Jailer OTT: ತಿಂಗಳಿಗೂ ಮೊದಲೇ ಓಟಿಟಿಗೆ 'ಜೈಲರ್' ಎಂಟ್ರಿ ಕನ್ಫರ್ಮ್: ಕಾರಣ ಅದೇನಾ?
ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ತಿಂಗಳಿಗೂ ಮೊದಲೇ ಸಿನಿಮಾ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ರಜನಿಕಾಂತ್, ರಮ್ಯಾಕೃಷ್ಣ ನಟನೆಯ 'ಜೈಲರ್' 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರತಂಡ ಸಕ್ಸಸ್ ಸಂಭ್ರಮದಲ್ಲಿ ತೇಲುತ್ತಿದೆ. ನಿರ್ಮಾಪಕರಿಂದ ತಂಡಕ್ಕೆ ಉಡುಗೊರೆಗಳು ಸಿಗುತ್ತಿದೆ.
ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ 'ಜೈಲರ್' ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗಿತ್ತು. 20 ದಿನಗಳಲ್ಲೇ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ಅತಿಥಿ ಪಾತ್ರಗಳಲ್ಲಿ ಶಿವರಾಜ್‌ಕುಮಾರ್, ಮೋಹನ್ ಲಾಲ್ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿದ್ದರು. ಎಲ್ಲಾ ವಿಭಾಗಗಲ್ಲೂ ಫಸ್ಟ್ ಕ್ಲಾಸ್ ಎನಿಸಿಕೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಮೊದಲ ವಾರ ಸಿನಿಮಾ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಪ್ರೇಕ್ಷಕರು ಪದೇ ಪದೇ ಸಿನಿಮಾ ನೋಡಲು ಮುಗಿಬಿದ್ದರು.

ನೆಲ್ಸನ್ ಟೇಕಿಂಗ್, ರಜನಿಕಾಂತ್- ಶಿವಣ್ಣ ಪರ್ಫಾರ್ಮನ್ಸ್, ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಎಲ್ಲಾ ಸೇರಿ 'ಜೈಲರ್' ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿತ್ತು. ಫಸ್ಟ್ ಶೋನಿಂದಲೇ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಸಿನಿಮಾ ನೋಡ ನೋಡುತ್ತಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿತು. ಕಥೆ ಹಳೆಯದ್ದೇ ಅನ್ನಿಸಿದರೂ ನೆಲ್ಸನ್ ಟ್ರೀಟ್‌ಮೆಂಟ್ ಮಜವಾಗಿತ್ತು. ಅದಕ್ಕೆ ಅನಿರುದ್ದ್ ಮ್ಯೂಸಿಕ್ ಪ್ಲಸ್ ಆಯಿತು. ಪರಿಣಾಮ ಸಿನಿಮಾ ಪ್ರೇಕ್ಷರಿಗೆ ಇಷ್ಟವಾಯಿತು.
ಮೊದಲ 3 ದಿನಕ್ಕೆ ವಿಶ್ವದಾದ್ಯಂತ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ 'ಜೈಲರ್' ನಂತರ ಕೂಡ ಆರ್ಭಟ ಮುಂದುವರೆಸಿದ. ಚಿತ್ರದಲ್ಲಿ ಮಾಜಿ 'ಜೈಲರ್' ಮುತ್ತುವೇಲ್ ಕತೆಯನ್ನು ಹೇಳಲಾಗಿದೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಆತ ತಿಹಾರ್ ಜೈಲ್‌ನಲ್ಲಿ ಅಬ್ಬರಿಸುವುದನ್ನು ತೋರಿಸಲಾಗಿತ್ತು. ತನ್ನ ಮಗನೇ ಭ್ರಷ್ಟ, ದರೋಡೆಕೋರ ಎಂದು ಗೊತ್ತಾದಾಗ ಆತನನ್ನು ಕೊಲ್ಲಲು ಹಿಂದೆ ಮುಂದೆ ನೋಡದ ತಂದೆಯ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ.
ಸನ್ ಪಿಕ್ಚರ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಿತ್ತು. ರಜನಿಕಾಂತ್‌ಗೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ನೀಡಲಾಗಿತ್ತು. ಬಳಿಕ ಒಪ್ಪಂದಂತೆ ಲಾಭದಲ್ಲಿ ಪಾಲನ್ನು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇತ್ತೀಚೆಗೆ ತಲೈವಾಗೆ ನಿರ್ಮಾಪಕ ಕಲಾನಿಧಿ ಮಾರನ್ ಒಂದು ಚೆಕ್ ಜೊತೆಗೆ ಬಿಎಂಡಬ್ಲೂ ಕಾರ್ ಉಡುಗೊರೆಯಾಗಿ ನೀಡಿದ್ದರು. ರಜನಿಗೆ ಮಾತ್ರವಲ್ಲ ನಿರ್ದೇಶಕ ನೆಲ್ಸನ್‌ಗೂ ಕೂಡ ಮತ್ತೊಂದು ಚೆಕ್ ಜೊತೆಗೆ ಐಷಾರಾಮಿ ಕಾರ್ ನೀಡಿದ್ದಾರೆ.
'ಜೈಲರ್' ಸಿನಿಮಾ ಓಟಿಟಿಗೆ ಬರುವುದಕ್ಕೂ ಮುನ್ನ ಆನ್‌ಲೈನ್‌ನಲ್ಲಿ HD ಪ್ರಿಂಟ್ ಲೀಕ್ ಆಗಿದೆ. ಹಾಗಾಗಿ ತಿಂಗಳಿಗೂ ಮೊದಲೇ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸೆಪ್ಟೆಂಬರ್ 7ಕ್ಕೆ ಜೈಲರ್ ಸಿನಿಮಾ 5 ಭಾಷೆಗಳಲ್ಲಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ತಮ್ಮದೇ ಸನ್‌ನೆಕ್ಸ್ಟ್ ಓಟಿಟಿ ಫ್ಲಾಟ್‌ಪಾರ್ಮ್ ಇದ್ದರೂ ಕೂಡ ಚಿತ್ರವನ್ನು ಅಮೇಜಾನ್ ಪ್ರೈಂಗೆ ಸನ್ ಪಿಕ್ಚರ್ಸ್ ಮಾರಾಟ ಮಾಡಿದೆ. ಈಗಾಗಲೇ ಸಿನಿಮಾ ನೋಡಿದವರು, ನೋಡದೇ ಇರುವವರು ಮನೆಯಲ್ಲೇ ಕೂತು ಸಿನಿಮಾ ನೋಡಬಹುದಾಗಿದೆ.
'ಜೈಲರ್' ಬಳಿಕ ರಜನಿಕಾಂತ್ ಮತ್ತೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ 'ಲಾಲ್ ಸಲಾಂ' ಚಿತ್ರೀಕರಣ ನಡೀತಿದೆ. ಜ್ಞಾನವೇಲ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಲುಕ್ ಟೆಸ್ಟ್ ಕೂಡ ಮುಗಿದಿದೆ. ಸೆಪ್ಟೆಂಬರ್ 18ಕ್ಕೆ ಸಿನಿಮಾ ಸೆಟ್ಟೇರುತ್ತದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡ ನಟಿಸುವ ಸಾಧ್ಯತೆಯಿದೆ. ಲೈಕಾ ಸಂಸ್ಥೆ ಈ 2 ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ಲೋಕೇಶ್ ಕನಕರಾಜ್ ನಿರ್ದೇಶನದಲ್ಲೂ ರಜನಿಕಾಂತ್ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಆ ಬಳಿಕ ಸನ್ ಪಿಕ್ಚರ್ಸ್ ಜೊತೆ ಮತ್ತೊಂದು ಸಿನಿಮಾದಲ್ಲಿ ತಲೈವಾ ಬಣ್ಣ ಹಚ್ಚುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಟ್ನಲ್ಲಿ ಸೂಪರ್ ಸ್ಟಾರ್‌ಗೆ 'ಜೈಲರ್' ದೊಡ್ಡ ಬ್ರೇಕ್ ಕೊಟ್ಟಿರೋದು ಸುಳ್ಳಲ್ಲ.


Click it and Unblock the Notifications











