ಬಕ್ರೀದ್ ಸ್ಪೆಷಲ್ ; ಒಂದೂವರೆ ವರ್ಷದ ನಂತರ ಓಟಿಟಿಗೆ ಬಂತು ರಜಿನಿಕಾಂತ್ ಸಿನಿಮಾ..!
ಪಾತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡು ಆ ಪಾತ್ರದ ಮೂಲಕವೇ ಮ್ಯಾಜಿಕ್ ಮಾಡುವವರು ರಜಿನಿಕಾಂತ್. ತಮ್ಮ ಅಭಿನಯ ಮತ್ತು ಸ್ಟೈಲ್ ನಿಂದ ಅಸಂಖ್ಯಾತ, ಅಗಣಿತ ಅಭಿಮಾನಿಗಳನ್ನು ಸಂಪಾದಿಸಿರುವ ರಜಿನಿ ವಯಸ್ಸು ಹೆಚ್ಚಾದಂತೆ ಧಾವಂತಕ್ಕೆ ಬಿದ್ದವರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವರ್ಷಕ್ಕೆ ಎರಡು ಚಿತ್ರವಾದರು ಮಾಡಬೇಕು ಎಂಬ ಹಠದೊಂದಿಗೆ ಒಂದಾದ ಮೇಲೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಹೀಗೆ ರಜಿನಿ ಒಪ್ಪಿಕೊಂಡು ಮಾಡಿದ ಸಿನಿಮಾಗಳನ್ನೆಲ್ಲ..
ಪ್ರೇಕ್ಷಕರು ಮೊದಲಿನಂತೆ ತಲೆ ಮೇಲೆ ಹೊತ್ತು ಮೆರೆಸುತ್ತಿಲ್ಲ. ರಜಿನಿಗೆ ಬಹುಪರಾಕ್ ಕೂಡ ಹಾಕುತ್ತಿಲ್ಲ. ಇದಕ್ಕೆ ಕಳೆದ ವರ್ಷ ತೆರೆಗೆ ಬಂದಿದ್ದ ಲಾಲ್ ಸಲಾಂ ಮತ್ತು ವೆಟ್ಟೈಯಾನ್ ಅತ್ಯುತ್ತಮ ಉದಾಹರಣೆಗಳು.

ನಿರೀಕ್ಷೆಯನ್ನು ಮೂಡಿಸಿ ತೆರೆಗೆ ಬಂದಿದ್ದ ಇವೆರಡು ಚಿತ್ರಗಳತ್ತ ಪ್ರೇಕ್ಷಕರು ತಿರುಗಿಯೂ ಕೂಡ ನೋಡಿರಲಿಲ್ಲ. ಇನ್ನು ಸಾಮಾನ್ಯವಾಗಿ ರಜಿನಿಯ ಸಿನಿಮಾಗಳು ಅಂದರೆ ಚಿತ್ರದ ಬಿಡುಗಡೆಗೆ ಮುನ್ನವೇ ವ್ಯಾಪಾರ ವ್ಯವಹಾರ ನಡೆದು ಹೋಗಿರುತ್ತೆ. ಆ ಹಕ್ಕು ಈ ಹಕ್ಕು ಎಂದು ಕೋಟ್ಯಂತರ ರೂಪಾಯಿ ಡೀಲ್ ನಡೆದಿರುತ್ತೆ. ಅದ್ರಂತೆ ವೆಟ್ಟೈಯಾನ್ ಮತ್ತು ಲಾಲ್ ಸಲಾಂ ಚಿತ್ರಗಳ ಡೀಲ್ ಕೂಡ ನಡೆದಿತ್ತು.
ಆದರೆ ಇಲ್ಲಿಯವರೆಗೆ ವೆಟ್ಟೈಯಾನ್ ಮಾತ್ರ ಓಟಿಟಿ ಅಂಗಳಕ್ಕೆ ಬಂದಿತ್ತು. ಅಮೆಜಾನ್ ಪ್ರೈಂನಲ್ಲಿ ನವೆಂಬರ್ 8ರಿಂದ ಪ್ರಸಾರವಾಗಲು ಶುರುವಾಗಿತ್ತು. ಆದರೆ ಲಾಲ್ ಸಲಾಮ್ ಮಾತ್ರ ಬಿಡುಗಡೆಯಾಗಿ ಒಂದೂವರೆ ವರ್ಷವಾದರೂ ಕೂಡ ಓಟಿಟಿ ಅಂಗಳಕ್ಕೆ ಬಂದಿರಲಿಲ್ಲ. ಇದರಿಂದ ಲಾಲ್ ಸಲಾಂ ಚಿತ್ರವನ್ನು ಓಟಿಟಿಯಲ್ಲಿ ಕೂಡ ಕೇಳುವರಿಲ್ಲ ಎಂದು ಅನೇಕರು ಅಂದುಕೊಂಡಿದ್ದರು. ಹೀಗಿರುವಾಗ ಇದೀಗ ಒಂದೂವರೆ ವರ್ಷದ ನಂತರ ಲಾಲ್ ಸಲಾಂ ಚಿತ್ರ ಓಟಿಟಿಗೆ ಲಗ್ಗೆ ಇಡುತ್ತಿದೆ.
ಹೌದು, ಅಸಲಿಗೆ ಕಳೆದ ವರ್ಷ ಫೆಬ್ರವರಿ 9ರಂದು ಬಿಡುಗಡೆಯಾದ ಲಾಲ್ ಸಲಾಮ್, ಮಾರ್ಚ್ ಅಂತ್ಯಕ್ಕೆ ಓಟಿಟಿಯಲ್ಲಿ ಪ್ರಸಾರವಾಗಬೇಕಿತ್ತು. ಆದರೆ, ಚಿತ್ರದ ಪ್ರಮುಖ ದೃಶ್ಯಗಳನ್ನು ಹೊಂದಿದ್ದ ಹಾರ್ಡ್ ಡಿಸ್ಕ್ ಚಿತ್ರಮಂದಿರದಲ್ಲಿ ಚಿತ್ರ ಬರುವ ಮುನ್ನ ಕಾಣೆಯಾಗಿತ್ತು. ಚಿತ್ರತಂಡದ 21 ದಿನಗಳ ಶ್ರಮ ಆ ಹಾರ್ಡ್ ಡಿಸ್ಕ್‌ನಲ್ಲಿತ್ತು.
ಪ್ರಮುಖ ದೃಶ್ಯಗಳು ಕಾಣಿಸದೇ ಕಂಗಾಲಾಗಿದ್ದ ರಜಿನಿಯ ಮಗಳು ಐಶ್ವರ್ಯ ಆ ನಂತರ ತಮ್ಮ ಬಳಿ ಉಳಿದುಕೊಂಡ ದೃಶ್ಯಗಳನ್ನೆಲ್ಲ ಹಾಗೂ ಹೀಗೂ ಒಂದು ಕಡೆ ಸೇರಿಸಿ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆದರೆ, ಚಿತ್ರ ಗೆಲ್ಲಲಿಲ್ಲ. ಹೀಗಾಗಿ ಓಟಿಟಿ ಬಿಡುಗಡೆಯನ್ನು ತಡೆ ಹಿಡಿಯಲಾಗಿತ್ತು. ಕೊನೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ಐಶ್ವರ್ಯ ಕಾಣೆಯಾಗಿದ್ದ ತಮ್ಮ ಲಾಲ್ ಸಲಾಮ್ ಚಿತ್ರದ ಹಾರ್ಡ್ ಡಿಸ್ಕ್ ಸಿಕ್ಕಿದೆ ಎಂದು ಹೇಳಿದ್ದರು.
ಈಗ ಹಾರ್ಡ್ ಡಿಸ್ಕ್‌ನಲ್ಲಿದ್ದ ಚಿತ್ರದ ಪ್ರಮುಖ ಫುಟೇಜ್‌ಗಳನ್ನೆಲ್ಲ ಸೇರಿಸಿ, ಐಶ್ವರ್ಯ ತಮ್ಮ ಲಾಲ್ ಸಲಾಮ್ ಚಿತ್ರಕ್ಕೆ ಹೊಸ ರೂಪ ನೀಡಿದ್ದಾರೆ. ಚಿತ್ರಮಂದಿರದಲ್ಲಿ ನೋಡಿದ್ದ ಲಾಲ್ ಸಲಾಮ್ ಚಿತ್ರಕ್ಕೂ ಓಟಿಟಿಯಲ್ಲಿ ನೀವು ನೋಡಲಿರುವ ಲಾಲ್ ಸಲಾಮ್ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.
ಹೀಗೆ ಹೊಸ ರೂಪ ಪಡೆದ ಲಾಲ್ ಸಲಾಮ್ ಸದ್ಯ ಈ ಜೂನ್ ಆರರಿಂದ Sun NXTನಲ್ಲಿ ಪ್ರಸಾರವಾಗಲಿದೆ. ಕ್ರಿಕೆಟ್ಟೂ ಹಾಗೂ ಮತೀಯ ಗಲಭೆ ಸುತ್ತ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜಿನಿಕಾಂತ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಂಥಿಲ್, ಜೀವಿತಾ, ತಂಬಿ ರಾಮಯ್ಯ, ವಿವೇಕ್, ಪ್ರಸನ್ನ, ಹೀಗೆ ಅನೇಕರು ಲಾಲ್ ಸಲಾಂ
ಚಿತ್ರದಲ್ಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಇದೆ.
ಒಟ್ನಲ್ಲಿ ಸದ್ಯ ಲಾಲ್ ಸಲಾಂ ಚಿತ್ರ ಈ ಜೂನ್ ಆರರಿಂದ Sun NXT ನಲ್ಲಿ ಪ್ರಸಾರವಾಗಲಿದ್ದು ಚಿತ್ರಮಂದಿರದಲ್ಲಿ ಸೋತ ಈ ಚಿತ್ರ ಓಟಿಟಿಯಲ್ಲಾದರೂ ಪ್ರೇಕ್ಷಕರ ಹೃದಯ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











