ಓಟಿಟಿಯಲ್ಲಿ 'ಸು ಫ್ರಮ್ ಸೋ' ನೋಡಿ ನಗು ಬರಲ್ಲ ಎನ್ನುವವರಿಗೆ ಏನು ಮಾಡೋಕ್ಕಾಗಲ್ಲ- ಕವಿರಾಜ್
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಸಿನಿಮಾ ಈಗ ಓಟಿಟಿಗೆ ಬಂದಿದೆ. ಕನ್ನಡದ ಜೊತೆಗೆ ತೆಲುಗು ಹಾಗೂ ಮಲಯಾಳಂ ವರ್ಷನ್‌ಗಳಲ್ಲಿ ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಲಭ್ಯವಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದವರು, ನೋಡದವರು ಓಟಿಟಿಯಲ್ಲಿ ಮುಗಿಬಿದ್ದಿದ್ದಾರೆ. ಕೆಲವರು ಸಿನಿಮಾ ಸೂಪರ್ ಎಂದರೆ ಮತ್ತೆ ಕೆಲವರು ಅಷ್ಟೇನು ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಜೆಪಿ ತುಮ್ಮಿನಾಡ್ ನಿರ್ದೇಶಿಸಿ ನಟಿಸಿರುವ ಕಾಮೆಡಿ ಎಂಟರ್‌ಟ್ರೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಯಾವುದೇ ಸ್ಟಾರ್ ನಟರಿಲ್ಲದೇ ಅಬ್ಬರ ಪ್ರಚಾರ ಇಲ್ಲದೇ ಪ್ರೇಕ್ಷಕರೆ ನೋಡಿ ಗೆಲ್ಲಿಸಿದ ಸಿನಿಮಾ ಇದು. ಅಂದಾಜು 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಓಟಿಟಿಗೆ ಬಂದ ಬಳಿಕ ಕೂಡ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಮುಂದುವರೆಸಿದೆ.

ಓಟಿಟಿಯಲ್ಲಿ ಕೆಲವರು ಸಿನಿಮಾ ನೋಡಿ ಅಷ್ಟೇನು ಚೆನ್ನಾಗಿಲ್ಲ, ಸೀರಿಯಲ್ ತರ ಇದೆ. ಸುಖಾಸುಮ್ಮನೆ ಹೈಪ್ ಕೊಟ್ಟುಬಿಟ್ಟರು ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಗೀತ ಸಾಹಿತಿ, ನಿರ್ದೇಶಕ ಕವಿರಾಜ್ ಪ್ರತಿಕ್ರಿಯಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ. "ಹೌದು ಸು ಫ್ರಮ್ ಸೋ ಸಿಂಪಲ್ ಸಿನಿಮಾ , ಆದರೆ ಸೋ.. ಸೋ.. ಸೋ.. ಬ್ಯೂಟಿಫುಲ್ ಸಿನಿಮಾ" ಎಂದು ಬರೆದುಕೊಂಡಿದ್ದಾರೆ.
"ಒಂದು ಸಿನಿಮಾವನ್ನು ತುಂಬಿದ ಚಿತ್ರಮಂದಿರಗಳಲ್ಲಿ ನೋಡುವ ಅನುಭವವೇ ಬೇರೆ. ಬಡಪೆಟ್ಟಿಗೆ ನಗದ ನಾನು ಕೂಡಾ ಎರಡೆರಡು ಸಾರಿ 'ಸು ಫ್ರಮ್ ಸೋ' ನೋಡುತ್ತಾ ಇಡೀ ಚಿತ್ರಮಂದಿರದ ಜೊತೆ ಮನಸಾರೆ ನಕ್ಕಿದ್ದೇನೆ" ಎಂದು ಕವಿರಾಜ್ ಬರೆಯಲು ಆರಂಭಿಸಿದ್ದಾರೆ. "ಕೆಲವರು ಚಿತ್ರಮಂದಿರದಲ್ಲೂ ನಗು ಬರಲಿಲ್ಲ ಎಂದಿದ್ದಾರೆ. ಅವರ ಅಭಿವ್ಯಕ್ತಿ ಸ್ವಾತಂತ್ರವನ್ನು ಗೌರವಿಸುತ್ತಲೇ ಅದೇಕೋ ಅವರ ಬಗ್ಗೆ ಕರುಣೆ ಮೂಡುವಂತಾಯಿತು. ಇನ್ನು ಮನೆಯಲ್ಲಿ OTTಯಲ್ಲಿ ನೋಡಿ ನಗುವೇ ಬರಲಿಲ್ಲ ಎನ್ನುವ ಟ್ರೆಂಡ್ ಇದೀಗ ಶುರು ಆದಂತಿದೆ. ಹೌದು... ನಮಗನಿಸಿದ್ದೇ ಎಲ್ಲರಿಗೂ ಅನಿಸುವುದಿಲ್ಲ,ಅನಿಸಬೇಕಿಲ್ಲ. ಅವರವರ ಭಾವಕ್ಕೆ" ಎಂಧು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅದು ಕರಾವಳಿ ಸೊಗಡು ಅವರಿಗೆ ಮಾತ್ರ ನಗು ಬರಬಹುದು ಎಂದು ಕೆಲವರು ಅಂದಿದ್ದಾರೆ. ಆದರೆ ನನಗೆ ಕಂಡಂತೆ ಈ ಸಿನಿಮಾದಲ್ಲಿ ಸಂಭಾಷಣೆ ಅಥವಾ ಇನ್ಯಾವುದೇ ವಿಚಾರಕ್ಕಿಂತ ಹೆಚ್ಚು ನಗಿಸಿದ್ದು ಕಲಾವಿದರ ರಿಯಾಕ್ಷನ್‌ಗಳೇ. ಭಯ ಪಡುವಾಗ, ಹೆದರಿ ಓಡುವಾಗ ಒಬ್ಬೊಬ್ಬರ ಆಂಗಿಕ ಅಭಿನಯವೂ ನಗೆ ಗುಳಿಗೆಯೇ ಆಗಿತ್ತು. ನನಗೆ ಅರಿವಿರುವಂತೆ ಬಹುಶಃ ಆಂಗಿಕ ಅಭಿನಯ/ ರಿಯಾಕ್ಷನ್ಸ್‌ಗಳಿಗೆ ಯಾವುದೇ ಸೀಮೆಯಿಲ್ಲ. ಅವು ಎಲ್ಲೆಡೆಯೂ ಸಲ್ಲುತ್ತವೆ" ಎಂದು ಕವಿರಾಜ್ ತಿಳಿಸಿದ್ದಾರೆ.
ಕವಿರಾಜ್ ಅಭಿಪ್ರಾಯವನ್ನು ಸಾಕಷ್ಟು ಜನ ಒಪ್ಪಿದ್ದಾರೆ. ಅವರಿಗೆ ಪೋಸ್ಟ್‌ಗೆ ಲೈಕ್ಸ್, ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅಜಯ್ ದೇವಗನ್, ಕಿಚ್ಚ ಸುದೀಪ್ ಸೇರಿದಂತೆ ಸಾಕಷ್ಟು ತಾರೆಯರು 'ಸು ಫ್ರಮ್ ಸೋ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಬೇರೆ ಭಾಷೆಗಳಿಗೆ ಸಿನಿಮಾ ರೀಮೆಕ್ ಆಗುವ ನಿರೀಕ್ಷೆಯಿದೆ. ಸೀಕ್ವೆಲ್ ಮಾಡುವಂತೆ ಒತ್ತಾಯ ಶುರುವಾಗಿದೆ. ಆದರೆ ನಾನು ಸೀಕ್ವೆಲ್ ಮಾಡಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಬರೋಬ್ಬರಿ 6.75 ಕೋಟಿ ರೂ.ಗೆ 'ಸು ಫ್ರಮ್ ಸೋ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಚಿತ್ರತಂಡ ಖುಷಿಯಾಗಿದೆ. ಜೆಪಿ ತುಮ್ಮಿನಾಡ್ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಗರಿಗೆದರಿದೆ.


Click it and Unblock the Notifications











