ಒಟಿಟಿಯಲ್ಲಿ ಶಿವಣ್ಣನ ಘೋಸ್ಟ್ ಅಬ್ಬರ: ಹೊಸ ದಾಖಲೆಗಾಗಿ 10,000 ಅಡಿ 'ಘೋಸ್ಟ್' ಪೋಸ್ಟರ್ ಲಾಂಚ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ಘೋಸ್ಟ್ ಸಿನಿಮಾ ಒಟಿಟಿ ವೇದಿಕೆಗೆ ಕಾಲಿಟ್ಟಿದೆ. ನಟ, ನಿರ್ದೇಶಕ ಶ್ರೀನಿ ಆಕ್ಷನ್ ಕಟ್ ಹೇಳಿದ್ದ 'ಘೋಸ್ಟ್' ನಾಡ ಹಬ್ಬ ದಸರಾ ಪ್ರಯುಕ್ತ ಅಕ್ಟೋಬರ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಒರಿಜಿನಲ್ ಗ್ಯಾಗ್‌ಸ್ಟಾರ್ ಅವತಾರಕ್ಕೆ ಜನ ಫಿದಾ ಆಗಿದ್ದರು.
ಈಗ ಶಿವಣ್ಣ ನಟನೆಯ ಘೋಸ್ಟ್ ಸಿನಿಮಾ ಒಟಿಟಿಗೆ ಲಗ್ಗೆಯಿಟ್ಟಿದೆ. ನವೆಂಬರ್ 17ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಲು ಆಗದವರು ಒಟಿಟಿಯಲ್ಲಿ ನೋಡಬಹುದು. ಜೊತೆಗೆ ಬಿಡುಗಡೆಯಾದ ಒಂದು ದಿನಕ್ಕೆ ಒಟಿಟಿಯಲ್ಲಿ ಸಿನಿಮಾ ಸದ್ದು ಮಾಡುತ್ತಿದೆ.

ಘೋಸ್ಟ್‌ಗಾಗಿ ಜೀ ಕನ್ನಡದ ಹೊಸ ಪ್ರಯತ್ನ
ಘೋಸ್ಟ್ ಸಿನಿಮಾವನ್ನು ಪ್ರಚಾರ ಮಾಡಲು ಜೀ ಕನ್ನಡ ಹೊಸ, ವಿಭಿನ್ನ, ವಿಶೇಷ ಪ್ರಯತ್ನಗಳನ್ನು ಮಾಡಿದ್ದು, ಇತ್ತೀಚೆಗೆ ಜೀ5 ಒಟಿಟಿಗೆ ಕಾಲಿಟ್ಟಿರುವ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾಕ್ಕೆ ಪ್ರಚಾರ ನೀಡುತ್ತಿದೆ. ಧಮಾಕ ಎಬ್ಬಿಸ್ತಿದೆ. ಇದಕ್ಕಾಗಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ.
ಹೌದು, ಸಿನಿಮಾ ಜೀ5ನಲ್ಲಿ ರಿಲೀಸ್ ಆಗಿರುವುದಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಬರೋಬ್ಬರಿ ಹತ್ತು ಸಾವಿರ ಚದರ ಅಡಿಯ 'ಘೋಸ್ಟ್' ಪೋಸ್ಟರ್ ಅನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ.
ಸಿನಿಮಾ ಮಂದಿರುಗಳ ಬಳಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ. ಇತ್ತೀಚಿನ ದಿನಗಳಲ್ಲಿ ಒಟಿಟಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇದನ್ನು ಜೀ5 ಚೆನ್ನಾಗಿ ಬಳಸಿಕೊಳ್ಳುತ್ತಿದೆ.

ಘೋಸ್ಟ್‌ನಲ್ಲಿ ಮಾಸ್ ಅವತಾರದಲ್ಲಿ ಶಿವಣ್ಣ
'ಘೋಸ್ಟ್' ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಶ್ರೀನಿ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಅವರ ಹೊಸ ಲುಕ್ ದರ್ಶನ ಮಾಡಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಮಾಡಲಾಗಿತ್ತು. ಸಿನಿಮಾವನ್ನು ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್ ನಿರ್ಮಾಣ ಮಾಡಿದೆ.
ಘೋಸ್ಟ್ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತವಿದೆ. ಶಿವಣ್ಣನ ಜೊತೆ ಮಲಯಾಳಂ ನಟ ಜಯರಾಮ್, ಹಿಂದಿ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ಸಾಥ್ ನೀಡಿದ್ದಾರೆ.


Click it and Unblock the Notifications











