ಹೊಚ್ಚ ಹೊಸ ಕನ್ನಡ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್; ಈಗ್ಲೇ ನೋಡಿ
ಈ ವಾರ ಚಿತ್ರಮಂದಿರಗಳಲ್ಲಿ ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಜೊತೆಗೆ ಕಿರೀಟಿ ನಟನೆಯ 'ಜ್ಯೂನಿಯರ್' ಸಿನಿಮಾ ಬಂದಿದೆ. ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಮತ್ತೊಂದು ಕಡೆ ಕಿರೀಟಿ ಪ್ರಯತ್ನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇತ್ತ ಓಟಿಟಿಯಲ್ಲಿ ಹೊಸದೊಂದು ಕನ್ನಡ ಸಿನಿಮಾ ಬಂದಿದೆ. ಕಳೆದ ವಾರ '''ಮಿಸ್ಟರ್ ರಾಣಿ' ಹಾಗೂ 'ಕರ್ಕಿ' ಚಿತ್ರಗಳು ಓಟಿಟಿಗೆ ಬಂದಿತ್ತು. ಜೊತೆಗೆ ಒಂದಷ್ಟು ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ. ತೆಲುಗು ಹಾಗೂ ತಮಿಳಿನಲ್ಲಿ ತೆರೆಗೆ ಬಂದಿದ್ದ 'ಕುಬೇರ' ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ಇದೀಗ ಪ್ರೈಂ ವೀಡಿಯೋಗೆ ಬಂದಿದೆ.

ಇನ್ನು ಕನ್ನಡದ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಕೂಡ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಮಡೆನೂರ್ ಮನು ನಟನೆಯ ಸಿನಿಮಾ ಇದು. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಮನು ವಿವಾದದಲ್ಲಿ ಸಿಲುಕಿಕೊಂಡಿದ್ದರು. ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ದೂರು ಸಹ ದಾಖಲಾಗಿತ್ತು. ಇದೆಲ್ಲದರ ನಡುವೆ ಮೇ 23ರಂದು ಸಿನಿಮಾ ತೆರೆಗೆ ಬಂದಿತ್ತು.
ಚಿತ್ರದಲ್ಲಿ ಮಡೆನೂರ್ ಮನು ಜೊತೆ ಕಿರುತೆರೆ ನಟಿ ಮೌನ ಗುಡ್ಡೆಮನೆ ನಟಿಸಿದ್ದರು. 'ರಾಮಾಚಾರಿ' ಧಾರಾವಾಹಿಯ ಚಾರು ಪಾತ್ರದಿಂದ ಆಕೆ ಮನೆ ಮಾತಾಗಿದ್ದಾರೆ. ಟೈಟಲ್ ಹೇಳುವಂತೆ ಇದು ಅಸ್ಪೃಶ್ಯತೆ, ಜಾತಿ ತಾರತಮ್ಯ, ಕೆಳವರ್ಗದವರ ಮೇಲೆ ಮೇಲ್ವರ್ಗದವರ ದಬ್ಬಾಳಿಕೆಯ ಕಥೆ 'ಕುಲದಲ್ಲಿ ಕೀಳ್ಯಾವುದೋ'ಚಿತ್ರದಲ್ಲಿದೆ. ರಾಮ್ ನಾರಾಯಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಯೋಗರಾಜ್ ಭಟ್ 'ಕುಲದಲ್ಲಿ ಕೀಳ್ಯಾವುದೋ' ಚಿತ್ರಕ್ಕೆ ಕಥೆ ಬರೆದಿದ್ದಾರೆ. ಒಂದು ಪಾತ್ರದಲ್ಲಿ ಕೂಡ ನಟಿಸಿದ್ದಾರೆ. ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಹಾಗೂ ವಿದ್ಯಾ ಈ ಚಿತ್ರವನ್ನು ನಿರ್ಮಿಸಿದ್ದರು. ಕರಿಸುಬ್ಬು, ಸೋನಲ್ ಮಂತೆರೊ, ಶರತ್ ಲೋಹಿತಾಶ್ವ, ಡ್ರ್ಯಾಗನ್ ಮಂಜು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಭಾರೀ ನಿರೀಕ್ಷೆ ಮೂಡಿಸಿದ್ದ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಇನ್ನು ಬಿಡುಗಡೆ ಸಮಯದಲ್ಲಿ ಚಿತ್ರಕ್ಕಿಂತ ಮಡೆನೂರ್ ಮನು ವಿವಾದವೇ ದೊಡ್ಡದಾಗಿ ಚರ್ಚೆ ಹುಟ್ಟು ಹಾಕಿತ್ತು. ನಟರಾದ ಶಿವರಾಜ್‌ಕುಮಾರ್, ಧ್ರುವ ಸರ್ಜಾ ಹಾಗೂ ದರ್ಶನ್ ಬಗ್ಗೆ ಮನು ಹಗುರವಾಗಿ ಮಾತನಾಡಿದ್ದ ವೀಡಿಯೋ ಸಹ ವೈರಲ್ ಆಗಿ ಮತ್ತಷ್ಟು ಎಡವಟ್ಟು ಆಗಿತ್ತು. ಬಳಿಕ ಅದಕ್ಕೆ ಮನು ಕ್ಷಮೆ ಕೂಡ ಕೇಳಿದ್ದಾರೆ.
ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಬಿದಿರುಬುಂಡೆ ಎಂಬ ಜಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಆ ಕಾಡಿನ ಭಾಗದಲ್ಲಿ ದುರ್ಬಲ ವರ್ಗಕ್ಕೆ ಸೇರಿದ ಕೆಲ ಕುಟುಂಬಗಳು. ಕೆಲ ವರ್ಷಗಳ ಬಳಿಕ ಬಿದಿರುಬುಂಡೆ ಪ್ರದೇಶವನ್ನು ಸಂರಕ್ಷಿತ ಅರಣ್ಯ ಎಂದು ಸರ್ಕಾರ ಘೋಷಿಸುತ್ತದೆ. ಮುಂದೆ ಏನೆಲ್ಲಾ ನಡೆಯುತ್ತದೆ ಎನ್ನುವುದು ಇನ್ನುಳಿದ ಕಥೆ.
ಈ ವರ್ಷ ದೊಡ್ಡ ಕನ್ನಡ ಸಿನಿಮಾಗಳು ತೆರೆಗೆ ಬಂದಿಲ್ಲ. ಕೆಲ ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನ ಗೆದ್ದಿದ್ದವು. 'ಎಕ್ಕ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಸಿನಿಮಾಗಳು ತೆರೆಗೆ ಬಂದು ರಂಜಿಸಲಿವೆ. ಬಳಿಕ ಓಟಿಟಿಗೂ ಬರಲಿವೆ.


Click it and Unblock the Notifications











