ಡಿಸೆಂಬರ್ 17ರಂದು ಒಟಿಟಿಗೆ 'ಕನ್ನಡಿಗ'ನ ಆಗಮನ
ನಟ ರವಿಚಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿರುವ ಐತಿಹಾಸಿಕ ಕತೆಯುಳ್ಳ ಸಿನಿಮಾ 'ಕನ್ನಡಿಗ' ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.
ಪೀರಿಯಡ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು "ಜಟ್ಟ", "ಮೈತ್ರಿ" ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶಿಸಿರುವ 'ಕನ್ನಡಿಗ' ಸಿನಿಮಾ ಡಿಸೆಂಬರ್ 17ರಂದು ಜೀ ಸಿನಿಮಾ ಕನ್ನಡ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್.ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ 'ಜಟ್ಟ' ಹಾಗೂ 'ಮೈತ್ರಿ' ಸಿನಿಮಾವನ್ನು ಇವರೇ ನಿರ್ಮಾಣ ಮಾಡಿದ್ದರು. 'ಕೆ.ಜಿ.ಎಫ್' ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಲಾಕ್‌ಡೌನ್ ಮುನ್ನವೇ 'ಕನ್ನಡಿಗ' ಸಿನಿಮಾದಲ್ಲಿ ರವಿಚಂದ್ರನ್ ನಟಿಸುವುದಾಗಿ ಘೋಷಣೆ ಆಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ತಡವಾಯಿತು. ಇದೀಗ ಸಿನಿಮಾ ಸಂಪೂರ್ಣ ಮುಗಿದಿದ್ದು, ಜೀ ಕನ್ನಡ ಒಟಿಟಿಯಲ್ಲಿ ಪ್ರಸಾರವಾಗಲಿದೆ.
'ಕನ್ನಡಿಗ' ಸಿನಿಮಾವು 1850 ರ ದಶಕದ ಕತೆಯನ್ನು ಹೊಂದಿರಲಿದೆ. ನಾಡಿನ ಇತಿಹಾಸ ದಾಖಲಿಸುವಲ್ಲಿ ಲಿಪಿಕಾರರ ಕಾಣ್ಕೆ ಬಹಳ ದೊಡ್ಡದು. ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಸಂಕಮ್ಮಬ್ಬೆಯಾಗಿ ನಟಿ ಸ್ವಾತಿ ಚಂದ್ರಶೇಖರ್ ನಟಿಸುತ್ತಿದ್ದಾರೆ.
'ಕನ್ನಡಿಗ' ಸಿನಿಮಾದಲ್ಲಿ ರವಿಚಂದ್ರನ್ ಬಹಳ ಭಿನ್ನವಾದ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಕಿಟೆಲ್ ಪಾತ್ರದಲ್ಲಿ ಜೆಮಿ ವಾಲ್ಟರ್ ನಟಿಸಿದ್ದಾರೆ. ರವಿಚಂದ್ರನ್ ಪತ್ನಿಯ ಪಾತ್ರದಲ್ಲಿ ಪಾವನಾ, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ, ಕಮರಿಲ ಭಟ್ಟನ ಪಾತ್ರದಲ್ಲಿ ಚಿ ಗುರುದತ್, ಮಲ್ಲಿನಾಥನಾಗಿ ಬಾಲಾಜಿ ಮನೋಹರ್, ಹರಿಗೋಪಾಲನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಹಾಗೂ ರಾಣಿ ಚಿನ್ನಬೈರಾದೇವಿ ಪಾತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್, ಬುಳ್ಳನ ಪಾತ್ರದಲ್ಲಿ ಮೈತ್ರಿ ಜಗ್ಗ ನಟಿಸುತ್ತಿದ್ದಾರೆ.
ಸಿನಿಮಾದ ಚಿತ್ರೀಕರಣವು ಚಿಕ್ಕಮಗಳೂರು, ಸಕಲೇಶಪುರ, ಸಾಗರ, ಶಿವಮೊಗ್ಗ ಇತರ ಭಾಗಗಳಲ್ಲಿ ಮಾಡಲಾಗಿದೆ. ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿರುವುದು ಜಿ.ಎಸ್.ವಿ.ಸೀತಾರಾಮ್. ಅರ್ಜುನ್ ಕಿಟ್ಟು ಸಂಕಲನ.


Click it and Unblock the Notifications











