Mass Jathara OTT: ಓಟಿಟಿಗೆ ಬಂತು ರವಿತೇಜಾ- ಶ್ರೀಲೀಲಾ 'ಮಾಸ್' ಜಾತರ; ಎಲ್ಲಿ ನೋಡ್ಬೋದು ಅಂದ್ರೆ?
ಇತ್ತೀಚಿನ ದಿನಗಳಲ್ಲಿ ಬಾಕ್ಸಾಫೀಸ್ ಗಳಿಕೆ ಅನ್ನೋದು ಎಲ್ಲಾ ಸಿನಿಮಾಗಳಿಂದ ಸಾಧ್ಯವಾಗ್ತಿಲ್ಲ. ತಿಂಗಳಿಗೂ ಮುನ್ನ ದೊಡ್ಡ ದೊಡ್ಡ ಸಿನಿಮಾಗಳು ಓಟಿಟಿಗೆ ಬರ್ತಿದೆ. 'ಕೂಲಿ' ಹಾಗೂ 'ಕಾಂತಾರ-1' ರೀತಿಯ ಸಿನಿಮಾಗಳೇ 4 ವಾರ ಮುಗಿಸೋ ಮುನ್ನ ಓಟಿಟಿಗೆ ಬರ್ತಿವೆ. ಇದೇ ಮುಂದುವರೆದರೆ ಆದಷ್ಟು ಬೇಗ ಥಿಯೇಟರ್ ಸಂಸ್ಕೃತಿ ನಶಿಸಿ ಹೋಗುತ್ತದೆ.
ದೊಡ್ಡ ಸಿನಿಮಾಗಳನ್ನು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ನೋಡಲು ಹಿಂದೇಟು ಹಾಕುತ್ತಿದ್ದಾರೆ. ರವಿತೇಜಾ ಮ್ಯಾಜಿಕ್ ಈಗ ಚಿತ್ರಮಂದಿರಗಳಲ್ಲಿ ನಡೀತಿಲ್ಲ. ಒಂದ್ಕಾಲದಲ್ಲಿ ತೆಲುಗಿನ ಸ್ಟಾರ್ ನಟ ಎನಿಸಿಕೊಂಡಿದ್ದ ಮಾಸ್ ಮಹಾರಾಜ ಈಗ ಸೈಲೆಂಟ್ ಆಗಿಬಿಟ್ಟಿದ್ದಾರೆ. ರವಿತೇಜಾ ಹಾಗೂ ಶ್ರೀಲೀಲಾ ನಟಿಸಿದ್ದ 'ಮಾಸ್ ಜಾತರ' ಸಿನಿಮಾ ಚಿತ್ರಮಂದಿರಗಳಿಂದ ಬಂದು ಹೋಗಿದ್ದೇ ಬಹಳ ಜನರಿಗೆ ಗೊತ್ತಿಲ್ಲ.

ಭಾನು ಭೋಗವರಪು ನಿರ್ದೇಶನದ 'ಮಾಸ್ ಜಾತರ' ಸಿನಿಮಾ ಇದೀಗ ಓಟಿಟಿಗೆ ಬರ್ತಿದೆ. ಅಧಿಕೃತವಾಗಿ ರಿಲೀಸ್ ಡೇಟ್ ಕೂಡ ಘೋಷಣೆಯಾಗಿದೆ. ಇದೇ ಶುಕ್ರವಾರ(ನವೆಂಬರ್ 28) ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಅದೇ ತಿಂಗಳಿಗೂ ಮುನ್ನ ಈ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತಾ ಎಂದು ಕೆಲವರು ಹುಬ್ಬೇರಿಸಿದ್ದಾರೆ.
ಅಕ್ಟೋಬರ್ 31ರಂದು ತೆರೆಗೆ ಬಂದಿದ್ದ 'ಮಾಸ್ ಜಾತರ' ಚಿತ್ರ ಹೀನಾಯವಾಗಿ ಸೋತಿತ್ತು. ಅಂದಾಜು 70 ಕೋಟಿ ರೂ. ಬಜೆಟ್ ಸಿನಿಮಾ 20 ಕೋಟಿ ರೂ. ಕಲೆಕ್ಷನ್ ಮಾಡಲು ತಿಣುಕಾಡಿತ್ತು. ರವಿತೇಜಾ ಸಿನಿಬದುಕಿನಲ್ಲಿ ಬಹಳ ಹೀನಾಯವಾದ ಸೋಲು ಇದು ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಬಹಳ ಬೇಗ ಓಟಿಟಿಗೆ ತರಲಾಗ್ತಿದೆ. ಜನ ಮರೆತುಬಿಡುವ ಮುನ್ನ ಡಿಜಿಟಲ್ ಸ್ಟ್ರೀಮಿಂಗ್ ಯತ್ನ ಶುರುವಾಗಿದೆ.
'ಮಾಸ್ ಜಾತರ' ಚಿತ್ರದಲ್ಲಿ ಹೊಸದೇನು ಇಲ್ಲ. ಇಲ್ಲಿರೋದು ರೆಗ್ಯುಲರ್ ಕಥೆ. ತೆಲಂಗಾಣದ ರೈಲ್ವೆ ಪೊಲೀಸ್ ಅಧಿಕಾರಿ ಲಕ್ಷ್ಮಣ್ ಭೇರಿ (ರವಿ ತೇಜ) ಬಹಳ ಪ್ರಾಮಾಣಿಕ. ಆತ ಮುಂದೆ ಅಡವಿ ವರಮ್ ಎಂಬಲ್ಲಿಗೆ ವರ್ಗಾವಣೆಯಾಗುತ್ತಾನೆ. ಆ ಭಾಗದಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿರುತ್ತದೆ. ಈ ಬಗ್ಗೆ ಹಳ್ಳಿಯ ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಲ್ಲ. ಅಲ್ಲಿನ ಮಾದಕಜಾಲದ ಮುಖ್ಯಸ್ಥನಾಗಿ ಶಿವುಡು (ನವೀನ್ ಚಂದ್ರ) ನಾನಾ ಅಕ್ರಮಗಳಲ್ಲಿ ಭಾಗಿ ಆಗಿರುತ್ತಾನೆ. ಹಳ್ಳಿಯ ಜನರು ಗಾಂಜಾ ಬೆಳೆಯುವಂತೆ ಮಾಡಿ ಅದನ್ನು ಕೋಲ್ಕತ್ತಾಗೆ ಕಳ್ಳಸಾಗಣೆ ಮಾಡುತ್ತಿರುತ್ತಾನೆ. ಶಿವುಡು ಆರ್ಭಟಕ್ಕೆ ಲಕ್ಷ್ಮಣ್ ಭೇರಿ ಹೇಗೆ ಅಡ್ಡಗಾಲು ಹಾಕ್ತಾನೆ? ಮುಂದೇನು? ಎನ್ನುವುದು ಸಿನಿಮಾ ಕಥೆ.
ಕನ್ನಡ ನಟಿ ಶ್ರೀಲೀಲಾಗೆ ಪದೇ ಪದೆ ಅದೃಷ್ಟ ಕೈ ಕೊಡುತ್ತಿದೆ. ಆಕೆ ನಟಿಸಿದ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಈ ಹಿಂದೆ ರವಿತೇಜಾ ಜೊತೆ ಕಿಸ್ ಬೆಡಗಿ ನಟಿಸಿದ್ದ 'ಧಮಾಕ' ಸಿನಿಮಾ ಗೆದ್ದಿತ್ತು. ತೆಲುಗಿನಲ್ಲಿ ಶ್ರೀಲೀಲಾಗೆ ಸಿಕ್ಕ ಒಂದೇ ಒಂದು ಹಿಟ್ ಸಿನಿಮಾ ಅದು. ಬಳಿಕ ನಟಿಸಿದ ಯಾವುದೇ ಸಿನಿಮಾ ಆಕೆಗೆ ಹೆಸರು ತಂದುಕೊಟ್ಟಿಲ್ಲ. ಪುಷ್ಪ-2 ಚಿತ್ರದಲ್ಲಿ 'ಕಿಸ್ಸಿಕ್' ಎಂದು ಕುಣಿದು ಬಾಲಿವುಡ್ ಮಂದಿ ಕಣ್ಣಿಗೆ ಬಿದ್ದಿದ್ದರು.
ತೆಲುಗಿನಲ್ಲಿ ಮಾತ್ರ ಶ್ರೀಲೀಲಾ ಸೋಲಿನ ಸರಪಳಿ ಮುಂದುವರೆಯುತ್ತಲೇ ಇದೆ. 'ಮಾಸ್ ಜಾತರ' ಆ ಪಟ್ಟಿಗೆ ಹೊರ ಸೇರ್ಪಡೆ. ಓಟಿಟಿಯಲ್ಲಿ ಆದರೂ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಾ ಕಾದು ನೋಡಬೇಕಿದೆ. ಸಿನಿಮಾ ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











