ಜೂನ್ 26ರಿಂದ ಮನೆಯಲ್ಲಿಯೇ ನೀವು ನೋಡಬಹುದು, 75 ಭ್ರಷ್ಟರ ಬೇಟೆಯಾಡಿದ ಅಧಿಕಾರಿಯ ಕಥೆ !
ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ.
ಮತ್ತೊಂದು ಕಡೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರರಂಗದವರು ಗೊಣಗುತ್ತಿರುತ್ತಾರೆ. ಸಂದರ್ಭ- ಸನ್ನಿವೇಶ ಹೀಗಿರುವಾಗ ಈ ವರ್ಷ ಬಾಲಿವುಡ್‌ನಲ್ಲಿ ಗೆಲುವಿನ ಪತಾಕೆ ಹಾರಿಸಿದ ಕೆಲವೇ ಕೆಲ ಚಿತ್ರಗಳಲ್ಲಿ ಒಂದಾದ ರೇಡ್ 2 ಚಿತ್ರ ಓಟಿಟಿಗೆ ಬಂದಿದೆ.

ಹೌದು, ರೇಡ್ 2 .. ಅಜಯ್ ದೇವಗನ್ ಮತ್ತು ರಿತೇಶ್ ದೇಶ್‌ಮುಖ್ ಅಭಿನಯದ ಚಿತ್ರ. ಕಳೆದ ಮೇ 1ರಂದು ಬಿಡುಗಡೆಯಾದ ಈ ಚಿತ್ರಕ್ಕೆ ರಾಜ್ ಕುಮಾರ್ ಗುಪ್ತಾ ನಿರ್ದೇಶನ ಇತ್ತು. ಇನ್ನು, ರೇಡ್ 2.. 2018ರಲ್ಲಿ ತೆರೆಗೆ ಬಂದಿದ್ದ ರೇಡ್ ಚಿತ್ರದ ಸಿಕ್ವೆಲ್. ಚಿತ್ರದ ಕಥೆ ಮುಂದುವರೆಯದಿದ್ದರೂ ಅಲ್ಲಿನ ಕೆಲ ಪಾತ್ರಗಳು ಇಲ್ಲಿಯೂ ಮುಂದುವರೆದಿದ್ದವು.
ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಈ ಚಿತ್ರ ಹುಸಿ ಮಾಡಲಿಲ್ಲ. ಮೊದಲ ಭಾಗದಂತೆಯೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಯ್ತು. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು.
ಚಿತ್ರಗಳ ಗಳಿಕೆಯ ಅಂಕಿ ಅಂಶಗಳನ್ನು ಹಂಚಿಕೊಳ್ಳುವ 'ಸ್ಯಾಕ್ನಿಲ್' ವೆಬ್ ಸೈಟ್ ಪ್ರಕಾರ ಹೆಚ್ಚು ಕಡಿಮೆ 50 ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ರೇಡ್ 2 ಭಾರತದಲ್ಲಿಯೇ ₹ 173.28 ಕೋಟಿಯನ್ನು ಗಳಿಸಿತ್ತು. ಇನ್ನು ಹೊರದೇಶದಿಂದ ಹರಿದು ಬಂದ ಮೊತ್ತ ₹ 31 ಕೋಟಿ.
ಹೀಗೆ ಬರಡುಭೂಮಿಯಂತೆ ಆಗಿದ್ದ ಬಾಲಿವುಡ್‌ನಲ್ಲಿ ಹಣದ ಮಳೆಯನ್ನು ಬೀಳಿಸಿದ ರೇಡ್ 2 ಚಿತ್ರ ಸದ್ಯ ಇದೇ ಜೂನ್ 26ರಿಂದ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಈ ಕುರಿತು ಅಧಿಕೃತ ಘೋಷಣೆಯನ್ನು ಕೂಡ ನೆಟ್‌ಫ್ಲಿಕ್ಸ್ ಮಾಡಿದ್ದು ಚಿತ್ರದ ಪೋಸ್ಟರ್ ಹಂಚಿಕೊಂಡಿದೆ.
ಇನ್ನು ಇದು ಪ್ಯಾನ್ ಇಂಡಿಯಾ ಕಾಲ. ಪ್ರತಿಯೊಬ್ಬರ ಚಿತ್ರಗಳು ಕೂಡ ಈಗ ಎಲ್ಲ ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿವೆ. ಆದರೂ ಕೂಡ ರೇಡ್ 2 ಚಿತ್ರವನ್ನು ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ರಯತ್ನ ಮಾಡಿರಲಿಲ್ಲ. ಬದಲಿಗೆ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಈಗ ಈ ಚಿತ್ರ ಓಟಿಟಿಗೆ ಬರುತ್ತಿದೆ. ಇಲ್ಲಿ ಬೇರೆ ಭಾಷೆಗಳಲ್ಲಿ ನೋಡುವ ಸೌಲಭ್ಯ ಸಿಗುತ್ತಾ ? ಎನ್ನುವ ಪ್ರಶ್ನೆಗೆ ಚಿತ್ರದ ಪ್ರಸಾರ ಶುರುವಾದಾಗಲೇ ಗೊತ್ತಾಗಲಿದೆ.
ಇನ್ನುಳಿದಂತೆ ಈ ಚಿತ್ರದಲ್ಲಿ ವಾಣಿ ಕಪೂರ್, ಸುಪ್ರಿಯಾ ಪಾಠಕ್, ಅಮಿತ್ ಸಿಯಾಲ್, ರಜತ್ ಕಪೂರ್, ಸೌರಭ್ ಶುಕ್ಲಾ, ಕೂಡ ಇದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಅಮಿತ್ ಸಿಯಾಲ್ ಅವರ ಅಭಿನಯ ಅನೇಕರ ಹೃದಯ ಗೆದ್ದಿತ್ತು. ಈ ಹಿನ್ನೆಲೆ ಓಟಿಟಿಯಲ್ಲಿ ರೇಡ್ 2 ಬಂದ ನಂತರ ಕೂಡ ಅಮಿತ್ ಸಿಯಾಲ್ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುವ ಸಾಧ್ಯತೆ ಇದೆ.
ಒಟ್ನಲ್ಲಿ ಸದ್ಯ ಬಿಡುಗಡೆಗೊಂಡು ಹತ್ ಹತ್ರ ಎರಡು ತಿಂಗಳ ನಂತರ ರೇಡ್ 2 ಚಿತ್ರ ಓಟಿಟಿಗೆ ಲಗ್ಗೆ ಇಡುತ್ತಿದೆ. ಚಿತ್ರ ಇದೇ ಜೂನ್ 26 ರಿಂದ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಇರುವವರು ಮನೆಯಲ್ಲಿಯೇ ಕುಳಿತು ಈ ಜೂನ್ 26ರಿಂದ ಈ ಚಿತ್ರವನ್ನು ನೋಡಬಹುದು.


Click it and Unblock the Notifications










