ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿರುವ 'ರಕ್ಕಸಪುರದೋಳ್' ಓಟಿಟಿ ಸ್ಟ್ರೀಮಿಂಗ್ ಎಲ್ಲಿ, ಯಾವಾಗ?
ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ 'ರಕ್ಕಸಪುರದೋಳ್' ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿಲ್ಲ. ರವಿ ಸಾರಂಗ ನಿರ್ದೇಶನದ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಹೀರೊ ಆಗಿ ಅಬ್ಬರಿಸಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಫ್ಯಾಮಿಲಿ ಸಮೇತ ನೋಡಬಹುದಾದ ಥ್ರಿಲ್ಲರ್ ಸಿನಿಮಾ ಇದು. ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ ಸುರೇಶ್, ಜಹಾಂಗೀರ್, ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿಲನ್ ಆಗಿ ನಟಿಸಿರುವ ಅನಿರುದ್ಧ್ ಶಾಸ್ತ್ರಿ ಎಲ್ಲರ ಕಮಾಲ್ ಮಾಡಿದ್ದಾರೆ. ಇಂತಹ ಒಳ್ಳೆಯ ಚಿತ್ರವನ್ನು ದೊಡ್ಡದಾಗಿ ಗೆಲ್ಲಿಸುವಲ್ಲಿ ಕನ್ನಡ ಪ್ರೇಕ್ಷಕರು ವಿಫಲವಾಗುತ್ತಿದ್ದಾರೆ. ಕೆಲವರು ಓಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಕಾಯುತ್ತಿದ್ದಾರೆ.

ಸಾಹಸ ನಿರ್ದೇಶಕ ರವಿವರ್ಮಾ 'ರಕ್ಕಸಪುರದೋಳ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೂ ಚಿತ್ರದ ಟ್ರೈಲರ್ ತೋರಿಸಿದ್ದಾರೆ. ಸಲ್ಲು ಈ ಥ್ರಿಲ್ಲರ್ ಸಿನಿಮಾ ಝಲಕ್ ನೋಡಿ ಮೆಚ್ಚಿಕೊಂಡಿದ್ದಾರೆ. ಹಿಂದಿಗೂ ಸಿನಿಮಾ ಡಬ್ ಅಥವಾ ರೀಮೆಕ್ ಆದರೆ ಅಚ್ಚರಿ ಪಡಬೇಕಿಲ್ಲ. ರವಿವರ್ಮಾ ಸ್ಟಂಟ್ ಮಾಸ್ಟರ್ ಆಗಿ ಸಾಕಷ್ಟು ಹಿಂದಿ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಚಿತ್ರವನ್ನು ಅಲ್ಲಿಗೆ ಕೊಂಡೊಯ್ಯುವ ಪ್ರಯತ್ನ ಮಾಡಬಹುದು.
'ರಕ್ಕಸಪುರದೋಳ್' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆ ಪಾಲಾಗಿದೆ. ಹಾಗಾಗಿ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದೆ. ಅದಕ್ಕೂ ಮುನ್ನ ಜೀ5 ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ. 4 ವಾರಗಳ ಬಳಿಕ ಕನ್ನಡ ಸಿನಿಮಾಗಳು ಓಟಿಟಿಗೆ ಬರ್ತಿವೆ. ಮಾರ್ಚ್ ಮೊದಲ ವಾರ ಅಥವಾ 2ನೇ ವಾರದಲ್ಲಿ 'ರಕ್ಕಸಪುರದೋಳ್' ಓಟಿಟಿ ಸ್ಟ್ರೀಮಿಂಗ್ ಶುರುವಾಗಬಹುದು.

'ರಕ್ಕಸಪುರದೋಳ್' ಎಂಬ ಹಳ್ಳಿ. ಅಲ್ಲಿಗೆ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿ ಶಿವ. ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಸಮಸ್ಯೆಯಿಂದ ಆತ ಬಳಲುತ್ತಿರುತ್ತಾನೆ. ಇದ್ದಕ್ಕಿದ್ದಂತೆ ಆ ಊರಿನಲ್ಲಿ ಯುವತಿಯರು ನಿಗೂಢವಾಗಿ ನಾಪತ್ತೆಯಾಗಿ ಬಳಿಕ ಶವವಾಗಿ ಸಿಗುತ್ತಾರೆ. ಅದು ಕೊಳ್ಳಿ ದೆವ್ವದ ಕಾಟ ಎಂದು ಊರಿನ ಜನ ನಂಬಿರುತ್ತಾರೆ. ಆದರೆ ಈ ಸರಣಿ ಹತ್ಯೆಗಳ ಹಿಂದಿನ ಕಾರಣ ಏನು? ಇದಕ್ಕೆಲ್ಲಾ ಕಾರಣ ಯಾರು? ಎನ್ನುವುದನ್ನು ಶಿವ ಭೇದಿಸುವ ಕಥೆ ಚಿತ್ರದಲ್ಲಿದೆ. ಸಾಲು ಸಾಲು ಟ್ವಿಸ್ಟ್‌ಗಳ ಮೂಲಕ ಸಿನಿಮಾ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ.
ಕಥೆ, ಚಿತ್ರಕಥೆ, ಕಲಾವಿದರ ಅಭಿನಯ ಎಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ಪ್ರೇಕ್ಷಕರ ಊಹೆಯನ್ನು ಸುಳ್ಳಾಗಿಸುತ್ತಾ ಕೊನೆಯವರೆಗೂ 'ರಕ್ಕಸಪುರದೋಳ್' ಚಿತ್ರ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಒಂದು ಅದ್ಭುತ ಪ್ರಯತ್ನ ಇದು. ಆದರೆ ಸಾಕಷ್ಟು ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರ್ತಿಲ್ಲ. ಕೆಲವರು ಓಟಿಟಿಯಲ್ಲಿ ನೋಡೋಣ ಬಿಡು ಎಂದು ಸುಮ್ಮನಾಗುತ್ತಿದ್ದಾರೆ.
ನಟ, ನಿರ್ದೇಶಕ ಉಪೇಂದ್ರ ಕೂಡ 'ರಕ್ಕಸಪುರದೋಳ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಮೌತ್ ಟಾಕ್ ಚೆನ್ನಾಗಿದೆ. ವ್ಯಾಲಂಟೈನ್ಸ್ ಡೇ ವೀಕೆಂಡ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಆದರೂ ಅದು ಸಾಕಾಗುತ್ತಿಲ್ಲ ಎನ್ನುವಂತಾಗಿದೆ. 'ಸು ಫ್ರಂ ಸೋ' ಬಳಿಕ ಈ ಚಿತ್ರದಲ್ಲಿ ಕೂಡ ರಾಜ್ ಬಿ ಶೆಟ್ಟಿ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications











