ಬಾಕ್ಸಾಫೀಸ್‌ನಲ್ಲಿ ಸೋತ ಚಿತ್ರವನ್ನು ಓಟಿಟಿಯಲ್ಲಿ ಗೆಲ್ಲಿಸೋ ಪ್ರಯತ್ನ; 'ಲಾಲ್ ಸಲಾಂ' ಓಟಿಟಿ ಡೇಟ್ ಫಿಕ್ಸ್
ದೊಡ್ಡ ಸಿನಿಮಾಗಳೇ ತಿಂಗಳಿಗೆ ಮುನ್ನ ಓಟಿಟಿಗೆ ಬರ್ತಿದೆ. ಆದರೆ ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಸಿನಿಮಾ 7 ತಿಂಗಳ ಬಳಿಕ ಡಿಜಿಟಲ್ ಪ್ಲಾಟ್‌ಫಾರ್ಮ್ ಕಡೆ ಮುಖ ಮಾಡ್ತಿದೆ. ಸದ್ಯ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಐಶ್ವರ್ಯ ರಜನಿಕಾಂತ್ ಮಾತನಾಡಿದ್ದಾರೆ. ಯಾಕೆ ಸಿನಿಮಾ ಸ್ಮಾಲ್ ಸ್ಕ್ರೀನ್‌ಗೆ ಬರುವುದು ತಡವಾಯಿತು ಎನ್ನುವುದನ್ನು ಹೇಳಿದ್ದಾರೆ.
ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ನಟನೆಯ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ 'ಲಾಲ್ ಸಲಾಂ' ಫೆಬ್ರವರಿಯಲ್ಲಿ ತೆರೆಗೆ ಬಂದಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಲಿಲ್ಲ. 'ಜೈಲರ್' ಬಳಿಕ ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಮುಗ್ಗರಿಸಿತ್ತು. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಿಸಿತ್ತು.

ಬಾಕ್ಸಾಫೀಸ್‌ನಲ್ಲಿ ಸೋತಿದ್ದ ಚಿತ್ರವನ್ನು ಓಟಿಟಿಯಲ್ಲಿ ಗೆಲ್ಲಿಸಲು ಐಶ್ವರ್ಯ ರಜನಿಕಾಂತ್ ಹರಸಾಹಸಪಡುತ್ತಿದ್ದಾರೆ. ಈ ಹಿಂದೆ 'ಲಾಲ್ ಸಲಾಂ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವೇಳೆ ಹಾರ್ಡ್‌ಡಿಸ್ಕ್‌ನಲ್ಲಿದ್ದ ಫುಟೇಜ್ ಡಿಲೀಟ್ ಆಗಿ ಎಡವಟ್ಟಾಗಿತ್ತು. ಚಿತ್ರೀಕರಿಸಿದ್ದ ದೃಶ್ಯಗಳು ಇಲ್ಲದೇ ಇದ್ದಿದ್ದರಲ್ಲಿ ಚಿತ್ರವನ್ನು ಎಡಿಟ್ ಮಾಡಿ ರಿಲೀಸ್ ಮಾಡಿದ್ದರು. ಆದರೆ ತಾವು ಅಂದುಕೊಂಡಂತೆ ಸಿನಿಮಾ ಬರಲಿಲ್ಲ ಎಂದು ಐಶ್ವರ್ಯ ಬೇಸರಗೊಂಡಿದ್ದರು.
ಒಂದು ವಿಭಿನ್ನ ಕಥೆ ಮಾಡಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿತ್ತು. ಹಿಂದೂ-ಮುಸ್ಲಿಂ ಸಹಬಾಳ್ವೆ ನಡೆಸಬೇಕು ಎನ್ನುವ ಸಂದೇಶವನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದರು. ಚಿತ್ರದಲ್ಲಿ ಮುಸ್ಲಿಂ ಸಮುದಾಯದ ನಾಯಕ ಮೊಹಿದ್ದೀನ್ ಭಾಯ್ ಆಗಿ ತಲೈವಾ ಮಿಂಚಿದ್ದರು. ಕ್ರಿಕೆಟ್ ಆಟದ ಜೊತೆ ಜೊತೆಗೆ ಮುರರ್ಬಾದ್ ಎನ್ನುವ ಹಳ್ಳಿಯ ಜನರ ನೋವು ನಲಿವಿನ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.
ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ 'ಲಾಲ್ ಸಲಾಂ' ಸಿನಿಮಾ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ. ಚಿತ್ರಮಂದಿರದಲ್ಲಿ ನೋಡಿದ ಚಿತ್ರಕ್ಕಿಂತ ವಿಭಿನ್ನವಾದ ಚಿತ್ರ ಓಟಿಟಿಗೆ ಬರುತ್ತದೆ ಎನ್ನಲಾಗ್ತಿದೆ. ಹಾರ್ಡ್‌ಡಿಸ್ಕ್‌ನಲ್ಲಿ ಡಿಲೀಟ್ ಆಗಿದ್ದ ಒಂದಷ್ಟು ಫುಟೇಜ್ ಅನ್ನು ರೀಟ್ರಿವ್ ಮಾಡಿದ್ದು ಆ ದೃಶ್ಯಗಳನ್ನು ಸೇರಿಸುವ ಕೆಲಸ ನಡೀತಿದೆ. ಕಥೆ ಬರೆದಾಗ ಏನೆಲ್ಲಾ ಇತ್ತೋ ಅದೆಲ್ಲವನ್ನು ಸೇರಿಸಿ ಇದೀಗ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ.

ನಿರ್ದೇಶಕಿ ಐಶ್ವರ್ಯ ರಜನಿಕಾಂತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಥಿಯೇಟರ್‌ನಲ್ಲಿ ನೋಡಿದ್ದಕ್ಕಿಂತ ಸುದೀರ್ಘವಾದ ಸಿನಿಮಾ ಓಟಿಟಿಗೆ ಬರಲಿದೆ. ಇದು ಥಿಯೇಟರ್‌ನಲ್ಲಿ ನೋಡಿದ್ದಕ್ಕಿಂತ ವಿಭಿನ್ನವಾದ ವರ್ಷನ್. ಡಿಲೀಟ್ ಆಗಿದ್ದ ಕೆಲ ಫುಟೇಜ್ ವಾಪಸ್ ಪಡೆದಿದ್ದೇವೆ. ಅದನ್ನು ಈಗ ಸೇರಿಸಿದ್ದೇವೆ. ನಾವು ಏನು ಬರೆದುಕೊಂಡಿದ್ದೇವೋ ಅದು ಇದರಲ್ಲಿ ಇರಲಿದೆ" ಎಂದು ಆಕೆ ವಿವರಿಸಿದ್ದಾರೆ.
ಸಂಗೀತ ನಿರ್ದೇಶಕ ಎ. ಆರ್ ರಹಮಾನ್ 'ಲಾಲ್ ಸಲಾಂ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಇದೀಗ ಹೊಸದಾಗಿ ಸೇರಿಸಿರುವ ಸನ್ನಿವೇಶಗಳಿಗೆ ರೀ-ರೆಕಾರ್ಡಿಂಗ್ ಮಾಡುತ್ತಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ರಹಮಾನ್ ಈ ಕೆಲಸ ಮಾಡಿಕೊಡುತ್ತಿದ್ದಾರೆ ಎಂದು ತಲೈವಾ ಪುತ್ರಿ ವಿವರಿಸಿದ್ದಾರೆ. ಸೆಪ್ಟೆಂಬರ್ ಕೊನೆಗೆ 'ಲಾಲ್ ಸಲಾಂ' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.
ರಜನಿಕಾಂತ್, ವಿಕ್ರಾಂತ್ ಹಾಗೂ ವಿಷ್ಣು ವಿಶಾಲ್ ಜೊತೆಗೆ ಸೆಂಥಿಲ್, ಜೀವಿತ, ಕೆ. ಎಸ್ ರವಿಕುಮಾರ್, ತಂಬಿ ರಾಮಯ್ಯ, ನಿರೋಷಾ ಸೇರಿದಂತೆ ದೊಡ್ಡ ತಾರಾಗಣ 'ಲಾಲ್ ಸಲಾಂ' ಚಿತ್ರದಲ್ಲಿದೆ. ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಸಹ ಕಾಣಿಸಿಕೊಂಡಿದ್ದಾರೆ. ವಿಷ್ಣು ರಂಗಸ್ವಾಮಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಛಾಯಾಗ್ರಹಣ ಮಾಡಿದ್ದರು. ರೆಡ್ ಝೇಂಟ್ ಮೂವೀಸ್ ಸಂಸ್ಥೆ ಸಿನಿಮಾ ವಿತರಣೆ ಮಾಡಿತ್ತು. ಸದ್ಯ ಓಟಿಟಿಯಲ್ಲಿ ಯಾವಾಗ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ಕೆಲವರು ಕಾಯುತ್ತಿದ್ದಾರೆ.


Click it and Unblock the Notifications











