ತೆರೆಕಂಡ 20 ದಿನಕ್ಕೆ ಓಟಿಟಿಗೆ ಬಂತು ರುಕ್ಮಿಣಿ ವಸಂತ್ ಥ್ರಿಲ್ಲರ್ ಸಿನಿಮಾ
ಕೆಲ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ರು ಓಟಿಟಿಯಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಅಂತಹ ಸಿನಿಮಾಗಳು ಓಟಿಟಿಗೆ ಬಂದಾಗ ಸಹಜವಾಗಿಯೇ ಕುತೂಹಲದಿಂದ ವೀಕ್ಷಿಸುತ್ತಾರೆ. ಕೆಲವೊಮ್ಮೆ ಓಟಿಟಿಯಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುವ ಸಿನಿಮಾಗಳು ಇವೆ.
ರುಕ್ಮಣಿ ವಸಂತ್ ಇತ್ತೀಚೆಗೆ ತೆಲುಗು, ತಮಿಳು ಸಿನಿಮಾಗಳತ್ತ ಫೋಕಸ್ ಮಾಡುತ್ತಿದ್ದಾರೆ. ಈಗಾಗಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಬಂದಿದ್ದಾರೆ. ಮುಂದೆ ದೊಡ್ಡ ದೊಡ್ಡ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಸ್ಟಾರ್ ನಟರ ಜೊತೆ ಆಕೆ ನಟಿಸುವ ಬಗ್ಗೆ ಊಹಾಪೋಹ ಕೇಳಿಬರುತ್ತಿದೆ. ಸದ್ಯ ತಮಿಳಿನ 'ಮದರಾಸಿ' ಸಿನಿಮಾ ಕೈಯಲ್ಲಿದೆ. ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಚಿತ್ರಕ್ಕೂ ನಾಯಕಿ ಎನ್ನಲಾಗ್ತಿದೆ.

ಇದೆಲ್ಲದರ ನಡುವೆ ರುಕ್ಮಿಣಿ ನಟಿಸಿದ್ದ ತಮಿಳಿನ 'ಏಸ್' ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಚಿತ್ರದಲ್ಲಿ ವಿಜಯ್ ಸೇತುಪತಿಗೆ ಆಕೆ ಜೊತೆಯಾಗಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಹೀನಾಯವಾಗಿ ಸೋತಿತ್ತು. ಆದರೂ ವಿಜಯ್ ಸೇತುಪತಿ ಹೀರೊ ಎನ್ನುವ ಕಾರಣಕ್ಕೆ ಸಿನಿಮಾವನ್ನು ಕೆಲವರು ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದರು. ಇದೀಗ ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬಂದಿದೆ.
ಆರ್ಮಗ ಕುಮಾರ್ ನಿರ್ದೇಶನದ ಈ ರೊಮ್ಯಾಂಟಿಕ ಕ್ರೈಂ ಕಾಮಿಡಿ ಚಿತ್ರ ಮೇ 23ಕ್ಕೆ ತೆರೆಗೆ ಬಂದಿತ್ತು. ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಚಿತ್ರದಲ್ಲಿ ರುಕ್ಕು ಎಂಬ ಪಾತ್ರದಲ್ಲಿ ರುಕ್ಮಿಣಿ ವಸಂತ್ ಮಿಂಚಿದ್ದಾರೆ. ಯೋಗಿ ಬಾಬು, ದಿವ್ಯಾ ಪಿಳೈ, ಬಬ್ಲೂ ಪೃಥ್ವಿರಾಜ್ ಹಾಗೂ ಕೆಜಿಎಫ್ ಸಿನಿಮಾ ಖ್ಯಾತಿಯ ಆಂಡ್ರೂಸ್ ಅವಿನಾಶ್ ಚಿತ್ರದಲ್ಲಿ ನಟಿಸಿದ್ದಾರೆ.
'ಏಸ್' ಸಿನಿಮಾ ಕಥೆ ರುಕ್ಮಿಣಿ ಪಾತ್ರದ ಸುತ್ತಾ ಸುತ್ತುತ್ತದೆ. ರುಕ್ಕು ಪ್ರೀತಿಯಲ್ಲಿ ಬೀಳುವ ಕಣ್ಣನ್ ಆಕೆಗೆ ಸಹಾಯ ಮಾಡಲು ಹೋಗಿ ಸಂಕಷ್ಟದಲ್ಲಿ ಹೇಗೆ ಸಿಲುಕಿಕೊಳ್ಳುತ್ತಾನೆ. ಅದರಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ ಎನ್ನುವುದು ಸಿನಿಮಾ ಕಥೆ. ಇಂತಹ ಕತೆಗಳು ಈಗಾಗಲೇ ಸಾಕಷ್ಟು ಬಂದು ಹೋಗಿದೆ. ಆದರೆ ಅದನ್ನೇ ಕೊಂಚ ವಿಭಿನ್ನವಾಗಿ ಹೇಳುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ.
ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಕಣ್ಣನ್ ಬಿಡುಗಡೆಯಾಗಿ ಹೊರ ಬರುತ್ತಾನೆ. ಮತ್ತೆ ತಪ್ಪು ಮಾಡುವುದು ಬೇಡ ಎಂದು ಮಲೇಷಿಯಾದ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿ ಅರಿವು(ಯೋಗಿ ಬಾಬು) ಜೊತೆ ಸ್ನೇಹ ಬೆಳೆಯುತ್ತದೆ. ಮೊತ್ತೊಂದು ಕಡೆ ಪ್ರೀತಿ ಬೀಳುತ್ತಾನೆ. ಆಕೆಗೆ ಸಹಾಯ ಮಾಡಲು ಕ್ಲಬ್‌ನಲ್ಲಿ ಜೂಜು ಆಡುತ್ತಾನೆ. ಗೆದ್ದರೂ ಮೋಸದಿಂದ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. 2 ಕೋಟಿ ರೂ. ಹಣಕ್ಕಾಗಿ ಅವನ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವಂತಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಕಣ್ಣನ್ ಮಾಡುವ ಸಾಹಸ ಏನು? ಮಲೇಷಿಯಾದ ಬ್ಯಾಂಕ್ ದರೋಡೆಗೂ ಆತನಿಗೂ ಇರುವ ಲಿಂಕ್ ಏನು? ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.
'ಏಸ್' ರುಕ್ಮಿಣಿ ವಸಂತ್ ನಟನೆಯ ಮೊದಲ ತಮಿಳು ಸಿನಿಮಾ. ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ವಿಜಯ ಸೇತುಪತಿ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಕೆಲವರಿಗೆ ಇಷ್ಟವಾದರೂ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಸ್ವತಃ ಆರ್ಮುಗ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು.
ಕರಣ್ ರಾವತ್ ಛಾಯಾಗ್ರಹಣ, ಜಸ್ಟೀನ್ ಪ್ರಭಾಕರನ್ ಹಾಗೂ ಸ್ಯಾಮ್ ಸಿ.ಎಸ್ ಸಂಗೀತ 'ಏಸ್' ಚಿತ್ರಕ್ಕಿದೆ. ರುಕ್ಮಿಣಿ ವಸಂತ್ 'ಪರಾಶಕ್ತಿ' ಎಂಬ ಮತ್ತೊಂದು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಮತ್ತಷ್ಟು ಕತೆಗಳನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾ ಅಪ್‌ಡೇಟ್ ಸಿಗಲಿದೆ.


Click it and Unblock the Notifications











