Moorane Krishnappa OTT: ಈಗ ಓಟಿಟಿಯಲ್ಲಿ 'ಮೂರನೇ ಕೃಷ್ಣಪ್ಪ'ನ ಹಾವಳಿ ಶುರು; ಮಿಸ್ ಮಾಡ್ಬೇಡಿ
ಇತ್ತೀಚೆಗೆ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಿಗಿಂತ ಓಟಿಟಿಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. 'ಯುವ' ರೀತಿಯ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಬರ ಎದುರಿಸಿ ಬೇಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಂದುಬಿಟ್ಟಿತ್ತು. ಕೆಲವರು ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾದು ಕೂತು ಬಿಟ್ಟಿದ್ದಾರೆ.
'ಬ್ಲಿಂಕ್', 'ಶಾಖಾಹಾರಿ', 'ಜೂನಿ', O2, 'ಧರಣಿ ಮಂಡಲ ಮಧ್ಯದೊಳಗೆ' ಹಾಗೂ 'ಕರಟಕ ದಮನಕ' ಹೀಗೆ ಹಲವು ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಮನ್ನಣೆ ಗಳಿಸಿವೆ. ಇತ್ತೀಚೆಗೆ ಬಿಡುಗಡೆಯಾದ 'ಮೂರನೇ ಕೃಷ್ಣಪ್ಪ' ಸಿನಿಮಾ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಲಿಲ್ಲ.

ಸದ್ದಿಲ್ಲದೇ 'ಮೂರನೇ ಕೃಷ್ಣಪ್ಪ' ಸಿನಿಮಾ ಓಟಿಟಿಗೆ ಬಂದಿದೆ. ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ಹಳ್ಳಿ ಸೊಗಡಿನ ಕಾಮಿಡಿ ಎಂಟರ್‌ಟ್ರೈನರ್ ಸಿನಿಮಾ ಇದು. ಸಂಪತ್, ರಂಗಾಯಣ ರಘು, ಶ್ರೀಪ್ರಿಯ, ಉಗ್ರಂ ಮಂಜು, ತುಕಾಲಿ ಸಂತು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಾಜಕೀಯ ವಿಡಂಬನೆಯ ಕಥಾಹಂದರ ಚಿತ್ರದಲ್ಲಿದೆ.
ನವೀನ್ ನಾರಾಯಣಘಟ್ಟ 'ಮೂರನೇ ಕೃಷ್ಣಪ್ಪ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಜನ ಮಾತನಾಡುವ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ನಾರಾಯಣಪುರ ಎಂಬ ಹಳ್ಳಿ. ಅಲ್ಲಿನ ಪಂಚಾಯ್ತಿ ಅಧ್ಯಕ್ಷ ಆಗಿರುವ ವೀರಣ್ಣ (ರಂಗಾಯಣ ರಘು). ಚುನಾವಣೆ ಹತ್ತಿರವಾಗುತ್ತಿದ್ದಂತೆ ಊರಿನಲ್ಲಿ ದೇವಸ್ಥಾನ ಕಟ್ಟಿಸಿ ಮತಗಳನ್ನು ಸೆಳೆಯುವ ತಂತ್ರ ಮಾಡ್ತಾನೆ.

ಆ ದೇವಸ್ಥಾನ ಉದ್ಘಾಟನೆಗೆ ಅತಿಥಿಗಳ ಹುಡುಕಾಟ ಶುರುವಾಗುತ್ತದೆ. ಆದರೆ ಅತಿಥಿಯನ್ನು ಕರೆಸಿ ಕಾರ್ಯಕ್ರಮ ಯಶಸ್ವಿಗೊಳಿಸುವ ಹೊಣೆ ಆ ಊರಿನ ಶಾಲೆಯ ಶಿಕ್ಷಕ ಕೃಷ್ಣಪ್ಪನ(ಸಂಪತ್) ಹೆಗಲೇರುತ್ತದೆ. ಆತನ ಹೆಸರು ಮೂರನೇ ಕೃಷ್ಣಪ್ಪ ಯಾಕೆ? ಮುಂದೆ ಏನೆಲ್ಲಾ ನಡೆಯುತ್ತದೆ? ಎನ್ನುವುದು ಇನ್ನುಳಿದ 'ಮೂರನೇ ಕೃಷ್ಣಪ್ಪ' ಸಿನಿಮಾ ಕಥೆ.
'ಶಾಖಾಹಾರಿ' ಚಿತ್ರದ ಗಂಭೀರ ಪಾತ್ರದಲ್ಲಿ ರಂಜಿಸಿದ್ದ ರಂಗಾಯಣ ರಘು ಈ ಚಿತ್ರದಲ್ಲಿ ಎಂದಿನ ತಮ್ಮ ಕಾಮಿಡಿಯಿಂದ ಮೋಡಿ ಮಾಡುತ್ತಾರೆ. ಸಂಪತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆನೇಕಲ್, ಕೋಲಾರ ಸುತ್ತಾಮುತ್ತ ಮಾತನಾಡುವ ಭಾಷೆಯ ಶೈಲಿಯನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಅದು ಹೊಸ ಅನುಭವ ನೀಡುತ್ತದೆ. ಇನ್ನು ಹಳ್ಳಿಗಳಲ್ಲಿರುವ ರಾಜಕೀಯ ದೊಂಬರಾಟವನ್ನು ಕಾಮಿಡಿ ಟಚ್ ಕೊಟ್ಟು ಹೇಳುವ ಪ್ರಯತ್ನ ಮಾಡಲಾಗಿದೆ.
ತಮಾಷೆಯ ಜೊತೆ ಜೊತೆಗೆ ಗಂಭೀರ ವಿಷಯವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಫಸ್ಟ್‌ಹಾಫ್‌ಗೆ ಹೋಲಿಸಿದರೆ ಸೆಕೆಂಡ್ ಹಾಫ್ ಕೊಂಚ ಸ್ಲೋ ಎನಿಸುತ್ತದೆ. ಕಾರಣ ಅಲ್ಲಿ ಹೇಳಿರುವ ವಿಚಾರಗಳು. ಆರಂಭದಲ್ಲಿ ಸಿಗುವ ಕಾಮಿಡಿ ಕಿಕ್ ಬಳಿಕ ಕೊಂಚ ಕಮ್ಮಿ ಎನಿಸಬಹುದು. ಆದರೆ ಒಟ್ಟಾರೆಯಾಗಿ ಸಿನಿಮಾ ಒಳ್ಳೆಯ ಪ್ರಯತ್ನ ಅಂತ್ಲೇ ಹೇಳಬೇಕು.
ಅನಂದ್ ರಾಜಾವಿಕ್ರಮ್ ಮತ್ತು ಸುಪ್ರಿತ್ ಶರ್ಮಾ ಅವರ ಸಂಗೀತ, ಯೋಗಿ ಛಾಯಾಗ್ರಹಣ ಚಿತ್ರಕ್ಕಿದೆ. ರೆಡ್ ಡ್ರ್ಯಾಗನ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೋಹನ್ ರೆಡ್ಡಿ ಹಾಗೂ ರವಿಶಂಕರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಂದಿನಂತೆ ಯಾವುದೇ ಸುಳಿವು ನೀಡದೇ ಅಮೇಜಾನ್ ಪ್ರೈಂ ವಿಡಿಯೋದಲ್ಲಿ 'ಮೂರನೇ ಕೃಷ್ಣಪ್ಪ' ಸಿನಿಮಾ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.
ಸದ್ಯ ಓಟಿಟಿಯಲ್ಲಿ ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ಮಿಸ್ ಮಾಡದೇ ಸಿನಿಮಾ ನೋಡಿ ಎಂದು ಸಲಹೆ ನೀಡುತ್ತಿದ್ದಾರೆ. ಓಟಿಟಿಯಲ್ಲಿ ಕನ್ನಡ ಸಿನಿಮಾ, ವೆಬ್ ಸೀರಿಸ್ ಬರೋದೇ ಕಮ್ಮಿ. ಸದ್ಯ ಪರಭಾಷೆ ಸಿನಿಮಾಗಳು ಡಬ್ ಆಗಿ ಬರ್ತಿವೆ. ಆದರೆ ಕನ್ನಡ ಸಿನಿಮಾಗಳನ್ನು ಜನ ಹೆಚ್ಚು ಹೆಚ್ಚು ಓಟಿಟಿಯಲ್ಲಿ ವೀಕ್ಷಿಸಬೇಕಿದೆ.
ಪೇ ಫಾರ್ ವೀವ್ ಪದ್ಧತಿಯಲ್ಲಿ ಓಟಿಟಿ ಸಂಸ್ಥೆಗಳನ್ನು ಕನ್ನಡದ ಚಿಕ್ಕ ಸಿನಿಮಾಗಳನ್ನು ಕೊಂಡುಕೊಳ್ಳುತ್ತಿವೆ. ಜನ ಸಿನಿಮಾವನ್ನು ಹೆಚ್ಚು ನೋಡಿದರೆ ಮಾತ್ರ ನಿರ್ಮಾಪಕರಿಗೆ ಪಾಲು ಸಿಗುತ್ತದೆ. ಇಲ್ಲದಿದ್ದರೆ ಇಲ್ಲೂ ನಷ್ಟ ಅನುಭವಿಸಬೇಕು. 'ಮೂರನೇ ಕೃಷ್ಣಪ್ಪ' ಸಿನಿಮಾ ವೀಕ್ಷಿಸಿದರೆ ಮನರಂಜನೆ ಗ್ಯಾರೆಂಟಿ.


Click it and Unblock the Notifications











