Sapta Saagaradaache Ello: ಓಟಿಟಿಯಲ್ಲೂ ಮನು- ಪ್ರಿಯಾ ಜಾದೂ: ಗೂಗಲ್ ಟ್ರೆಂಡಿಂಗ್‌ನಲ್ಲಿ ದಾಖಲೆ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ ಜೋಡಿಯ ಮೋಡಿ ಮುಂದುವರೆದಿದೆ. ಓಟಿಟಿಯಲ್ಲೂ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ಶುಕ್ರವಾರ(ಸೆಪ್ಟೆಂಬರ್ 28) ರಾತ್ರಿ ದಿಢೀರನೆ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಹೇಮಂತ್ ರಾವ್ ನಿರ್ದೇಶನ ರಕ್ಷ್- ರುಕ್ಕು ಕೆಮೆಸ್ಟ್ರಿಗೆ ವೀಕ್ಷಕರು ಫಿದಾ ಆಗ್ತಿದ್ದಾರೆ.
ಸೆಪ್ಟೆಂಬರ್ 1ರಂದು ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬಳಿಕ ತೆಲುಗಿಗೆ ಡಬ್ ಆಗಿ ಸೆಪ್ಟೆಂಬರ್ 22ರಂದು ತೆರೆಕಂಡಿತ್ತು. ಆಂಧ್ರ, ತೆಲಂಗಾಣ ಪ್ರೇಕ್ಷಕರು 'ಸಪ್ತ ಸಾಗರಾಲು ದಾಟಿ'ಸಿನಿಮಾ ನೋಡಿ ಮೆಚ್ಚಿಕೊಂಡರು. ಆದರೆ ದಿಢೀರನೆ ಸಿನಿಮಾ ಓಟಿಟಿಗೆ ಬಂದಿದ್ದು ಕೆಲವರಿಗೆ ಬೇಸರ ತಂದಿತ್ತು. ಈ ಚಿತ್ರವನ್ನು ಬಿಗ್‌ಸ್ಕ್ರೀನ್‌ನಲ್ಲೇ ನೋಡಬೇಕಿತ್ತು ಎನ್ನುವುದು ಕೆಲವರ ವಾದ. ಆದಾಗ್ಯೂ ಓಟಿಟಿಯಲ್ಲಿ ಸಿನಿಮಾ ಟ್ರೆಂಡ್ ಕ್ರಿಯೇಟ್ ಮಾಡಿದೆ.

ಜನಪ್ರಿಯ OTT ಪ್ಲಾಟ್‌ಫಾರ್ಮ್ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಸಿನಿಮಾ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಧೂಳೆಬ್ಬಿಸುತ್ತಿದೆ. 'ಸಪ್ತ ಸಾಗರದಾಚೆ ಎಲ್ಲೋ' ಇತ್ತೀಚೆಗೆ, ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಡ್ರಾಮಾ (ಟಾಪ್ 1 ಟ್ರೆಂಡಿಂಗ್) ಎನ್ನುವ ದಾಖಲೆ ಬರೆದಿದೆ. ಈ ವಿಷಯವನ್ನು ಚಿತ್ರತಂಡ ಘೋಷಿಸಿದೆ. ಕೆಲವರು ನಿರೂಪಣೆ ಬಹಳ ಸ್ಲೋ ಇದೆ ಓಟಿಟಿಗೆ ಹೇಳಿಮಾಡಿಸಿದ ಸಿನಿಮಾ ಎಂದಿದ್ದರು. ಅದಕ್ಕೆ ತಕ್ಕಂತೆ ಈಗ ಜನ ಮುಗಿಬಿದ್ದು ನೋಡುತ್ತಿದ್ದಾರೆ.
ಓಟಿಟಿಯಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡುತ್ತಿರುವವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ತೆಲುಗು ಪ್ರೇಕ್ಷಕರಿಗೆ ಕೊಂಚ ಹೆಚ್ಚೇ ಸಿನಿಮಾ ಇಷ್ಟವಾಗ್ತಿದೆ. ರಕ್ಷಿತ್, ರುಕ್ಮಿಣಿ ನಟನೆ, ಹೇಮಂತ್ ನಿರ್ದೇಶನ, ಚರಣ್ ಸಂಗೀತ ಎಲ್ಲದರ ಬಗ್ಗೆಯೂ ಮಾತನಾಡಲು ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಅದ್ಭುತ ಪ್ರೇಮಕತೆ ಎಂದು ಉದ್ಘಾರ ತೆಗೆದಿದ್ದಾರೆ.
ಇದು ಮೊದಲ ಭಾಗ ಮಾತ್ರ. 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ಎರಡನೇ ಭಾಗ ಕನ್ನಡ ಹಾಗೂ ತೆಲುಗಿನಲ್ಲಿ ಅಕ್ಟೋಬರ್ 27 ರಂದು ಬಿಡುಗಡೆಯಾಗಲಿದೆ. ಇನ್ನು ಈ ಸಿನಿಮಾ ಕಥೆ ಏನು ಎನ್ನುವುದನ್ನು ನೋಡಿದ್ರೆ, "ಗಾಯಕಿ ಪ್ರಿಯಾ ಮತ್ತು ಕಾರ್ ಡ್ರೈವರ್ ಮನು ಪ್ರೀತಿಸಿ ಮದುವೆಯಾಗಲು ಬಯಸುತ್ತಾರೆ. ಬಹಳ ಸುಂದರವಾಗಿ ಬದುಕುವ ಕನಸು ಕಾಣುತ್ತಾರೆ. ಆದರೆ ಅದಕ್ಕಾಗಿ ಇಬ್ಬರೂ ತೆಗೆದುಕೊಂಡ ತಪ್ಪು ನಿರ್ಧಾರ ಅವರ ಬದುಕನ್ನೇ ಬದಲಾಯಿಸುತ್ತದೆ. ಆ ನಿರ್ಧಾರ ಏನು? ಅವರ ಜೀವನ ಯಾವ ತಿರುವು ಪಡೆದುಕೊಳ್ಳುತ್ತದೆ? ಅನ್ನೋದು ಉಳಿದ ಕಥೆ.
ಚಿತ್ರಕತೆ ಕೊಂಚ ನಿಧಾನ ಅನ್ನಿಸಿದರೂ ಎಮೋಷನ್ ಕನೆಕ್ಟ್ ಆಗುತ್ತದೆ. ಅದಕ್ಕಿಂತ ಮುಖ್ಯವಾಗಿ ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ನಾಯಕ ಮತ್ತು ನಾಯಕಿಯರಾಗಿ ನಟಿಸಿರುವ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪಾತ್ರಗಳಿಗೂ ಪ್ರೇಕ್ಷರು ಕನೆಕ್ಟ್ ಆಗಿಬಿಡುತ್ತಾರೆ. ಅದೇ ಕಾರಣಕ್ಕೆ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.
ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ, ಅಶೋಕ್ ಶರ್ಮಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನಿರ್ಮಿಸಿದ್ದರು. ಕನ್ನಡ, ತೆಲುಗು ಜೊತೆಗೆ ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಓಟಿಟಿಗೆ ಬಂದಿದೆ. ಅಕ್ಟೋಬರ್ 19ಕ್ಕೆ 2ನೇ ರಿಲೀಸ್ ಪ್ಲ್ಯಾನ್ ಇತ್ತು. ಆದರೆ ಈಗ ಒಂದು ವಾರ ಮುಂದೂಡಲಾಗಿದೆ.


Click it and Unblock the Notifications











