ಸದ್ದಿಲ್ಲದೇ ಓಟಿಟಿಗೆ ಬಂದಿದೆ ಮತ್ತೊಂದು ಹೊಚ್ಚ ಹೊಸ ಕನ್ನಡ ಸಿನಿಮಾ; ಆದರೆ...
ಇಂಡಿಪೆಂಡೆನ್ಸ್ ಡೇ ವೀಕೆಂಡ್‌ನಲ್ಲಿ ಕನ್ನಡ ಸೇರಿದಂತೆ ಪರಭಾಷೆಯ ಸಾಕಷ್ಟು ಸಿನಿಮಾಗಳು ತೆರೆಗಪ್ಪಳಿಸಿವೆ. ಕನ್ನಡದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ತಮಿಳಿನ 'ತಂಗಲಾನ್' ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಅತ್ತ ಬಾಲಿವುಡ್‌ನಲ್ಲಿ 'ಸ್ತ್ರೀ-2' ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ.
ಈ ವಾರ ತೆರೆಕಂಡ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿವೆ. ಇನ್ನು ಸಿನಿರಸಿಕರು ಮನೆಯಲ್ಲೇ ಕೂತು ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ವೆಬ್ ಸೀರಿಸ್ ನೋಡುವ ಅವಕಾಶವೂ ಇದೆ. ಕಳೆದ ವಾರ ವಸಿಷ್ಠ ಸಿಂಹ ನಟನೆಯ 'ಲವ್‌ಲೀ' ಸಿನಿಮಾ ತೆರೆಗೆ ಬಂದಿತ್ತು. ಈ ಬುಧವಾರ ಡಾಲಿ ಧನಂಜಯ್ ನಟನೆಯ 'ಕೋಟಿ' ಸಿನಿಮಾ ಸಹ ಸ್ಟ್ರೀಮಿಂಗ್ ಆರಂಭಿಸಿತ್ತು.

ಇನ್ನು ಕಳೆದರಡು ದಿನಗಳಿಂದ ಆದಿತ್ಯ ನಟನೆಯ 'ಕಾಂಗರೂ' ಸಿನಿಮಾ ಅಮೇಜಾನ್ ಪ್ರೈಂಗೆ ಬಂದಿದೆ. ಕಿಶೋರ್ ಮೇಗಳಮನೆ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮೇ 3ಕ್ಕೆ ತೆರೆಗೆ ಬಂದಿತ್ತು. ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ ಮೂಡಿಸುವ ವಿಚಾರಗಳ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಪೃಥ್ವಿ ಪಾತ್ರದಲ್ಲಿ ಡೆಡ್ಲಿ ಆದಿತ್ಯಾ ನಟಿಸಿದ್ದರೆ. ಆತನ ಪತ್ನಿ ಮನಶಾಸ್ತ್ರಜ್ಞೆ ಮೇಘನಾ ಆಗಿ ರಂಜನಿ ರಾಘವನ್ ಮಿಂಚಿದ್ದಾರೆ.
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಪೃಥ್ವಿ ವರ್ಗಾವಣೆ ಆಗುತ್ತದೆ. ಅಲ್ಲಿನ ಆಂಟನಿ ಕಾಟೇಜ್ ಎನ್ನುವ ಹೋಂಸ್ಟೇನಲ್ಲಿ ನಡೆಯುವ ಆತ್ಮಹತ್ಯೆ ಚಿತ್ರದ ಕೇಂದ್ರಬಿಂದು. ಅಷ್ಟಕ್ಕೂ ಆ ಹೋಂಸ್ಟೇನಲ್ಲಿ ಉಳಿದು ಹೋಗುವ ದಂಪತಿಗಳು ನಾಪತ್ತೆ ಆಗುವುದು ಯಾಕೆ? ಎನ್ನುವ ರಹಸ್ಯ ಭೇದಿಸಲು ಇನ್ಸ್‌ಪೆಕ್ಟರ್ ಪೃಥ್ವಿ ಮುಂದಾಗುತ್ತಾನೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದೇ ಸಿನಿಮಾ ಕಥೆ.

ಪೊಲೀಸ್ ಆಫೀಸರ್ ಆಗಿ ಆದಿತ್ಯಾ ಖಡಕ್ ಅಭಿನಯ ನೋಡಬಹುದು. ಇತ್ತೀಚೆಗೆ ಅವರು ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ದೊಡ್ಡಮಟ್ಟಿಗೆ ಸಿನಿಮಾಗಳು ಸಕ್ಸಸ್ ಕೂಡ ಆಗಲಿಲ್ಲ. ಆದರೆ ಸಸ್ಪೆನ್ಸ್ ಥ್ರಿಲ್ಲರ್ 'ಕಾಂಗರೂ' ಒಂದು ವಿಭಿನ್ನ ಪ್ರಯತ್ನ. ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿಒಟ್ಟು ಆರು ಜನ ಸ್ನೇಹಿತರು ಸೇರಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ಗಮನ ಸೆಳೆದ ರಂಜನಿ ನಾಯಕಿಯಾಗಿ ನಟಿಸಿದ ಸಿನಿಮಾ ಇದು.
ಆದಿತ್ಯಾ, ರಂಜನಿ ಜೊತೆಗೆ ಕರಿಸುಬ್ಬು, ನಾಗೇಂದ್ರ ಅರಸ್, ಸ್ಪಂದನಾ ಪ್ರಸಾದ್ ಚಿತ್ರದ ತಾರಾಗಣದಲ್ಲಿದ್ದಾರೆ. ಸ್ವತಃ ನಿರ್ದೇಶಕ ಕಿಶೋರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು 'ಕಾಂಗರೂ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಧುಕೋಕಿಲ ಸಂಗೀತ ಹಾಗೂ ಕೆ. ಕಲ್ಯಾಣ್ ಸಾಹಿತ್ಯ ಚಿತ್ರಕ್ಕಿದೆ. ಕ್ಲೈಮ್ಯಾಕ್ಸ್ ಟ್ವಿಸ್ಟ್ ಅಂತೂ ಸಖತ್ ಕಿಕ್ ಕೊಡುವಂತಿದೆ.
ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸದ್ಯಕ್ಕೆ ಬಾಡಿಗೆಗೆ ಸಿಗುತ್ತದೆ. ಸದ್ಯಕ್ಕೆ ಚಂದಾದಾರರು 99 ರೂ. ಪಾವತಿಸಿ ಸಿನಿಮಾ ವೀಕ್ಷಿಸಬಹುದು. ಇನ್ನೆರಡು ದಿನಗಳಲ್ಲಿ 'ಕಾಂಗರೂ' ಸಿನಿಮಾ ಉಚಿತವಾಗಿ ಸ್ಟ್ರೀಮಿಂಗ್ ಆಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ ಈ ಸಿನಿಮಾ ನೋಡಬಹುದು. ಜೊತೆಗೆ ಭ್ರೂಣ ಹತ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಂಗತಿಯೂ ಚಿತ್ರದಲ್ಲಿದೆ. ಇನ್ನು ಈಗಾಗಲೇ ಸಿನಿಮಾ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದ್ದು ಚಿತ್ರತಂಡ ಈ ಬಗ್ಗೆ ಗಮನ ಹರಿಸಬೇಕಿದೆ.


Click it and Unblock the Notifications











