'ಸಪ್ತ ಸಾಗರ ಸೈಡ್- B' ಓಟಿಟಿ ಸ್ಟ್ರೀಮಿಂಗ್ ಎಲ್ಲಿ, ಯಾವಾಗ? ರಕ್ಷಿತ್ ಶೆಟ್ಟಿ ಕೊಟ್ರು ಮಾಹಿತಿ
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳು ಕಳೆದ ವರ್ಷ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು. ಮೊದಲ ಭಾಗದಷ್ಟು ಎರಡನೇ ಭಾಗ ಸದ್ದು ಮಾಡಲಿಲ್ಲ. ಹೇಮಂತ್ ರಾವ್ ನಿರ್ದೇಶನದ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಎರಡು ತಿಂಗಳ ಅಂತರಲ್ಲಿ 3 ಭಾಗವಾಗಿ ತೆರೆಗೆ ಬಂದಿತ್ತು.
ಸೈಡ್-B ಬಿಡುಗಡೆಗೂ ಮುನ್ನ ಸೈಡ್- A ಓಟಿಟಿಗೂ ಬಂದಿತ್ತು. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಡಿಜಿಟಲ್ ಸ್ಟ್ರೀಮಿಂಗ್ ಆಗಿತ್ತು. ಕಳೆದ ವರ್ಷ ಸೆಪ್ಟೆಂಬರ್ 1ರಂದು 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- A ತೆರೆಗಪ್ಪಳಿಸಿತ್ತು. ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮನು- ಪ್ರಿಯಾ ಪ್ರೇಮ್ ಕಹಾನಿಗೆ ಪ್ರೇಕ್ಷಕರು ತಲೆದೂಗಿದ್ದರು.

ಕೆಲವರಿಗೆ ಮಾತ್ರ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಅಷ್ಟಾಗಿ ಇಷ್ಟವಾಗಿರಲಿಲ್ಲ. ಇದನ್ನು 2 ಭಾಗವಾಗಿ ತೆರೆಗೆ ತರೋದು ಬೇಕಿತ್ತಾ? ಎನ್ನುವ ರಾಗ ತೆಗೆದಿದ್ದರು. ಇನ್ನು ಸೈಡ್ -B ನವೆಂಬರ್ 17ಕ್ಕೆ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಎರಡು ತಿಂಗಳು ಕಳೆದರೂ ಸಿನಿಮಾ ಓಟಿಟಿಗೆ ಯಾಕೆ ಬರಲಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಕೆಲವರು ಓಟಿಟಿಯಲ್ಲಿ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಫೈನಲಿ ಚಿತ್ರದ ನಟ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- B ಸ್ಮಾಲ್ ಸ್ಕ್ರೀನ್ ಎಂಟ್ರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕಾಯುವಿಕೆ ಮುಗಿಯಿತು. ಬೇಗ ಸೈಡ್- B ಬರಲಿದೆ. ಅಧಿಕೃತವಾಗಿ ದಿನಾಂಕ ಘೋಷಣೆ ಮಾಡುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ. ನಿರ್ದೇಶಕ ಹೇಮಂತ್ ರಾವ್ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಬರುತ್ತೆ ಎನ್ನುವುದನ್ನು ಖಚಿತಪಡಿಸಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದರು. ಸೀಕ್ವೆಲ್‌ನಲ್ಲಿ ಚೈತ್ರಾ ಆಚಾರ್ ಕೂಡ ಜೊತೆಯಾಗಿದ್ದರು. ಚರಣ್ ರಾಜ್ ಸಂಗೀತ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗಿತ್ತು. ಪುಟ್ಟಿ- ಕತ್ತೆ ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು.

ರಕ್ಷಿತ್ ಶೆಟ್ಟಿ ಮೂರ್ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿ ನಟಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನ ಹೇಮಂತ್ ರಾವ್ ನಿರ್ದೇಶನದಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಕಥೆ ಹೊತ್ತು ಬಂದಿದ್ದರು. ಪ್ರತಿಯೊಬ್ಬರ ಅಭಿನಯಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ರಮೇಶ್ ಇಂದಿರಾ ಕೂಡ ಹೆಚ್ಚು ಅಂಕ ಗಿಟ್ಟಿಸಿಬಿಟ್ಟರು. ತೆಲುಗು ಪ್ರೇಕ್ಷಕರು ಕೂಡ ಚಿತ್ರವನ್ನು ಮೆಚ್ಚಿಕೊಂಡರು.
ಸ್ಲೋ ಪಾಯಿಸನ್ ರೀತಿ 'ಸಪ್ತ ಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳು ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಹಲವರಿಗೆ ಬಹಳ ಇಷ್ಟವಾದರೆ ಮತ್ತೆ ಕೆಲವರಿಗೆ ಇಷ್ಟವಾಗಿರಲಿಲ್ಲ. ಆದರೆ ಓಟಿಟಿ ರಿಲೀಸ್‌ಗಾಗಿ ಸಾಕಷ್ಟು ಜನ ಕಾತರದಿಂದ ಕಾಯುತ್ತಿರುವುದು ಸುಳ್ಳಲ್ಲ.
ಸದ್ಯ ಹೇಮಂತ್ ರಾವ್ '#5' ಎನ್ನುವ ಸಿನಿಮಾ ಕತೆ ಬರೆಯುತ್ತಿರುವುದಾಗಿ ಹೇಳಿದ್ದಾರೆ. ಮತ್ತೊಂದು ಕಡೆ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಹಿಂದೆ ಬಿದ್ದಿದ್ದಾರೆ. ಹೊಂಬಾಳೆ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಉಳಿದವರು ಕಂಡಂತೆ' ಸಿನಿಮಾ ಪ್ರೀಕ್ವೆಲ್ 'ರಿಚರ್ಡ್ ಆಂಟನಿ'. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಮೇಕಿಂಗ್, ಪ್ರಮೋಷನ್, ರಿಲೀಸ್ ನಡೆಯಲಿದೆ.


Click it and Unblock the Notifications










