ಶಿವಣ್ಣ ವಿಶೇಷ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್
ಓಟಿಟಿಯಲ್ಲಿ ಕನ್ನಡ ಸಿನಿಮಾ, ವೆಬ್‌ಸೀರಿಸ್‌ಗಳು ಸದ್ದು ಮಾಡ್ತಿದೆ. ಈ ವಾರ ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಸಿನಿಮಾ ಓಟಿಟಿಗೆ ಬಂದಿದೆ. ತೆಲುಗಿನ 'ಹಿಟ್-3', ತಮಿಳಿನ 'ರೆಟ್ರೋ' ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿವೆ. ಮೋಹನ್ ಲಾಲ್ ನಟನೆಯ 'ಥುರಡುರುಂ' ಸಿನಿಮಾ ಕನ್ನಡಕ್ಕೆ ಡಬ್ ಆಗಿಬರ್ತಿದೆ.
ಕಳೆದ ವಾರ 'ಫೈರ್ ಫ್ಲೈ' ಕನ್ನಡ ಸಿನಿಮಾ ಪ್ರೈಂ ವೀಡಿಯೋಗೆ ಬಂದಿತ್ತು. ಶ್ರೀಮುತ್ತು ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕೂಡ ನಟಿಸಿದ್ದರು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ವಂಶಿಕೃಷ್ಣ ಶ್ರೀನಿವಾಸ್ ಈ ಚಿತ್ರ ನಿರ್ದೇಶಿಸಿ ನಟಿಸಿದ್ದರು.

ಇದೀಗ ಶಿವಣ್ಣ ವಿಶೇಷ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಸಿನಿಮಾ ಓಟಿಟಿ ಬಿಡುಗಡೆಗೆ ಸಜ್ಜಾಗಿದೆ. ಇವತ್ತು(ಮೇ 29)ಮಧ್ಯರಾತ್ರಿಯಿಂದಲೇ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿದೆ. ಇದು ಸಹಜವಾಗಿಯೇ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಸಂತಸ ತಂದಿದೆ. ಅಂದಹಾಗೆ ಆ ಸಿನಿಮಾ 'ವೀರಚಂದ್ರಹಾಸ'. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕನ್ನಡ ಚಿತ್ರರಂಗದಲ್ಲೇ ಇದು ಹೊಸ ಪ್ರಯತ್ನ ಆಗಿತ್ತು. ಯಕ್ಷಗಾನವನ್ನು ತೆರೆಮೇಲೆ ತಂದಿದ್ದ ಸಿನಿಮಾ ಇದು.
ಏಪ್ರಿಲ್ 18ಕ್ಕೆ 'ವೀರಚಂದ್ರಹಾಸ' ಸಿನಿಮಾ ತೆರೆಗೆ ಬಂದಿತ್ತು. ರವಿ ಬಸ್ರೂರು ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಶಿವಪುಟ್ಟಸ್ವಾಮಿ ಪಾತ್ರದಲ್ಲಿ ಶಿವಣ್ಣ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಯಕ್ಷಗಾನ ವೇಷದಲ್ಲಿ ಶಿವಣ್ಣನನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದರು. ಸಣ್ಣ ಝಲಕ್‌ನಲ್ಲಿ ಎಐ ತಂತ್ರಜ್ಞಾನ ಬಳಸಿ ಅಣ್ಣಾವ್ರು ಹಾಗೂ ಅಪ್ಪುನ ಕೂಡ ತೋರಿಸಲಾಗಿತ್ತು. ಇದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

ಮಧ್ಯರಾತ್ರಿಯಿಂದಲೇ ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ವೀರಚಂದ್ರಹಾಸ' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇದು ರವಿ ಬಸ್ರೂರು ಅವರಿಗೆ ಸಂತಸದ ಸಮಯ. ಅವರ ಕನಸಿನ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ. ಚಿತ್ರದಲ್ಲಿ ಚಂದ್ರಹಾಸನ ಪಾತ್ರದಲ್ಲಿ ಶಿಥಿಲ್ ಶೆಟ್ಟಿ ನಟಿಸಿದ್ದಾರೆ.
ನಾಗಶ್ರೀ, ಪ್ರಸನ್ನ ಶೆಟ್ಟಿಗಾರ್, ಉದಯ್ ಕಡಬಾಲ್, ರವೀಂದ್ರ ದೇವಡಿಗ, ಗುಣಶ್ರೀ, ಗರುಡ ರಾಮ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ಯಕ್ಷಗಾನ ವೇಷದಲ್ಲೇ ಮಿಂಚಿದ್ದಾರೆ. ಇಡೀ ಸಿನಿಮಾ ಯಜ್ಞಗಾನದ ರೂಪದಲ್ಲಿದೆ. ಎನ್. ಎಸ್ ರಾಜ್‌ಕುಮಾರ್ ಈ ಚಿತ್ರಕ್ಕೆ ಹಣ ಹೂಡಿದ್ದರು. ಸ್ವತಃ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ವೀರಚಂದ್ರಹಾಸ' ಚಿತ್ರವನ್ನು ವಿತರಣೆ ಮಾಡಿತ್ತು.
ಕನ್ನಡದಲ್ಲಿ ಯಶಸ್ಸು ಕಂಡಿದ್ದ 'ವೀರಚಂದ್ರಹಾಸ' ಸಿನಿಮಾ ಬಳಿಕ ತೆಲುಗಿಗೂ ಡಬ್ ಆಗಿ ಬಿಡುಗಡೆ ಆಗಿತ್ತು. ಶೀಘ್ರದಲ್ಲೇ ತೆಲುಗು ವರ್ಷನ್ ಕೂಡ ಓಟಿಟಿಗೆ ಬರಲಿದೆ. ಜೈಮಿನಿ ಭಾರತದ ಒಂದು ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದು ಯಕ್ಷಗಾನದಲ್ಲಿ ಬಹಳ ಜನಪ್ರಿಯ ಪ್ರಸಂಗ. ಅದನ್ನೇ ರವಿ ಬಸ್ರೂರು ತೆರೆಗೆ ತಂದಿದ್ದರು. ವೇದಿಕೆಯಲ್ಲಿ ನಡೆಯುತ್ತಿದ್ದ ಯಕ್ಷಗಾನಕ್ಕೆ ದೃಶ್ಯರೂಪ ಕೊಟ್ಟಿದ್ದಾರೆ. ಗ್ರಾಫಿಕ್ಸ್ ಬಳಸಿ ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.
ಶಿವಣ್ಣ ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಮುನ್ನ 'ವೀರಚಂದ್ರಹಾಸ' ಚಿತ್ರದಲ್ಲಿ ನಟಿಸಿದ್ದರು. ಶಿವಣ್ಣ ಇಂತಾದೊಂದು ಪಾತ್ರ ಮಾಡಬೇಕು ಎನ್ನುವುದು ಪತ್ನಿ ಗೀತಾ ಆಸೆಯಾಗಿತ್ತು. ಬಹಳ ಗುಟ್ಟಾಗಿಯೇ ಚಿತ್ರೀಕರಣ ನಡೆಸಿದ್ದರು. ಬಳಿಕ ಈ ವಿಚಾರ ಗೊತ್ತಾಗಿತ್ತು. ಇನ್ನು ಎಐನಲ್ಲಿ ಅಣ್ಣಾವ್ರು, ಪುನೀತ್ ರಾಜ್‌ಕುಮಾರ್ ಅವರನ್ನು ತೋರಿಸುವ ಬಗ್ಗೆ ಚಿತ್ರತಂ ಕುತೂಹಲ ಉಳಿಸಿಕೊಂಡಿತ್ತು.


Click it and Unblock the Notifications











