ನೆಟ್‌ಫ್ಲಿಕ್ಸ್‌ನಲ್ಲಿ ಮರ್ದಾನಿ 3 ಮ್ಯಾಜಿಕ್ ; ಐತಿಹಾಸಿಕ ದಾಖಲೆ - ರಾಣಿ ಮುಖರ್ಜಿ ಭಾವುಕ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.
ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬಾಕ್ಸಾಫೀಸ್‌ನಲ್ಲಿ ಪವಾಡವನ್ನು ಮಾಡುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ರಾಣಿ ಮುಖರ್ಜಿ.

ಹೌದು, ರಾಣಿ ಮುಖರ್ಜಿ.. ಬಾಲಿವುಡ್‌ನಲ್ಲಿ ಹಸ್ಕಿ ಧ್ವನಿಯನ್ನು ಹೊಂದಿರುವ ಚೆಲುವೆ. ಕಳೆದ 30 ವರ್ಷಗಳಿಂದ ತಮ್ಮ ಅಭಿನಯದಿಂದ ಅಭಿಮಾನಿಗಳ ಮನಸೊರೆಗೊಂಡ ರಾಣಿ ಮುಖರ್ಜಿ ಮಹಿಳಾ ಪ್ರಧಾನ ಚಿತ್ರಗಳತ್ತ ಹೊರಳಿ ಹೆಚ್ಚು ಕಡಿಮೆ ಒಂದು ದಶಕದ ಮೇಲಾಗಿದೆ.
''ಲಾಗಾ ಚುನರಿ ಮೇ ದಾಗ್''.. ''ನೋ ಓನ್ ಕಿಲ್ಲಡ್ ಜೆಸ್ಸಿಕಾ''.. ''ಮರ್ದಾನಿ''.. ''ಹಿಚ್ಕೀ.''. ''ಮರ್ದಾನಿ 2''.. ''Mrs. ಚಟರ್ಜಿ vs ನೋರ್‌ವೇ''.. ಹೀಗೆ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಚಿತ್ರಗಳನ್ನು ಮಾಡುತ್ತಾ ಬಂದಿರುವ ರಾಣಿ ಮುಖರ್ಜಿ ಅವರ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಅಂದರೆ ಅದು ''ಮರ್ದಾನಿ 3".
ಬಾಕ್ಸಾಫೀಸ್ ಅಂಕಿ-ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲೇ ₹50ಕೋಟಿ + ಹಣ ದೋಚಿದ ಚಿತ್ರ "ಮರ್ದಾನಿ 3". ಇನ್ನೂ ನೆಟ್ ಫ್ಲಿಕ್ಸ್ ಅಂಗಳಕ್ಕೆ ಈ ಚಿತ್ರ ಬಂದು ಒಂದು ತಿಂಗಳ ಮೇಲಾಗಿದೆ.
ಆದರೆ ಕ್ರೇಜ್ ಮಾತ್ರ ಇನ್ನೂ ಹಾಗೇ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಟಾಪ್ ಲಿಸ್ಟ್ ನಲ್ಲಿ ಇನ್ನೂ ಟ್ರೆಂಡಿಂಗ್ ನಲ್ಲಿದೆ. ಸಹಜವಾಗಿ ಚಿತ್ರಕ್ಕೆ ಇವತ್ತು ಕೂಡ ಸಿಕ್ತಿರುವ ಈ ಪ್ರೀತಿಯಿಂದ ರಾಣಿ ಮುಖರ್ಜಿ ಹೃದಯ ತುಂಬಿ ಬಂದಿದೆ. ಹೀಗಾಗಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ ರಾಣಿ ಮುಖರ್ಜಿ.

ಈ ಕುರಿತು ಮಾತನಾಡಿರುವ ರಾಣಿ ಮುಖರ್ಜಿ ವೈಯಕ್ತಿಕವಾಗಿ ''ಮರ್ದಾನಿ 3'' ನನಗೆ ತುಂಬಾನೆ ಭಾವನಾತ್ಮಕವಾದ ಪ್ರಯಾಣ ಎಂದು ಹೇಳಿದ್ದಾರೆ. ಮೊದಲು ಚಿತ್ರಮಂದಿರಗಳಲ್ಲಿ ಈಗ ನೆಟ್ ಫ್ಲಿಕ್ಸ್ ನಲ್ಲಿ, ಜನ ಮಹಿಳಾ ಪ್ರಧಾನ ಚಿತ್ರವನ್ನು ಹೊತ್ತು ಮೆರೆಸಿದ್ದಾರೆ ಇದಕ್ಕಿಂತ ಖುಷಿ ಇನ್ನೆಲ್ಲಿದೆ ಎಂದು ಹೇಳಿರುವ ರಾಣಿ ಮುಖರ್ಜಿ ''ಮರ್ದಾನಿ 3'' ಮಹಿಳಾ ಆಕ್ಷನ್ ಚಿತ್ರಗಳಲ್ಲಿಯೇ ಒಂದು ಮೈಲಿಗಲ್ಲಾಗಿದ್ದು ನನಗೆ ಹೆಮ್ಮೆಯ ವಿಚಾರ ಎಂದಿದ್ದಾರೆ.
ನೆಟ್ ಫ್ಲಿಕ್ಸ್ ಟಾಪ್ ಲಿಸ್ಟ್ ನಲ್ಲಿ ಒಂದು ತಿಂಗಳಿಂದ ಟ್ರೆಂಡಿಂಗ್ ನಲ್ಲಿರುವುದನ್ನು ನೋಡಿದರೆ ನನಗೆ ತುಂಬಾ ಖುಷಿಯಾಗ್ತಿದೆ, ಇಷ್ಟೇ ಅಲ್ಲ ವಿನ್ರಮ ಭಾವವೂ ನನ್ನಲ್ಲಿದೆ ಎಂದು ಹೇಳಿರುವ ರಾಣಿ ಮುಖರ್ಜಿ ಈ ಯಶಸ್ಸು ಮುಂಬರುವ ದಿನಗಳಲ್ಲಾಗುವ ಬದಲಾವಣೆಯ ಕ್ರಾಂತಿಯ ಮುನ್ಸೂಚನೆ ಎಂದಿದ್ದಾರೆ.
ಜನ ಈಗ ಧೈರ್ಯ, ನ್ಯಾಯ ಮತ್ತು ವಾಸ್ತವ ಸಮಸ್ಯೆಗಳ ಕಥಾಹಂದರ ಹೊಂದಿರುವ ಚಿತ್ರಗಳನ್ನು ಮೆಚ್ವಿಕೊಳ್ತಿದ್ದಾರೆ ಎಂದು ಹೇಳಿರುವ ರಾಣಿ ಮುಖರ್ಜಿ ಕಮರ್ಷಿಯಲ್ ಆಗಿ ಗೆಲ್ಲುವುದಲ್ಲದೇ ಜನರ ಮನದ ಮೇಲೆ ಸಿನಿಮಾ ಪ್ರಭಾವ ಬೀರಬಹುದು ಎನ್ನುವುದನ್ನು ''ಮರ್ದಾನಿ 3'' ಸಾಬೀತು ಮಾಡಿದೆ ಎಂದು ಹೇಳಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳನ್ನು ಈಗ ಓಟಿಟಿಯ ಎಲ್ಲ ವೇದಿಕೆಯವರು ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವುದು ಮತ್ತೊಂದು ಖುಷಿಯ ವಿಚಾರ ಎಂದಿದ್ದಾರೆ.


Click it and Unblock the Notifications