ಕೇವಲ 28 ದಿನಕ್ಕೆ ಓಟಿಟಿಗೆ ಬಂತು 100 ಕೋಟಿ ದೋಚಿದ 'ಮಾ ಇಂಟಿ ಬಂಗಾರಂ' ; ಎಲ್ಲಿ ನೋಡಬಹುದು ಸಮಂತಾ ಆಕ್ಷನ್ ಪ್ಯಾಕೇಜ್ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರೆ ಅದೇ ದೊಡ್ಡ ಸಾಧನೆಯಾಗಿತ್ತು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳ ಹಾವಳಿ ಹೆಚ್ಚಾಗಿದೆ. ಅಂಗೈಯಲ್ಲೇ ಮನರಂಜನೆ ಇದೆ.
ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಮೊದಲಿನಂತೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ. ಚಿತ್ರ ಒಂದು ಚಿತ್ರಮಂದಿರಕ್ಕೆ ಬಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ.

ಹೀಗಾಗಿಯೇ ಹಲವರು ತಮ್ಮ ಇಷ್ಟದ ಸ್ಟಾರ್‌ನ ಚಿತ್ರ ಬಂದರೆ..ಅಥವಾ ಯಾವುದಾದರೂ ಚಿತ್ರ ಗಮನ ಸೆಳೆದರೆ.. ಭರವಸೆ ಮೂಡಿಸಿದ್ದರೆ.. ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ ಬದಲು, ಕೇವಲ ನಾಲ್ಕು ವಾರ ಅಷ್ಟೇ ತಾನೇ..? ಎಂದುಕೊಂಡು ಮನೆಯಲ್ಲಿಯೇ ನೋಡಿದರೇ ಆಯ್ತು ಎಂದುಕೊಳ್ಳುತ್ತಾರೆ. ತಾಳ್ಮೆಯಿಂದ ಕಾಯುತ್ತಾರೆ.
ಹಾಗಂಥ ಎಲ್ಲ ಸಿನಿಮಾಗಳು ಈ ಸಾಲಿಗೆ ಸೇರುವುದಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಜನ ಚಿತ್ರಮಂದಿರಗಳಲ್ಲಿಯೇ ನೋಡಿರುತ್ತಾರೆ. ಆದರೂ ಕೂಡ ಓಟಿಟಿಯ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಹೀಗೆ ಕಾಯುತ್ತಿರುವವರ ಕಣ್ಮುಂದೆ ಈಗ ''ಮಾ ಇಂಟಿ ಬಂಗಾರಂ'' ಬರುತ್ತಿದೆ.
ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ಸಮಂತಾ
ಹೌದು, ಇಂದು ಸೂಪರ್ ಸ್ಟಾರ್ ಗಳ ಚಿತ್ರಗಳನ್ನೇ ಪ್ರೇಕ್ಷಕರು ರಿಜೆಕ್ಟ್ ಮಾಡುತ್ತಿದ್ಧಾರೆ. ಹೀಗಿರುವಾಗ ಮಹಿಳಾ ಪ್ರಧಾನ ಚಿತ್ರ ''ಮಾ ಇಂಟಿ ಬಂಗಾರಂ'' ನೂರು ಕೋಟಿಯನ್ನು ದೋಚಿದೆ. ಈ ಮೂಲಕ ನೂರು ಕೋಟಿ ಗಳಿಸಿದ ತೆಲುಗಿನ ಮೊದಲ ವುಮೆನ್ ಓರಿಯೆಂಟೆಡ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಿಡುಗಡೆಯಾಗಿ ಒಂದು ತಿಂಗಳಾಗುತ್ತಾ ಬಂದರೂ ಕೂಡ ಇವತ್ತು ಈ ಚಿತ್ರದ ಕ್ರೇಜ್ ಕಡಿಮೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬೆಂಗಳೂರಿನಲ್ಲಿಯೇ ಈ ಚಿತ್ರ ಇನ್ನು 25ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣ್ತಿದೆ. ಹೀಗಿರುವಾಗ ಓಟಿಟಿಯ ವೇದಿಕೆಗೆ ಎಂಟ್ರಿ ಕೊಡುತ್ತಿದೆ ''ಮಾ ಇಂಟಿ ಬಂಗಾರಂ''. ಇದರಿಂದ ಕೆಲವರಿಗೆ ಖುಷಿಯಾದರೆ, ಇನ್ನೂ ಕೆಲವರಿಗೆ ಚಿತ್ರತಂಡದ ಈ ನಿರ್ಧಾರ ನಿರಾಸೆ ತಂದಿದೆ. ಬಿಡುಗಡೆಯಾಗಿ ಇನ್ನೂ ತಿಂಗಳಾಗಿಲ್ಲ ಇಷ್ಟು ಬೇಗ ಓಟಿಟಿಯಲ್ಲಿ ಬಿಡುಗಡೆ ಮಾಡಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮಾ ಇಂಟಿ ಬಂಗಾರಂ ಕಥೆ ಏನು..?
ಸ್ವರ್ಣ (ಸಮಂತಾ) ಚಿಕ್ಕ ವಯಸ್ಸಿನಲ್ಲೇ ಅನಾಥಳಾಗಿ ಆಶ್ರಮದಲ್ಲಿ ಬೆಳೆಯುತ್ತಾಳೆ. ಮದುವೆ ವಯಸ್ಸಿಗೆ ಬಂದ ಸ್ವರ್ಣಗೆ ಅನಿರುದ್ಧ್ (ದಿಗಂತ್) ಇಷ್ಟ ಆಗುತ್ತಾನೆ. ಆತ ಶ್ರೀಮಂತ ಮನೆಯ ಹುಡುಗ. ಇಬ್ಬರೂ ಪ್ರೀತಿಸಿ ಮದುವೆ ಆಗುತ್ತಾರೆ. ಮನೆಯವರ ಒಪ್ಪಿಗೆ ಇಲ್ಲದ ಕಾರಣ ಅನಿರುದ್ಧ್‌ನನ್ನು ಅವನ ಕುಟುಂಬ ದೂರ ಇಟ್ಟಿರುತ್ತೆ. ಹೀಗೊಮ್ಮೆ ತನ್ನ ಗಂಡನ ಮನೆಯಲ್ಲಿ ನಡೆದ ಶುಭ ಕಾರ್ಯದ ನೆಪದಲ್ಲಿ ಮೊದಲ ಬಾರಿಗೆ ಅತ್ತೆಯ ಮನೆಯನ್ನು ಸ್ವರ್ಣ ಪ್ರವೇಶ ಮಾಡುತ್ತಾಳೆ. ಎಲ್ಲರ ಪ್ರೀತಿಯನ್ನು ಗಳಿಸುವುದಕ್ಕೆ ಪ್ರಯತ್ನ ಪಡುತ್ತಾಳೆ. ಈ ವೇಳೆ ಆಕೆಯ ಜೀವನದಲ್ಲಿ ನಡೆದ ಹಳೆಯ ಘಟನೆಗಳು ಬೆನ್ನಟ್ಟಿ ಬರುತ್ತವೆ. ಈ ಹಂತದಲ್ಲಿ ಸಿಗುವ ಕರುಣ್ (ಗುಲ್ಶನ್ ದೇವಯ್ಯ) ಯಾರು? 'ಬಂಗಾರ'ದಂತಹ ಮಗಳಾಗಲು ಬಂದ ಸಮಂತಾ 'ಕಾಳಿ'ಯಾಗುವುದೇಕೆ? ಅನ್ನುವುದೇ ಕಥೆ.
ಎಲ್ಲಿ ಮತ್ತು ಎಂದಿನಿಂದ ನೋಡಬಹುದು..?
ಕಳೆದ ಜೂನ್ 19ರಂದು ಬಿಡುಗಡೆಯಾಗಿದ್ದ ''ಮಾ ಇಂಟಿ ಬಂಗಾರಂ'' ಇದೇ ಜುಲೈ 17ರಿಂದ ಜಿಯೋ ಹಾಟ್‌ಸ್ಟಾರ್ ನಲ್ಲಿ ಪ್ರಸಾರವಾಗಲಿದೆ. ಆದರೆ ಈ ಚಿತ್ರವನ್ನು ಕನ್ನಡದಲ್ಲಿಯೂ ನೋಡಬಹುದಾ..? ಎನ್ನುವ ಪ್ರಶ್ನೆಗೆ ಸದ್ಯ ಉತ್ತರ ಇಲ್ಲ. ಚಿತ್ರತಂಡ ಇದರ ಕುರಿತು ಇನ್ನು ಸ್ಪಷ್ಟನೆ ನೀಡಿಲ್ಲ. ಆಸಕ್ತರು ಸಮಂತಾ ಅವರ ಮಾಸ್ ಅವತಾರವನ್ನು ಮನೆಯಲ್ಲಿಯೇ ಕುಳಿತು ಈ ಜುಲೈ 17ರಿಂದ ನೋಡಬಹುದು.


Click it and Unblock the Notifications