ಓಟಿಟಿಗೆ ಬಂದಿದೆ ಒಂದೊಳ್ಳೆ ಕನ್ನಡ ಸಿನಿಮಾ; ಈಗ್ಲೇ ನೋಡಿ
ಓಟಿಟಿಗೆ ಕನ್ನಡ ಸಿನಿಮಾಗಳು ಬರೋದೇ ಅಪರೂಪ ಎನ್ನುವಂತಾಗಿದೆ. ವೆಬ್ ಸೀರಿಸ್‌ಗಳ ಸುಳಿವೇ ಇಲ್ಲ. ಸ್ಟಾರ್ ನಟರ ಸಿನಿಮಾಗಳನ್ನು ಮಾತ್ರ ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತವೆ. ಸಣ್ಣ ಸಿನಿಮಾಗಳನ್ನು ಕೇಳುವವರೇ ಇಲ್ಲ ಎನ್ನುವ ಆರೋಪವೂ ಇದೆ.
ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಮ್ಯಾಕ್ಸ್' ಹಾಗೂ 'ಯುಐ' ಚಿತ್ರಗಳನ್ನು ಓಟಿಟಿಯಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಓಟಿಟಿಗೂ ಮುನ್ನ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಆ ಬಗ್ಗೆ ಪ್ರೋಮೊ ಕೂಡ ಬಂದಿದೆ.

ಸದ್ಯ ಓಟಿಟಿಯಲ್ಲಿ 'ಮರ್ಯಾದೆ ಪ್ರಶ್ನೆ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಮಧ್ಯರಾತ್ರಿಯಿಂದಲೇ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಕಂಟೆಟ್ ಓರಿಯಂಟೆಡ್ ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ನಾಗರಾಜ್ ಸೋಮಯಾಜಿ ನಿರ್ದೇಶನದ ಚಿತ್ರದಲ್ಲಿ ರಾಕೇಶ್ ಅಡಿಗ, ಸುನಿಲ್ ರಾವ್, ಶೈನ್ ಶೆಟ್ಟಿ, ರೇಖಾ ಕುಡ್ಲಗಿ, ತೇಜು ಬೆಳವಾಡಿ ಸೇರಿದಂತೆ ದೊಡ್ಡ ತಾರಾಗಣವಿದೆ. ನವೆಂಬರ್ 22ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು.
ಮಧ್ಯಮವರ್ಗದವರ ಸಣ್ಣ ಸಣ್ಣ ಹೋರಾಟಗಳ ಕಥೆ ಚಿತ್ರದಲ್ಲಿದೆ. ಟೈಟಲ್ಲೇ ಹೇಳುವಂತೆ ಮರ್ಯಾದೆಗೆ ಹೆದರಿ ಬದುಕುವವರ ನೋವು ನಲಿವಿನ ಕಥೆ ಇಲ್ಲಿದೆ. ಸಿನಿಮಾ ಬಿಡುಗಡೆ ಆದಾಗ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡಿರಲಿಲ್ಲ. ಕೆಲವರು ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದರು. ಎರಡು ತಿಂಗಳ ಬಳಿಕ ಸಿನಿಮಾ ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದೆ.

ನಗರದ ಏರಿಯಾವೊಂದರಲ್ಲಿರುವ ಸತೀಶ, ಸೂರಿ, ಮಂಜ ಎಂಬ ಮೂವರು ಗೆಳೆಯರ ಕಥೆ ಇದು. ಮೂವರದ್ದು ಬೇರೆ ಬೇರೆ ಹಿನ್ನೆಲೆ. ಬೇರೆ ಬೇರೆ ಸಮಸ್ಯೆಗಳು, ಕನಸುಗಳು. ಹಣ ಗಳಿಸಬೇಕು, ಜೀವನ ಕಟ್ಟಿಕೊಳ್ಳಬೇಕು. ಅದಕ್ಕೆ ಏನು ಮಾಡಿದರೆ ಜನ ಏನು ಅಂದುಕೊಳ್ಳುತ್ತಾರೋ ಎನ್ನುವ ಭಯ. ಹೀಗಿರುವಾಗ ಅವರ ಬದುಕಿನಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಅದು ಮುಂದೆ ಹೇಗೆ ಅವರ ಬದುಕಿನ ದಿಕ್ಕನ್ನು ಬದಲಿಸುತ್ತದೆ ಎನ್ನುವುದು ಇನ್ನುಳಿದ ಕಥೆ.
ಆರ್‌ಕೆ ಪ್ರದೀಪ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ನಾಗರಾಜ್ ಸೋಮಯಾಜಿ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹೆಚ್ಚು ಎಳೆಯದೇ ಚಿಕ್ಕದಾಗಿ ಚೊಕ್ಕದಾಗಿ 2 ಗಂಟೆಯಲ್ಲಿ ಕಥೆ ಹೇಳಿ ಮುಗಿಸಿದ್ದಾರೆ. ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗದವರ ಸ್ನೇಹ ಹೇಗಿರುತ್ತದೆ? ಎರಡಕ್ಕೂ ಏನು ವ್ಯತ್ಯಾಸ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ರಾಕೇಶ್, ಸುನೀಲ್, ಪೂರ್ಣಚಂದ್ರ ಉತ್ತಮವಾಗಿ ನಟಿಸಿ ಒಳ್ಳೆ ಅಂಕ ಗಿಟ್ಟಿಸಿದ್ದಾರೆ. ನೆಗೆಟಿವ್ ರೋಲ್‌ನಲ್ಲಿ ಪ್ರಭು ಮುಂಡ್ಕರ್ ಅಬ್ಬರಿಸಿದ್ದಾರೆ.
ಸಂದೀಪ್ ವಲ್ಲೂರಿ ಛಾಯಾಗ್ರಹಣ ಹಾಗೂ ಅರ್ಜುನ್ ರಾಮು ಸಂಗೀತ 'ಮರ್ಯಾದೆ ಪ್ರಶ್ನೆ' ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಶ್ವೇತಾ ಆರ್ ಪ್ರಸಾದ್ ಹಾಗೂ ವಿದ್ಯಾ ಗಾಂಧಿ ರಾಜನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ವೀಕೆಂಡ್ ಮನೆಯಲ್ಲೇ ಕೂತು ನೋಡಲು 'ಮರ್ಯಾದೆ ಪ್ರಶ್ನೆ' ಒಂದೊಳ್ಳೆ ಆಯ್ಕೆ ಎನ್ನಬಹುದು.


Click it and Unblock the Notifications