟಿ ರೂ. ಬಜೆಟ್ ಸಿನಿಮಾ 150 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಧನುಷ್ ಕರಿಯರ್‌ನಲ್ಲಿ ಮತ್ತೊಂದು ಹಿಟ್ ದಾಖಲಾಗಿದೆ. ಈ ವರ್ಷ ಆರಂಭದಲ್ಲೇ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಮೂಲಕ ಧನುಷ್ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ.
ಸದ್ಯ 'ರಾಯನ್' ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ. ಒಂದಲ್ಲ ಎರಡು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಸಜ್ಜಾಗುತ್ತಿದೆ. ಸನ್‌ನೆಸ್ಟ್ಸ್ ಜೊತೆಗೆ ಈ ಆಕ್ಷನ್ ಎಂಟರ್‌ಟ್ರೈನರ್ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಬರಲಿದೆ. ಆಗಸ್ಟ್ 23ಕ್ಕೆ ಸಿನಿಮಾ ಓಟಿಟಿಗೆ ಎಂದು ಘೋಷಿಸಿದ್ದಾರೆ. ಈ ಸುದ್ದಿ ಧನುಷ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.


Click it and Unblock the Notifications











