ಓಟಿಟಿಯಲ್ಲಿ 'ಶಾಖಾಹಾರಿ' ದಾಖಲೆ; ಪರಭಾಷಿಕರಿಂದಲೂ ಚಿತ್ರಕ್ಕೆ ಬಹುಪರಾಕ್
ಇತ್ತೀಚೆಗೆ ಓಟಿಟಿಗೆ ಬಂದ 'ಶಾಖಾಹಾರಿ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮರ್ಡರಿ ಮಿಸ್ಟರಿ ಸಿನಿಮಾ ನೋಡುಗರನ್ನು ಆವರಿಸಿಕೊಳ್ಳುತ್ತಿದೆ. ರಂಗಾಯಣ ರಘು ಹಾಗೂ ಗೋಪಾ ದೇಶಪಾಂಡೆ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
ಸ್ಮಾಲ್‌ಸ್ಕ್ರೀನ್‌ನಲ್ಲಿ 'ಶಾಖಾಹಾರಿ' ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಲ್ಲಾ ಅಂತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಚಿತ್ರ ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಅಮೇಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡು ಸಿನಿಮಾ ಸದ್ದು ಮಾಡ್ತಿದೆ.

ಇಂಗ್ಲೀಷ್ ಸಬ್‌ಟೈಟಲ್ಸ್ ಜೊತೆ ಸ್ಟ್ರೀಮಿಂಗ್ ಆಗುತ್ತಿರುವ 'ಶಾಖಾಹಾರಿ' ಚಿತ್ರವನ್ನು ಪರಭಾಷಿಕರು ನೋಡಿ ಮೆಚ್ಚಿಕೊಂಡಿದ್ದಾರೆ. ಹೊಸ ರೀತಿಯ ಅನುಭವ ನೀಡುವ ಮರ್ಡರ್ ಮಿಸ್ಟರಿ ಸಿನಿಮಾ ಎಂದು ಹೇಳುತ್ತಿದ್ದಾರೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ತಂದಿದೆ.
ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ 'ಶಾಖಾಹಾರಿ'. ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಆ ಹೋಟೆಲ್‌ನಲ್ಲಿ ನಡೆಯುವ ಒಂದಷ್ಟು ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಚಿತ್ರಣವೇ ಹೇಗೆ ಬದಲಾಗಿಬಿಡುತ್ತದೆ ಎನ್ನುವುದು ಸಿನಿಮಾ ಒನ್‌ಲೈನ್ ಸ್ಟೋರಿ.

ಸಂದೀಪ್ ಸುಂಕದ್ 'ಶಾಖಾಹಾರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹಿರಿಯ ನಟ ರಂಗಾಯಣ ರಘು ಅನುಭವದ ನಟನೆ ಚಿತ್ರದ ಜೀವಾಳ. ಇನ್ನು ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪ್ರಬಲ ಪೈಪೋಟಿ ನೀಡಿದ್ದಾರೆ. ಇನ್ನುಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಕಾನ್‌ಸ್ಟೇಬಲ್ ಮಮತಕ್ಕನ ಪಾತ್ರಧಾರಿಯಾಗಿ ಪ್ರತಿಭಾ ನಾಯಕ್ ಕಾಣಿಸಿಕೊಂಡಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್‌ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ 'ಶಾಖಾಹಾರಿ' ಚಿತ್ರಕ್ಕೆ ಹಣ ಹೂಡಿದ್ದಾರೆ.
3 ತಿಂಗಳ ಹಿಂದೆ ಚಿತ್ರಮಂದಿರಗಳಿಗೆ ಬಂದಿದ್ದ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸಿನಿಮಾ ನೋಡಲು ಬರಲಿಲ್ಲ. ನಿಧಾನವಾಗಿ ಶೋಗಳ ಸಂಖ್ಯೆ ಹೆಚ್ಚಿಸಿಕೊಂಡು 'ಶಾಖಾಹಾರಿ' ಸಿನಿಮಾ ಸಾಗಿತ್ತು. ಅಂತೂ ಇಂತೂ 25 ದಿನ ಪೂರೈಸಿತ್ತು. ಚೊಚ್ಚಲ ಪ್ರಯತ್ನದಲ್ಲೇ ನಿರ್ದೇಶಕ ಸಂದೀಪ್ ಸುಂಕದ್ ಕಮಾಲ್ ಮಾಡಿದ್ದಾರೆ. ಮಲಯಾಳಂನಲ್ಲಿ ಮಾತ್ರ ಇಂತಹ ಸಿನಿಮಾಗಳು ಬರುತ್ತಿದ್ದವು. ಅದನ್ನು ಕನ್ನಡದಲ್ಲಿ ಮಾಡಿ ಗೆದ್ದಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.
ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್, ಮರ್ಡರ್ ಮಿಸ್ಟರಿ ಸಿನಿಮಾಗಳ ಸಂಖ್ಯೆ ಕಮ್ಮಿ. ಆ ನಿಟ್ಟಿನಲ್ಲಿ 'ಶಾಖಾಹಾರಿ' ಅದ್ಭುತ ಪ್ರಯತ್ನ. ವಿಶ್ವಜಿತ್ ರಾವ್ ಛಾಯಾಗ್ರಹಣ, ಮಯೂರ್ ಅಂಬೆಕಲ್ಲು ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ಚಿತ್ರದ ವಿತರಣೆ ಹಕ್ಕುಗಳನ್ನು ಕೊಂಡುಕೊಂಡಿತ್ತು. 4 ದಿನಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ 'ಶಾಖಾಹಾರಿ' ಚಿತ್ರಕ್ಕೆ ರೆಕಮಂಡೇಷನ್ ಸಿಕ್ಕಿದೆ. ಆ ಮೂಲಕ ಹೆಚ್ಚು ಚಂದಾರರಿಗೆ ತಲುಪುವಂತಾಗಿದೆ.
ನೀನಾಸಂ ಸತೀಶ್, ಪೃಥ್ವಿ ಅಂಬರ್ ಸೇರಿದಂತೆ ಕನ್ನಡ ಸಿನಿಮಾ ತಾರೆಯರು ಕೂಡ 'ಶಾಖಾಹಾರಿ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಪ್ಪದೇ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











