ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ಸಹೋದರಿ, ಮೊದಲ ಸಿನಿಮಾ ಬಿಡುಗಡೆಗೆ ಸಿದ್ಧ
ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಪ್ರತಿಭಾವಂತ ಹಾಗೂ ಬೇಡಿಕೆಯ ನಟಿ. ನಟ ಚಿರಂಜೀವಿ, ಪವನ್ ಕಲ್ಯಾಣ್ ಸಹ ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಸಾಯಿ ಪಲ್ಲವಿಯನ್ನು ಕೇಳಿ ಇಲ್ಲವೆನಿಸಿಕೊಂಡಿದ್ದಾರೆ.
ಕಿರು ಚಿತ್ರಗಳಲ್ಲಿ ನಟಿಸಿ, ಡ್ಯಾನ್ಸ್ ಶೋಗಳಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡು, ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಿ ನಂತರ ಸಿನಿಮಾ ನಾಯಕಿಯಾದ ಸಾಯಿ ಪಲ್ಲವಿಯ ಶ್ರಮ ಸಾಮಾನ್ಯದ್ದಲ್ಲ. ಶ್ರಮಕ್ಕೆ ತಕ್ಕ ಫಲಿತವೇ ಸಾಯಿ ಪಲ್ಲವಿಗೆ ಈಗ ಧಕ್ಕಿದೆ.
ಸಾಯಿ ಪಲ್ಲವಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಅವರ ಸಹೋದರಿ ಸಹ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಕ್ಕನಂತೆ ಸಹೋದರಿ ಪೂಜಾ ಕಣ್ಣನ್ ಸಹ ಕಿರು ಚಿತ್ರಗಳಲ್ಲಿ ನಟಿಸಿ ಬಳಿಕ ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಫೀಚರ್ ಫಿಲಂನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪೂಜಾ ನಟಿಸಿರುವ ಮೊದಲ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಸಹ ಆಗಲಿದೆ.

ಮೊದಲ ಸಿನಿಮಾದಲ್ಲಿ ನಟಿಸಿದ ಸಾಯಿ ಪಲ್ಲವಿ ಸಹೋದರಿ
ಪೂಜಾ ಕಣ್ಣನ್, ಮೊದಲ ಬಾರಿಗೆ ತಮಿಳಿನ 'ಚಿತ್ರಿರೈ ಸೆವ್ವನಮ್' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾವು ಡಿಸೆಂಬರ್ 03ರಂದು ತೆರೆಗೆ ಬರಲಿದೆ. ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ನಟರೊಟ್ಟಿಗೆ ನಟಿಸುವ ಅವಕಾಶ ಪೂಜಾ ಕಣ್ಣನ್ ಅವರದ್ದಾಗಿದೆ.

ಮುಖ್ಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಸಹೋದರಿ
'ಚಿತ್ರಿರೈ ಸೆವ್ವನಮ್' ಸಿನಿಮಾವು ಅಪ್ಪ-ಮಗಳ ಸಂಬಂಧದ ಸುತ್ತ ಹೆಣೆದ ಕತೆಯಾಗಿದ್ದು, ಪೂಜಾ ಕಣ್ಣನ್ ಮಗಳ ಪಾತ್ರದಲ್ಲಿಯೂ ಪ್ರತಿಭಾನ್ವಿತ ನಟ ಸಮುದ್ರಕಿಣಿ ಅಪ್ಪನ ಪಾತ್ರದಲ್ಲಿಯೂ ನಟಿಸಿದ್ದಾರೆ. ಸಿನಿಮಾವನ್ನು ಜನಪ್ರಿಯ ಸ್ಟಂಟ್ ಮಾಸ್ಟರ್ ಸ್ಟಂಟ್ ಸೆಲ್ವಾ ನಿರ್ದೇಶನ ಮಾಡಿದ್ದಾರೆ, ಸಿನಿಮಾಕ್ಕೆ ಚಿತ್ರಕತೆ ಬರೆದಿರುವುದು ನಿರ್ದೇಶಕ ವಿಜಯ್. ಬಂಡವಾಳವನ್ನು ಸ್ಟಂಟ್ ಸೆಲ್ವಾ ಹಾಗೂ ವಿಜಯ್ ಹಾಕಿದ್ದಾರೆ. ಸಿನಿಮಾದಲ್ಲಿ ಮಲಯಾಳಂ ನಟಿ ರೀಮಾ ಕಣ್ಣಿಗಲ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ.

ಡಿಸೆಂಬರ್ 03ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಸಿನಿಮಾ
ಸಿನಿಮಾವು ಡಿಸೆಂಬರ್ 03 ರಂದು ನೇರವಾಗಿ ಜೀ5 ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ಅಪ್ಪ-ಮಗಳು ಬಾಂಧವ್ಯದ ಜೊತೆಗೆ ಕ್ರೈಂ ಕತೆಯನ್ನು ಸಹ ಒಳಗೊಂಡಿರಲಿದೆ. ಸಿನಿಮಾಕ್ಕೆ ಸ್ಯಾಮ್ ಸಿಎಸ್ ಸಂಗೀತ ನೀಡಿದ್ದು, ಮನೋಜ್ ಪರಮಹಂಸ ಹಾಗೂ ಕೆಜಿ ವೆಂಕಟೇಶ್ ಕ್ಯಾಮೆರಾ ಕೆಲಸ ಮಾಡಿದ್ದಾರೆ. ''ನನ್ನ ಸಹೋದರ ಸಮಾನ ಸೆಲ್ವಾ, ಸಿನಿಮಾದಲ್ಲಿ ಇಷ್ಟೋಂದು ಭಾವನೆಗಳನ್ನು ತುಂಬುತ್ತಾರೆ ಎಂದು ಗೊತ್ತಿರಲಿಲ್ಲ. ಸಿನಿಮಾದ ಕತೆ ಕೇಳಿದ ಕೂಡಲೇ ನಾನು ನಟಿಸಲು ಒಪ್ಪಿಕೊಂಡೆ'' ಎಂದಿದ್ದಾರೆ ನಟ ಸಮುದ್ರಕಣಿ.

ಚಿರಂಜೀವಿ, ಪವನ್ ಕಲ್ಯಾಣ್ ಸಿನಿಮಾಕ್ಕೆ ಒಲ್ಲೆನೆಂದ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ಅವರ ಮೊದಲ ಸಿನಿಮಾ ಇದಾಗಿದ್ದು, ನಟಿಯಿಂದ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾದ ಕೆಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ಪೂಜಾ ಸುಂದರವಾಗಿ ಕಾಣುತ್ತಿದ್ದಾರೆ. ಇನ್ನು ನಟಿ ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಹಾಗೂ 'ಶ್ಯಾಮ ಸಿಂಘ ರಾಯ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಚಿರಂಜೀವಿ ನಟಿಸುತ್ತಿರುವ ಮುಂದಿನ ಸಿನಿಮಾ 'ಭೋಲಾ ಶಂಕರ್' ಸಿನಿಮಾದಲ್ಲಿ ಚಿರಂಜೀವಿ ಸಹೋದರಿ ಪಾತ್ರದಲ್ಲಿ ನಟಿಸುವಂತೆ ಸಾಯಿ ಪಲ್ಲವಿಯವರನ್ನು ಕೇಳಲಾಗಿತ್ತು, ಆದರೆ ತಾನು ರೀಮೇಕ್ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಸಾಯಿ ಪಲ್ಲವಿ ಆಫರ್ ಅನ್ನು ತಿರಸ್ಕರಿಸಿದರು. ಆ ಬಳಿಕ ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾದಲ್ಲಿಯೂ ಪವನ್ ಕಲ್ಯಾಣ್ ಪತ್ನಿಯ ಪಾತ್ರದಲ್ಲಿ ನಟಿಸಲು ಆಫರ್ ನೀಡಲಾಗಿತ್ತು, ಆದರೆ ಅವರಿಗೂ ಅದೇ ಉತ್ತರ ನೀಡಿದರು ಸಾಯಿ ಪಲ್ಲವಿ.


Click it and Unblock the Notifications











