ಸದ್ದಿಲ್ಲದೇ ಓಟಿಟಿಗೆ ಬಂತು 117 ಕೋಟಿ ದೋಚಿದ ರಾಜಾ ಶಿವಾಜಿ ; ಎಲ್ಲಿ ನೋಡಬಹುದು ಸಾರ್ವಕಾಲಿಕ ದಾಖಲೆ ಬರೆದ ಸಿನಿಮಾ ?
ಕೊರೊನಾ ನಂತರ ಅಸಂಖ್ಯಾತ ಜನ ಓಟಿಟಿಗೆ ಶರಣಾಗಿದ್ದಾರೆ. ಪ್ರೇಕ್ಷಕರ ಈ ಬದಲಾದ ಅಭಿರುಚಿಗೆ ಅನುಗುಣವಾಗಿ ಚಿತ್ರರಂಗದವರು ಕೂಡ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟಕೊಂಡು ಚಿತ್ರವನ್ನು ಮಾಡುತ್ತಿದ್ದಾರೆ. ಹಾಗಂಥ ಎಲ್ಲರು ಈ ಸಾಲಿಗೆ ಸೇರುವುದಿಲ್ಲ. ಎಲ್ಲ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಿದರೆ ಸಿಗಬೇಕಾದ ಮನರಂಜನೆಯ ಕಿಕ್ ಕೂಡ ಸಿಗಲ್ಲ. ಯಾಕೆಂದರೆ ಕೆಲ ಸಿನಿಮಾಗಳನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಂಡರೆ ಚೆಂದ. ಉದಾಹರಣೆಗೆ ''ರಾಜಾ ಶಿವಾಜಿ''.
ಹೌದು, ''ರಾಜಾ ಶಿವಾಜಿ''.. ರಿತೇಶ್ ದೇಶಮುಖ್ ಮರಾಠಿಯಲ್ಲಿ ನಿರ್ದೇಶಿಸಿರುವ ಮೂರನೇ ಚಿತ್ರ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಐತಿಹಾಸಿಕ ಚಿತ್ರ ಸದ್ಯ ಮರಾಠಿ ಬಾಕ್ಸಾಫೀಸ್‌ನಲ್ಲಿ ಮಾಡಿದ ಸದ್ದು ಕಡಿಮೆ ಅಲ್ಲ.

10 ವರ್ಷಗಳ ಹಿಂದಿನ ''ಸೈರಾಟ್'' ಚಿತ್ರದ ದಾಖಲೆಯನ್ನು ಮುರಿದ ಈ ''ರಾಜಾ ಶಿವಾಜಿ'' ಮರಾಠಿ ಚಿತ್ರರಂಗದಲ್ಲಿ 100 ಕೋಟಿ ಗಡಿ ತಲುಪಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ಮರಾಠಿ ಚಿತ್ರರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಮೊದಲ ಸಿನಿಮಾ ಎನ್ನುವ ಖ್ಯಾತಿಯೂ ಕೂಡ ಈ ಚಿತ್ರದ್ದೇ.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 55 ದಿನಗಳ ಭರ್ಜರಿ ಪ್ರದರ್ಶನ ಕಂಡ ಈ ಚಿತ್ರ ಕೇವಲ ಭಾರತದಲ್ಲೇ ₹96.39 ಕೋಟಿಯನ್ನು ದೋಚಿತ್ತು. ಆ ಪೈಕಿ ಮರಾಠಿಯ ಪಾಲು ₹71.02 ಕೋಟಿ ಆದರೆ, ಹಿಂದಿಯ ಕಾಣಿಕೆ ₹25.37 ಕೋಟಿಯಾಗಿತ್ತು. ಇನ್ನು ವರ್ಲ್ಡ್ ವೈಡ್ ಗಳಿಕೆ ಲೆಕ್ಕ ಹಾಕಿದರೆ ಆಗಲೇ ಹೇಳಿದಂತೆ ಚಿತ್ರದ ಗಳಿಕೆ ₹117 ಕೋಟಿಗಿಂತ ಹೆಚ್ಚಿದೆ. ಇಂಥಾ ''ರಾಜಾ ಶಿವಾಜಿ'' ಚಿತ್ರ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಇಷ್ಟೇ ಅಲ್ಲ ಪ್ರಸಾರವೂ ಆಗ್ತಿದೆ.
ಶಿವಾಜಿ ಮತ್ತು ಚಿತ್ರರಂಗ
ಛತ್ರಪತಿ ಶಿವಾಜಿ ಮಹಾರಾಜ್ ಮೇಲೆ ಭಾರತೀಯ ಚಿತ್ರರಂಗಕ್ಕೆ ಅದರಲ್ಲಿಯೂ ಬಾಲಿವುಡ್‌ಗೆ ತುಂಬಾನೇ ಪ್ರೀತಿ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ 1993ರಲ್ಲಿ ಬಂದ ''ಸಿಂಹಗಡ'' ಚಿತ್ರದಿಂದ ಹಿಡಿದು 2020ರ ಬ್ಲಾಕ್ ಬಸ್ಟರ್ ''ತಾನಾಜಿ''ಯವರೆಗೆ ಹಿಂದಿ ಚಿತ್ರರಂಗದಲ್ಲಿ ಹಲವಾರು ಬಾರಿ ಜೈ ಭವಾನಿ, ಜೈ ಶಿವಾಜಿ ಎಂಬ ಘೋಷ ವಾಕ್ಯ ಮೊಳಗಿದೆ.
ದಾರ್ಶನಿಕ ನಾಯಕ .. ಗೆರಿಲ್ಲಾ ಯುದ್ದ ತಂತ್ರದ ಚತುರ.. ಹಿಂದವೀ ಸ್ವರಾಜ್ಯಕ್ಕೆ ಹೋರಾಡಿದ ಯೋಧ.. ಹೀಗೆ ನಾನಾ ರೂಪದಲ್ಲಿ ಬೆಳ್ಳಿಪರದೆಯ ಮೇಲೆ ಶಿವಾಜಿಯ ಪರಾಕ್ರಮ ಮತ್ತು ಪರಂಪರೆಯನ್ನು ಅನಾವರಣ ಮಾಡಲಾಗಿದೆ. ರಿತೇಶ್ ದೇಶಮುಖ್ ಕೂಡ ತಮ್ಮ ''ರಾಜಾ ಶಿವಾಜಿ''ಯ ಮೂಲಕ ಇಂತಹದ್ದೇ ಒಂದು ಪ್ರಯತ್ನ ಮಾಡಿದ್ದಾರೆ.

ತಾರಾಬಳಗ:
ರಿತೇಶ್ ದೇಶ್‌ಮುಖ್, ಸಂಜಯ್ ದತ್, ಜೆನೆಲಿಯಾ ದೇಶ್‌ಮುಖ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಭಾಗ್ಯಶ್ರೀ, ಸಚಿನ್ ಖೇಡೇಕರ್, ಫರ್ದೀನ್ ಖಾನ್, ಅಮೋಲ್ ಗುಪ್ತೆ, ಬೊಮನ್ ಇರಾನಿ, ಮಹೇಶ್ ಮಂಜ್ರೇಕರ್, ಜಿತೇಂದ್ರ ಜೋಶಿ, ಸಲ್ಮಾನ್ ಖಾನ್ (ಅತಿಥಿ ಪಾತ್ರ)
ನಿರ್ದೇಶಕ:
ರಿತೇಶ್ ದೇಶ್‌ಮುಖ್
ನಿರ್ಮಾಣ
ಜ್ಯೋತಿ ದೇಶಪಾಂಡೆ, ಜೆನೆಲಿಯಾ ದೇಶ್‌ಮುಖ್
ನಿರ್ಮಾಣ ಸಂಸ್ಥೆ
ಜಿಯೋ ಸ್ಟುಡಿಯೋಸ್ ಮತ್ತು ಮುಂಬೈ ಫಿಲ್ಮ್ ಕಂಪನಿ
ಸಂಗೀತ
ಅಜಯ್ - ಅತುಲ್
ಛಾಯಾಗ್ರಹಣ
ಸಂತೋಷ್ ಶಿವನ್
ಎಲ್ಲಿ ನೋಡಬಹುದು ? ಎಂದಿನಿಂದ ?
ಶಿವಾಜಿಯ ಈ ಸಾಹಸಗಾಥೆ ಸದ್ಯ ಸದ್ದಿಲ್ಲದೇ ಸದ್ಯ ''ನೆಟ್‌ಫ್ಲಿಕ್ಸ್''ನಲ್ಲಿ ಪ್ರಸಾರವಾಗುತ್ತಿದೆ. ಆದರೆ, ನೆನಪಿರಲಿ ಕೇವಲ ಮರಾಠಿ ಮತ್ತು ಹಿಂದಿಯಲ್ಲಿ ಮಾತ್ರ ಈ ಚಿತ್ರವನ್ನು ನೀವು ನೋಡಬಹುದು. ಕನ್ನಡದ ಆಯ್ಕೆಯನ್ನು ಇನ್ನೂ ನೀಡಿಲ್ಲ. ಕನ್ನಡಕ್ಕೆ ಬಹುಶಃ ಚಿತ್ರವನ್ನು ಕೂಡ ಡಬ್ ಮಾಡಿದಂತೆ ಇಲ್ಲ. ಈ ಕುರಿತು ಪ್ರಕಟಣೆ ಹೊರಡಿಸಿರುವ ''ನೆಟ್‌ಫ್ಲಿಕ್ಸ್'' ರಾಜೇ... ರಾಜಾ ಶಿವಾಜಿ ಬಂಡಾಯ ಏಳಲು ಬರುತ್ತಿದ್ದಾರೆ.ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ನೋಡಿ ಎಂದು ಬರೆದುಕೊಂಡಿದೆ. ಆಸಕ್ತರು ನೋಡಬಹುದು.


Click it and Unblock the Notifications