Exclusive: 'ಕಾಂತಾರ-1' ದಾಖಲೆ ಬೇಟೆ ಶುರು; ಎಷ್ಟು ಕೋಟಿಗೆ ಓಟಿಟಿ ರೈಟ್ಸ್ ಸೇಲ್ ಆಯ್ತು ಗೊತ್ತಾ?
ಒಂದೂವರೆ ವರ್ಷದ ಹಿಂದೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಇದಿಘ ಪ್ರೀಕ್ವೆಲ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಬಹಳ ದೊಡ್ಡಮಟ್ಟದಲ್ಲಿ 'ಕಾಂತಾರ'; ಚಾಪ್ಟರ್-1 ಸಿನಿಮಾ ನಿರ್ಮಾಣವಾಗಲಿದೆ. ಸದ್ಯ ಚಿತ್ರದ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂ ವಿಡಿಯೋಗೆ ಮಾರಾಟವಾಗಿದೆ. ಸಿನಿಮಾ ಮೇಲಿನ ನಿರೀಕ್ಷೆಗೆ ತಕ್ಕಂತೆ ಬಹಳ ದೊಡ್ಡ ಮೊತ್ತಕ್ಕೆ ಡೀಲ್ ನಡೆದಿದೆ.
ಮುಂಬೈನಲ್ಲಿ ನಡೆದ ಪ್ರೈಂ ವೀಡಿಯೋ ಅದ್ಧೂರಿ ಈವೆಂಟ್‌ನಲ್ಲಿ ರಿಷಬ್ ಶೆಟ್ಟಿ ಸಹ ಹಾಜರಾಗಿದ್ದರು. ಇನ್ನೆರಡು ವರ್ಷಗಳಲ್ಲಿ 69 ಸಿನಿಮಾ ಹಾಗೂ ವೆಬ್ ಸೀರಿಸ್ ಪ್ರೈ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರಲ್ಲಿ ಕೆಲ ಸಿನಿಮಾಗಳಯ ಥ್ರಿಯೇಟ್ರಿಕಲ್ ರಿಲೀಸ್ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಆಗಲಿವೆ. ಆ ಲಿಸ್ಟ್‌ನಲ್ಲಿ ಸದ್ಯ ಜಾಗ ಮಾಡಿಕೊಂಡಿರುವ ಏಕೈಕ ಕನ್ನಡ ಸಿನಿಮಾ 'ಕಾಂತಾರ'; ಚಾಪ್ಟರ್-1.

ಯಾವುದೇ ನಿರೀಕ್ಷೆ ಇಲ್ಲದೇ 2021, ಸೆಪ್ಟೆಂಬರ್ ಕೊನೆ ವಾರದಲ್ಲಿ ತೆರೆಕಂಡಿದ್ದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಪ್ರೇಕ್ಷಕರ ಮನಗೆದ್ದಿತ್ತು. ವಿದೇಶಗಳಲ್ಲಿ ಪ್ರೇಕ್ಷಕರು ಸಿನಿಮಾ ಟಿಕೆಟ್‌ಗಾಗಿ ಕ್ಯೂ ನಿಲ್ಲುವಂತಾಯಿತು. ಅಂದಾಜು 20 ಕೋಟಿ ಬಜೆಟ್‌ನಲ್ಲಿ ತೆರೆಗೆ ಬಂದಿದ್ದ ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.
'ಕಾಂತಾರ' ಕಾಡುಬೆಟ್ಟು ಶಿವನ ಪಾತ್ರದಲ್ಲಿ ರಿಷಬ್ ಶೆಟ್ಟಿ ಎಲ್ಲರ ಹುಬ್ಬೇರಿಸಿದ್ದರು. ಅದರಲ್ಲೂ ಕ್ಲೈಮ್ಯಾಕ್ಸ್ ಸನ್ನಿವೇಶಗಳಲ್ಲಿ ತೆರೆಮೇಲೆ ಜಾದೂ ನಡೆದಿತ್ತು. ಪಂಜುರ್ಲಿ ಹಾಗೂ ಗುಳಿಗ ದೈವಗಳ ವಿಚಾರಗಳನ್ನು ತಂದು ರಿಷಬ್ ಶೆಟ್ಟಿ ಅದ್ಭುತ ಸಿನಿಮಾ ಕಟ್ಟಿಕೊಟ್ಟಿದ್ದರು. ಬಜೆಟ್‌ಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಡಿಜಿಟಲ್ ರೈಟ್ಸ್, ಓಟಿಟಿ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿತ್ತು. ಬಹಳ ತಡವಾಗಿ ಓಟಿಟಿಗೆ ಬಂದಿತ್ತು.
'ಕಾಂತಾರ' ಸಿನಿಮಾ ಉತ್ತರ ಭಾರತದಲ್ಲಿ ಕೂಡ ಭರ್ಜರಿ ಪ್ರದರ್ಶನ ಕಂಡಿತ್ತು. ಅಂದಾಜು 70 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಸದ್ಯ ಪ್ರೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಹಿಂದಿ ಬೆಲ್ಟ್‌ನಲ್ಲಿ ಕೂಡ ಸಿನಿಮಾ ಬಗ್ಗೆ ಕ್ರೇಜ್ ಇದೆ. ಅದಕ್ಕೆ ತಕ್ಕಂತೆ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. 'ಕಾಂತಾರ' ಪ್ರೀಕ್ವೆಲ್ ಯಾವ ರೇಂಜ್‌ಗೆ ಹೈಪ್ ಕ್ರಿಯೇಟ್ ಮಾಡಿದೆ ಎನ್ನುವುದು ಗೊತ್ತೇಯಿದೆ. ಹಾಗಾದರೆ ಸಿನಿಮಾ ಡಿಜಿಟಲ್ ರೈಟ್ಸ್ ಎಷ್ಟು ಕೋಟಿಗೆ ಮಾರಾಟವಾಯಿತು ಎನ್ನುವ ಕುತೂಹಲ ಇದ್ದೇ ಇರುತ್ತದೆ.

ಬಲ್ಲ ಮಾಹಿತಿಗಳ ಪ್ರಕಾರ 'ಕಾಂತಾರ': ಚಾಪ್ಟರ್- 1 ಓಟಿಟಿ ರೈಟ್ಸ್ ಅಂದಾಜು 150 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದು ದಾಖಲೆ ಎನ್ನಬಹುದು. ಪ್ರೈ ವೀಡಿಯೋ 'ಕಾಂತಾರ' ಪ್ರೀಕ್ವೆಲ್ 5 ಭಾಷೆಗಳ ಸ್ಟ್ರೀಮಿಂಗ್ ರೈಟ್ಸ್ ಸೇರಿಸಿ ಡೀಲ್ ಕುದುರಿಸಿಕೊಂಡಿದೆಯಂತೆ. ದೊಡ್ಡ ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾಗಳ ಡಿಜಿಟಲ್ ರೈಟ್ಸ್ ಕೊಂಡುಕೊಳ್ಳಲು ಹಿಂದು ಮುಂದು ನೋಡುತ್ತಿವೆ. ಆದರೆ 'ಕಾಂತಾರ' ವಿಚಾರದಲ್ಲಿ ಈ ಮಾತು ಸುಳ್ಳಾಗಿದೆ.
ಸದ್ಯಕ್ಕೆ 150 ಕೋಟಿ ರೂ.ಗೆ 'ಕಾಂತಾರ' ಪ್ರೀಕ್ವೆಲ್ ಡಿಜಿಟಲ್ ರೈಟ್ಸ್ ಮಾರಾಟವಾಗಿದೆಯಂತೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ. ಮುಂದೆ ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಿ ಉತ್ತಮ ಪ್ರದರ್ಶನ ಕಂಡರೆ ಬೋನಸ್ ರೂಪದಲ್ಲಿ ಮತ್ತಷ್ಟು ಹಣವನ್ನು ಕೊಡುವಂತೆಯೂ ಒಪ್ಪಂದ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದು ನಿಜವೇ ಆಗಿದ್ದರೆ 'KGF-2' ಬಳಿಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದು ದೊಡ್ಡ ದಾಖಲೆ ಎನ್ನಬಹುದು.
ಸದ್ಯ 'ಕಾಂತಾರ'-1 ಚಿತ್ರದ ಮುಹೂರ್ತ ನೆರವೇರಿದೆ. ಸಣ್ಣ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಪ್ರೈ ವೀಡಿಯೋ ಈವೆಂಟ್‌ನಲ್ಲಿ ಮಾತನಾಡುತ್ತಾ ರಿಷಬ್ ಶೆಟ್ಟಿ ಮುಂದಿನ ತಿಂಗಳು ಸಿನಿಮಾ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ. ತಮ್ಮ ಊರಿನಲ್ಲಿ ದೊಡ್ಡ ಸೆಟ್ ನಿರ್ಮಾಣ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ 'ಕಾಂತಾರ': ಚಾಪ್ಟರ್-1 ತೆರೆಗಪ್ಪಳಿಸಲಿದೆ.


Click it and Unblock the Notifications











