ಓಟಿಟಿಗೆ ಬಂದಿದೆ 2 ಹೊಚ್ಚ ಹೊಸ ಕನ್ನಡ ಚಿತ್ರಗಳು; ಮಿಸ್ ಮಾಡದೇ ನೋಡಿ
ದಿಢೀರನೆ ಎರಡು ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ಎರಡೂ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ವಿಮರ್ಶಕರು ಕೂಡ ಸಿನಿಮಾ ನೋಡಿ ಒಳ್ಳೆ ಅಂಕಗಳನ್ನು ಕೊಟ್ಟಿದ್ದಾರೆ. ಆದರೆ ಸಿನಿಮಾಗಳು ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿರಲಿಲ್ಲ. ಇದೀಗ ಓಟಿಟಿಗೆ ಬಂದಿದೆ.
ಅಜಯ್ ದೇವಗನ್ ಹಾಗೂ ರಿತೇಶ್ ದೇಶ್‌ಮುಖ್ ನಟನೆಯ 'ರೈಡ್- 2' ಸೇರಿ ಒಂದಷ್ಟು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಈ ವಾರ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಆದರೆ ಕನ್ನಡ ಸಿನಿಮಾಗಳ ಓಟಿಟಿ ಎಂಟ್ರಿ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ದಿಢೀರನೆ ರಿಲೀಸ್ ಮಾಡಿಬಿಟ್ಟಿದ್ದಾರೆ. ಅತ್ತ ಚಿತ್ರಮಂದಿರಗಳಲ್ಲಿ ಕೂಡ ದೊಡ್ಡದಾಗಿ ಯಾವುದೇ ಸಿನಿಮಾ ಬಂದಿಲ್ಲ.

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ಕೇಶವಮೂರ್ತಿ ನಿರ್ದೇಶನದ 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಸಿನಿಮಾ ಈ ವಾರ ಓಟಿಟಿಗೆ ಬಂದಿದೆ. ಇದೊಂದು ಆಂಥಾಲಜಿ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು 3 ಕಥೆಗಳಿವೆ. ಚಿತ್ರದಲ್ಲಿ ಮೂರು ಬಗೆಯ ಕಳ್ಳರ ಕಥೆಯನ್ನು ಹೇಳಲಾಗಿದೆ. ಒಂದು ಕಥೆಯಲ್ಲಿ ಪ್ರಸನ್ನ ಶೆಟ್ಟಿ ಹಾಗೂ ಇನಾಯತ್ ನಟಿಸಿದ್ದಾರೆ. 2ನೇ ಕಥೆಯಲ್ಲಿ ಅಪೂರ್ವ ಭಾರಧ್ವಜ್ ಹಾಗೂ ಗೋವಿಂದ್ ಮಧುಸೂದನ್ ಅವರನ್ನು ನೋಡಬಹುದು. ದ್ವಿತಿಯಾರ್ಧದಲ್ಲಿ ಬರುವ 3ನೇ ಕಥೆಯಲ್ಲಿ ದಿಲೀಪ್ ರಾಜ್ ಹಾಗೂ ಶಿಲ್ಪಾ ಮಂಜುನಾಥ್ ಮಿಂಚಿದ್ದಾರೆ.
ಸನ್‌ನೆಕ್ಸ್ಟ್ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಜನವರಿ 10ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಒಳ್ಳೆ ಟಾಕ್ ಕೂಡ ಇತ್ತು. ಆದರೆ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. 3 ಕಥೆಗಳಲ್ಲಿ ಒಂದಕ್ಕೊಂದಕ್ಕೆ ಸಂಬಂಧ ಇಲ್ಲ. ಮೂರು ಕೂಡ ಕಳ್ಳತನದ ಸುತ್ತಾ ಸುತ್ತವ ಕಥೆಗಳು. ಒಂದು ಕಥೆಯಲ್ಲಿ ಕಾಮಿಡಿ ಹೈಲೆಟ್. ಮತ್ತೊಂದರಲ್ಲಿ ರೊಮ್ಯಾನ್ಸ್ ಇದೆ. ಕೊನೆ ಕಥೆಯಲ್ಲಿ ಥ್ರಿಲ್ಲರ್ ಅಂಶಗಳಿವೆ. ಕಳ್ಳತನ ಎನ್ನುವ ವಿಷಯದ ಸುತ್ತಾ ಈ ಕಥೆಗಳನ್ನು ರೂಪುಗೊಂಡಿವೆ.

ಪಪ್ಪಿ
ಕನ್ನಡದಲ್ಲಿ ವಿಭಿನ್ನ ಪ್ರಯತ್ನದ ಸಿನಿಮಾಗಳು ಬರಲ್ಲ ಎನ್ನುವ ಆರೋಪ ಇದೆ. ಆದರೆ ಆಗೊಮ್ಮೆ ಈಗೊಮ್ಮೆ ಈ ಮಾತನ್ನು ಸುಳ್ಳು ಮಾಡುವಂತಹ ಸಿನಿಮಾಗಳು ಬರುತ್ತವೆ. 'ಪಪ್ಪಿ' ಎಂಬ ಸಿನಿಮಾ ಮೇ 1ರಂದು ತೆರೆಗೆ ಬಂದಿತ್ತು. ಹೊಸಬರ ಪ್ರಯತ್ನ ನೋಡಿ ಮೆಚ್ಚಿ ಕೆಆರ್‌ಜಿ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು. ಉತ್ತರ ಕರ್ನಾಟಕದ ಜವಾರಿ ಭಾಷೆಯ ಚಿತ್ರಕ್ಕೆ ಧ್ರುವ ಸರ್ಜಾ ಕೂಡ ಸಾಥ್ ಕೊಟ್ಟಿದ್ದರು.
ಆಯುಷ್ ಮಲ್ಲಿ 'ಪಪ್ಪಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ರಿತ್ವಿಕ್ ಬಳ್ಳಾರಿ, ರೇಣುಕಾ ಚಿತ್ರದ ತಾರಾಗಣದಲ್ಲಿದ್ದಾರೆ. 'ಪಪ್ಪಿ' ಟೈಟಲ್‌ಗೆ ತಕ್ಕಂತೆ ಒಂದು ಶ್ವಾನದ ಸುತ್ತಾ ಸುತ್ತಾ ಕಥೆ. ಸದ್ಯ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
'ತಿಥಿ' ಸಿನಿಮಾ ತನ್ನ ನೈಜ ಚಿತ್ರಣದಿಂದಲೇ ಗಮನ ಸೆಳೆದಿತ್ತು. ಅದೇ ತರಹದ ಪ್ರಯತ್ನ 'ಪಪ್ಪಿ'. ಕೂಲಿ ಕೆಲಸ ಅರಸಿ ಬೆಂಗಳೂರಿಗೆ ಬರುವ ಸಿಂಧನೂರಿನ ದುರುಗಪ್ಪನ ಕುಟುಂಬ. ಗಂಡ- ಹೆಂಡತಿ ಹಾಗೂ ಚಿಕ್ಕ ಮಗ ಪರುಶುರಾಮ. ಬೆಂಗಳೂರಿನಲ್ಲಿ ಪರ್ಶ್ಯಾನಿಗೆ ಆದಿ ಜೊತೆಯಾಗುತ್ತಾನೆ. ಇಬ್ಬರೂ ಶಾಲೆಗೆ ಹೋಗುತ್ತಿರುತ್ತಾರೆ. ಈ ನಡುವೆ "ಪಪ್ಪಿ ಎಂಬ ನಾಯಿ ಕಾಣೆಯಾಗಿದೆ ಹುಡುಕಿಕೊಟ್ಟವರಿಗೆ 10 ಸಾವಿರ ಬಹುಮಾನ" ಎನ್ನುವುದು ಅವರಿಬ್ಬರ ಗಮನಕ್ಕೆ ಬರುತ್ತದೆ.
ಮುಂದೆ ಆದಿ ಹಾಗೂ ಪರ್ಶ್ಯಾ ಕೈಗೆ ಪಪ್ಪಿ(ಶ್ವಾನ) ಸಿಗುತ್ತದೆ. ಮುಂದೆ ಪರ್ಶ್ಯಾ ಹಾಗೂ ಪಪ್ಪಿ ನಡುವೆ ಒಡನಾಟ ಬೆಳೆದು ಅದು ಕೂಡ ಅವರ ಮನೆಯ ಸದಸ್ಯನೇ ಆಗಿಬಿಡುತ್ತದೆ. ಮುಂದೇನು? ಎನ್ನುವುದು ಇನ್ನುಳಿದ ಕಥೆ. ಬಹಳ ತಮಾಷೆಯಾಗಿ ಸಿನಿಮಾ ಕತೆ ಸಾಗುತ್ತದೆ. ಉತ್ತರ ಕರ್ನಾಟಕ ಭಾಷೆಯ ಕಾಮಿಡಿ ಪಂಚ್‌ಗಳು ನೋಡುಗರಿಗೆ ಮಜಾ ಕೊಡುತ್ತದೆ.


Click it and Unblock the Notifications











