ಮೊದಲ ಬಾರಿಗೆ ನಿರ್ಧಾರ ಬದಲಿಸಿದ ಹೊಂಬಾಳೆ: 'ಸಲಾರ್' ಓಟಿಟಿ ಸ್ಟ್ರೀಮಿಂಗ್ ಎಲ್ಲಿ, ಯಾವಾಗ ಗೊತ್ತಾ?
ಎಲ್ಲೆಲ್ಲೂ 'ಸಲಾರ್' ಫೀವರ್ ಜೋರಾಗಿದೆ. ಬೆಳ್ಳಂಬೆಳಗ್ಗೆ ಅಭಿಮಾನಿಗಳು 'ಸಲಾರ್' ಆರ್ಭಟ ನೋಡಿ ಖುಷಿಯಾಗಿದ್ದಾರೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನವೇ ಸಿನಿಮಾ 100 ಕೋಟಿ ರೂ. ಗಡಿ ದಾಟುವ ಅಂದಾಜಿದೆ. ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಮೊದಲ ಭಾಗ ನೋಡಿರುವ ಅಭಿಮಾನಿಗಳು ಎರಡನೇ ಭಾಗ ನೋಡಲು ಈಗಿನಿಂದಲೇ ಕಾಯುವಂತಾಗಿದೆ. ಸಾಧ್ಯವಾದಷ್ಟು ಬೇಗ ಸೀಕ್ವೆಲ್ ತೆರೆಗೆ ತರಲು ಚಿತ್ರತಂಡ ಮನಸ್ಸು ಮಾಡಿದೆ. ಖಾನ್ಸರ್ ಎನ್ನುವ ಹೊಸ ಪ್ರಪಂಚವನ್ನೇ ಸೃಷ್ಟಿಸಿ ಪ್ರಶಾಂತ್ ನೀಲ್ ಪ್ರೇಕ್ಷಕರ ಹುಬ್ಬೇರಿಸಿದ್ದಾರೆ. 'ಉಗ್ರಂ' ಸಿನಿಮಾದಲ್ಲಿ ಕಾರಣಾಂತರಗಳಿಂದ ಹೇಳಲು ಸಾಧ್ಯವಾಗದ್ದನ್ನು ಪ್ರಶಾಂತ್ ನೀಲ್, 'ಸಲಾರ್' ಸರಣಿಯಲ್ಲಿ ಹೇಳುತ್ತಿದ್ದಾರೆ. ಹಾಗಾಗಿ ಇದು ಬರೀ ರೀಮೆಕ್ ಅನ್ನಿಸುವುದಿಲ್ಲ.

3 ವರ್ಷಗಳಿಂದ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದರು. ಮಧ್ಯರಾತ್ರಿಯಿಂದಲೇ ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರಭಾಸ್- ಪ್ರಶಾಂತ್ ನೀಲ್ ಜೋಡಿ ಸೂಪರ್ ಹಿಟ್ ಕೊಡುವ ಸುಳಿವು ಸಿಕ್ಕಿದೆ. 'ಬಾಹುಬಲಿ' ಬಳಿಕ ಈ ಬಾರಿ ಪ್ರಭಾಸ್ ಗೆಲ್ತಾರೆ ಎನ್ನುವ ಚರ್ಚೆ ನಡೀತಿದೆ.
'ಸಲಾರ್' ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಹೇಳುವುದಾದರೆ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಹೊಂಬಾಳೆ ಸಂಸ್ಥೆ ತನ್ನ ಎಲ್ಲಾ ಸಿನಿಮಾಗಳನ್ನು ಅಮೇಜಾನ್ ಪ್ರೈಂ ಕೊಡುತ್ತಾ ಬರುತ್ತಿತ್ತು. ಅಮೇಜಾನ್ ಜೊತೆ ಉತ್ತಮ ಒಡನಾಟ ಇತ್ತು. ಆದರೆ 'ಸಲಾರ್' ಸಿನಿಮಾ ನೆಟ್‌ಫ್ಲಿಕ್ಸ್ ಪಾಲಾಗಿದೆ. ಹೊಂಬಾಳೆ ನಿರ್ಧಾರಕ್ಕೆ ಕಾರಣ ಏನು ಎನ್ನುವುದು ಗೊತ್ತಾಗಿಲ್ಲ. ಆದರೆ ಭಾರೀ ಮೊತ್ತಕ್ಕೆ ಚಿತ್ರದ ಡಿಜಿಟಲ್ ರೈಟ್ಸ್ ಮಾರಾಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.
ನೆಟ್‌ಫ್ಲಿಕ್ಸ್ ಓಟಿಟಿ ರೈಟ್ಸ್ ಕೊಂಡುಕೊಂಡರೆ ಸ್ಟಾರ್ ಸಮೂಹ ಸ್ಯಾಟಲೈಟ್ಸ್ ರೈಟ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ದೊಡ್ಡ ದೊಡ್ಡ ಸಿನಿಮಾಗಳು ತಿಂಗಳಿಗೂ ಮುನ್ನ ಓಟಿಟಿಗೆ ಬರುತ್ತಿವೆ. ಆದರೆ 'ಸಲಾರ್' ಒಳ್ಳೆ ರೆಸ್ಪಾನ್ಸ್ ಸಿಕ್ಕಿರುವುದರಿಂದ 25 ದಿನಕ್ಕೂ ಹೆಚ್ಚು ದಿನಗಳ ಕಾಲ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಸಾಧ್ಯತೆಯಿದೆ.
5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಸಲಾರ್' ಸಿನಿಮಾ ನಿರ್ಮಾಣವಾಗಿ ತೆರೆಗೆ ಬಂದಿದೆ. ಕನ್ನಡದ ಸಿನಿಮಾಗಳು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುವುದು ಬಹಳ ಕಡಿಮೆ. ಬಹಳ ದಿನಗಳ ಬಳಿಕ ಈ ಸಿನಿಮಾ ಬರ್ತಿದೆ. ಇನ್ನು ಬಾಕ್ಸಾಫೀಸ್‌ನಲ್ಲಿ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ನಡುವೆ ಪೈಪೋಟಿ ಜೋರಾಗಿದೆ. ಮಾಸ್ ಪ್ರೇಕ್ಷಕರಿಗೆ 'ಸಲಾರ್' ಇಷ್ಟವಾದರೆ ಕ್ಲಾಸ್ ಸಿನಿಪ್ರಿಯರನ್ನು 'ಡಂಕಿ' ರಂಜಿಸ್ತಿದೆ.


Click it and Unblock the Notifications











