Dhurandhar OTT: ಬ್ಲಾಕ್‌ಬಸ್ಟರ್ 'ಧುರಂಧರ್' ಓಟಿಟಿ ಸ್ಟ್ರೀಮಿಂಗ್ ಎಲ್ಲಿ, ಯಾವಾಗ?
ಬಾಲಿವುಡ್ 'ಧುರಂಧರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಿದೆ. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ 'ಕಾಂತಾರ- 1' ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಈಗಾಗಲೇ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಸದ್ದು ಮಾಡ್ತಿದೆ.
ಯಾವುದೇ ನಿರೀಕ್ಷೆ ಇಲ್ಲದೇ ಬಂದ 'ಧುರಂಧರ್' ಸಿನಿಮಾ ಅಚ್ಚರಿ ಮೂಡಿಸಿದೆ. ಆದಿತ್ಯಾಧರ್ ನಿರ್ದೇಶನದ ಚಿತ್ರದಲ್ಲಿ ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಮಾಧವನ್ ಸೇರಿದ ದೊಡ್ಡ ತಾರಾಗಣವಿದೆ. ಡಿಸೆಂಬರ್ 5ರಂದು ತೆರೆಕಂಡ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಬೆಂಗಳೂರಿನಲ್ಲೇ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ.

ಸದ್ಯಕ್ಕೆ ಬಾಕ್ಸಾಫೀಸ್‌ನಲ್ಲಿ 'ಧುರಂಧರ್' ಆರ್ಭಟ ಕಮ್ಮಿ ಆಗುವ ಸುಳಿವು ಸಿಕ್ತಿಲ್ಲ. ಪ್ರಭಾಸ್ ನಟನೆಯ 'ಕಲ್ಕಿ 2898 AD', ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಮುಂದೆ 'RRR', 'ಜವಾನ್', 'KGF-2' ಸಿನಿಮಾಗಳ ಬಾಕ್ಸಾಫೀಸ್ ದಾಖಲೆ ಮುರಿಯಲು ಅಣಿಯಾಗಿದೆ. ಹಿಂದಿ ಸಿನಿಮಾಗಳು 8 ವಾರಗಳ ಬಳಿಕ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸುತ್ತವೆ. 'ಧುರಂಧರ್' ದರ್ಬಾರ್ ನೋಡಿದರೆ ಇನ್ನೊಂದು ಒಂದು ತಿಂಗಳು ಸಿನಿಮಾ ಓಟಿಟಿಗೆ ಬರಲ್ಲ.
ಓಟಿಟಿಯಲ್ಲಿ ಯಾವಾಗ?
ಜನವರಿ 30ರಂದು 'ಧುರಂಧರ್' ಸಿನಿಮಾ ಓಟಿಟಿಗೆ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ 25 ದಿನ ಪೂರೈಸಿ ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಅನಾಯಾಸವಾಗಿ 50 ದಿನ ಪೂರೈಸಲಿದೆ.

ಓಟಿಟಿ ರೈಟ್ಸ್ ಡೀಲ್
ಭರ್ಜರಿ ಬೆಲೆಗೆ 'ಧುರಂಧರ್' ಸಿನಿಮಾ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಬರೋಬ್ಬರಿ 285 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎಂದು ಹೇಳಲಾಗ್ತಿದೆ. ಅದೇ ನಿಜವಾಗಿದ್ದರೆ ಇದು ಹೊಸ ದಾಖಲೆಯೇ ಸರಿ. ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿರುವ ಚಿತ್ರವನ್ನು ದಕ್ಷಿಣದ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಬರೀ ಹಿಂದಿಯಲ್ಲೇ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕರ್ನಾಟಕದಲ್ಲೇ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ.
'ಧುರಂಧರ್' ಕಾಲಾವಧಿ
ಬರೋಬ್ಬರಿ 3 ಗಂಟೆ 34 ನಿಮಿಷದ ದೀರ್ಘಾವಧಿ ಸಿನಿಮಾ ಇದು. ಆದರೆ ಎಲ್ಲೂ ಬೋರ್ ಹೊಡೆಸದೇ ಪ್ರೇಕ್ಷಕರನ್ನು ರಂಜಿಸುತ್ತಿದೆ. ರಣ್ವೀರ್ ಹಾಗೂ ಅಕ್ಷಯ್ ಖನ್ನಾ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 'ಅನಿಮಲ್' ಚಿತ್ರಕ್ಕಿಂತಲೂ ಇದು ಸುದೀರ್ಘ ಕಾಲಾವಧಿ ಸಿನಿಮಾ ಎನಿಸಿಕೊಂಡಿದೆ. ಕೆಲವರು ಪದೇ ಪದೆ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
ಧುರಂಧರ್-2
ಮಾರ್ಚ್ 19ಕ್ಕೆ 'ಧುರಂಧರ್- 2' ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಅದೇ ದಿನ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ. ಎರಡೂ ಸಿನಿಮಾಗಳ ನಡುವೆ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರಂಟಿ ಎನ್ನುವಂತಾಗಿದೆ. ಈದ್ ಸಂಭ್ರಮದಲ್ಲಿ ಎರಡೂ ಸಿನಿಮಾಗಳು ಮುಖಾಮುಖಿ ಆಗುತ್ತಿದ್ದು ಕುತೂಹಲ ಮೂಡಿಸಿದೆ.
'ಧುರಂಧರ್' ಕಲೆಕ್ಷನ್
ಇನ್ನು ಚಿತ್ರದ ಕಲೆಕ್ಷನ್ ವಿಚಾರಕ್ಕೆ ಬಂದರೆ ಭಾರತದಲ್ಲಿ ಈವರೆಗೆ 730 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. 870 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಇನ್ನು ಓವರ್‌ಸೀಸ್‌ನಲ್ಲಿ 238 ರೂ. ಗಳಿಸಿದ್ದು ಒಟ್ಟಾರೆ ವಿಶ್ವದಾದ್ಯಂತ 1100.22 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: 'ಧುರಂಧರ್' ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಜನವರಿ 30ರಂದು ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.


Click it and Unblock the Notifications










