98 ದಿನಗಳ ನಂತರ ಓಟಿಟಿಗೆ ಬಂತು ‘ದಿ ರೈಸ್ ಆಫ್ ಅಶೋಕ’ ; ಎಲ್ಲಿ ನೋಡಬಹುದು ಸತೀಶ್ ನೀನಾಸಂ-ಸಪ್ತಮಿಗೌಡ 'ಕ್ರಾಂತಿ' ಕಥೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರ ನೋಡಲು ನೆಟ್‌ಫ್ಲಿಕ್ಸ್ , ಅಮೆಜಾನ್, ಜೀ 5 ಹಾಟ್ ಸ್ಟಾರ್ ಹೀಗೆ ಹತ್ತು ಹಲವು ಓಟಿಟಿ ವೇದಿಕೆಗಳಿವೆ.
ಆದರೆ.. ಹೀಗೆ ಇರುವ ಬಹುತೇಕ ಓಟಿಟಿಗಳು ಕನ್ನಡ ಚಿತ್ರಕ್ಕೆ ಮಣೆ ಹಾಕುವುದು ಕಡಿಮೆ. ಇರುವುದರಲ್ಲಿ ಜೀ 5 ಮತ್ತು ಅಮೆಜಾನ್ ಪ್ರೈಮ್‌ನಲ್ಲಿ ಆಗಾಗ ಕನ್ನಡ ಹೊಸ ಚಿತ್ರಗಳು ಪ್ರಸಾರವಾಗುತ್ತವೆ. ಅಲ್ಲಿಯೂ ಕೂಡ ಸ್ಟಾರ್ ವ್ಯಾಲ್ಯೂ ಚಿತ್ರಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತೆ. ಚೂರು ಪಾರು ಪ್ರಚಾರವನ್ನು ಮಾಡಿ ಬಿಡುಗಡೆ ಮಾಡಲಾಗುತ್ತೆ. ಮಿಕ್ಕಂತೆ ಇನ್ನುಳಿದ ಚಿತ್ರಗಳಿಗೆ ''ಸನ್ ನೆಕ್ಸ್ಟ್'' ಸೇರಿ ಕೆಲವು ವೇದಿಕೆಗಳಿವೆ. ಸದ್ಯ ಇದೇ ವೇದಿಕೆಯಲ್ಲಿ '' ದಿ ರೈಸ್ ಆಫ್ ಅಶೋಕ'' ಕಥೆ ಅನಾವರಣವಾಗಲಿದೆ.

ಹೌದು, ''ದಿ ರೈಸ್ ಆಫ್ ಅಶೋಕ''.. ಸತೀಶ್ ನೀನಾಸಂ ಅಭಿನಯದ ಚಿತ್ರ. ಸಪ್ತಮಿ ಗೌಡ ಈ ಚಿತ್ರದ ನಾಯಕಿ. ದಿವಂಗತ ನಿರ್ದೇಶಕ ವಿನೋದ್ ವಿ ಧೋಂಡಾಳೆ ನಿರ್ದೇಶನದ ಈ ಚಿತ್ರ ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ 27ರಂದು ಬಿಡುಗಡೆಯಾಗಿತ್ತು. ಬಿಡುಗಡೆಯ ಮುನ್ನ ಅಪಾರವಾದ ನಿರೀಕ್ಷೆಯನ್ನು ಕೂಡ ಮೂಡಿಸಿತ್ತು.
ಆದರೆ, ಅಂತಿಮವಾಗಿ ಚಿತ್ರಮಂದಿರದಲ್ಲಿ ಈ ನಿರೀಕ್ಷೆಯ ಪರೀಕ್ಷೆಯಲ್ಲಿ ಫಸ್ಟ್ ರ್‍ಯಾಂಕ್ ಬರುವಲ್ಲಿ ವಿಫಲವಾದ ಚಿತ್ರ ಫಸ್ಟ್ ಕ್ಲಾಸ್‌ಗೆ ತೃಪ್ತಿ ಪಡಬೇಕಾಯ್ತು. ಚಿತ್ರದ ಮೊದಲಾರ್ಧವನ್ನು ಮೆಚ್ಚಿಕೊಂಡಿದ್ದ ಹಲವರು ಚಿತ್ರದ ದ್ವೀತಿಯಾರ್ಧದ ವಿನ್ಯಾಸ ಮತ್ತು ಬರವಣಿಗೆಯ ಕುರಿತು ಪ್ರಶ್ನೆ ಮಾಡಿದ್ದರು. ಮೊದಲಾರ್ಧದಂತೆ ಚಿತ್ರದ ದ್ವೀತಿಯಾರ್ಧವೂ ಇದ್ದಿದ್ದರೆ ಚಿತ್ರದ ಕಥೆ ಬೇರೆಯೇ ಇರುತ್ತಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ₹1.24 (Gross) ಕೋಟಿಯನ್ನು ಗಳಿಸಿತ್ತು.
ಕಥಾಹಂದರ
70ರ ದಶಕದ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕಥೆ ಇದು. ''ಅರವತ್ತಿ'' ಎಂಬ ಹಳ್ಳಿಯಲ್ಲಿ ತಮಿಳು ಮೂಲದ ಕುಟ್ಟಿಬಾಬಿ (ಸಂಪತ್) ಎಂಬಾತ ದೇವಸ್ಥಾನದಲ್ಲಿ ಹರಕೆಯಾಗಿ ಕೊಡುವ ತಲೆಕೂದಲಿನ ವ್ಯಾಪಾರದ ಕೋಟೆ ಕಟ್ಟಿಕೊಂಡಿದ್ದಾನೆ. ಇಂತಹ ಕೋಟೆಯೊಳಗಿನ ಮುಡಿಕಟ್ಟೆಯಲ್ಲಿ ನಾಲ್ಕಾಣೆಗೆ ದುಡಿಯುವ ಕ್ಷೌರಿಕ ಗಂಗಣ್ಣನಿಗೆ (ಬಿ.ಸುರೇಶ) ತನ್ನ ಮಗ ಅಶೋಕ (ಸತೀಶ್ ನೀನಾಸಂ) ಚೆನ್ನಾಗಿ ಓದಿ ದೊಡ್ಡ ಸರ್ಕಾರಿ ಆಫೀಸರ್ ಆಗಬೇಕು ಅನ್ನೋದು ಏಕೈಕ ಕನಸು. ಹೀಗಾಗಿ ಓದಲು ನಗರಕ್ಕೆ ಕಳುಹಿಸುತ್ತಾನೆ.
ತಂದೆಯ ಕನಸು ನನಸು ಮಾಡುವ ಉದ್ದೇಶದಿಂದ ತನು-ಮನ ಅರ್ಪಿಸಿ ಅಶೋಕ ಪದವಿ ಶಿಕ್ಷಣ ಪೂರ್ಣಗೊಳಿಸುತ್ತಾನೆ. ಇನ್ನೇನು ಬದುಕು ಸರಾಗ ಎಂದುಕೊಂಡು ಊರಿಗೆ ಮರಳಿದ ಅಶೋಕನ ಕಣ್ಣೆದುರು 'ಕುಟ್ಟಿಬಾಬ್ಬಿ'ಯ ದಬ್ಬಾಳಿಕೆ, ತನ್ನ ಸಮುದಾಯ ಎದುರಿಸುತ್ತಿರುವ ಅಸ್ಪೃಶ್ಯತೆ, ದೌರ್ಜನ್ಯದ ಕಥೆ ಅನಾವರಣವಾಗುತ್ತೆ.
ಇದೇ ಸಮಯದಲ್ಲಿ ಹೂ ಕಟ್ಟುವ ಅಂಬಿಕಾ ( ಸಪ್ತಮಿ ಗೌಡ) ಜೊತೆ ಪ್ರೀತಿಯಲ್ಲಿ ಕೂಡ ಬೀಳುವ ಅಶೋಕ ವ್ಯವಸ್ಥೆಯ ವಿರುದ್ದ ರಣಕಹಳೆ ಮೊಳಗಿಸುತ್ತಾನೆ. ಕ್ರಾಂತಿಯ ಹಾದಿಯನ್ನು ಹಿಡಿಯುತ್ತಾನೆ. ಮುಂದೇನಾಗುತ್ತೆ..? ಎನ್ನುವುದಕ್ಕೆ ಉತ್ತರ ಚಿತ್ರವನ್ನು ನೋಡಿಯೇ ನೀವು ಪಡೆಯಬೇಕು.
ತಾರಾಬಳಗ
ಸತೀಶ್ ನೀನಾಸಂ, ಸಪ್ತಮಿ ಗೌಡ, ಸಂಪತ್, ಬಿ ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಯಶ್ ಶೆಟ್ಟಿ, ಡ್ಯ್ರಾಗನ್ ಮಂಜು, ರವಿಶಂಕರ್, ಜಗ್ಗಪ್ಪ
ನಿರ್ದೇಶಕ ;
ವಿನೋದ್. ವಿ. ಧೋಂಡಾಳೆ
ನಿರ್ಮಾಣ
ವರ್ಧನ್ ಹರಿ, ಜೈಷ್ಣವಿ, ಸತೀಶ್ ನೀನಾಸಂ
ಸಂಗೀತ
ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ
ಲವಿತ್
ಎಲ್ಲಿ ನೋಡಬಹುದು ? ಎಂದಿನಿಂದ ?
ಅಶೋಕನ ಈ ಕ್ರಾಂತಿಯ ಕಥೆಯನ್ನು ನೀವು ಇದೇ ಜೂನ್ 5ರಿಂದ ''ಸನ್ ನೆಕ್ಸ್ಟ್''ನಲ್ಲಿ ನೋಡಬಹುದು. ವಿಶೇಷ ಅಂದರೆ ಈ ಚಿತ್ರವನ್ನು ಕನ್ನಡ ಜೊತೆ ತೆಲುಗು ಮತ್ತು ತಮಿಳಿಗೆ ಡಬ್ ಮಾಡಲಾಗಿತ್ತು. ಅಲ್ಲಿಯೂ ತೆರಳಿ ಚಿತ್ರತಂಡ ಪ್ರಚಾರವನ್ನು ಕೂಡ ಮಾಡಿತ್ತು. ''ಸನ್ ನೆಕ್ಸ್ಟ್''ನಲ್ಲಿ ಮೂರು ಭಾಷೆಗಳಲ್ಲಿ ಈ ಚಿತ್ರ ಲಭ್ಯ ಇರಲಿದೆ. ಆಸಕ್ತರು ನೋಡಬಹುದು.


Click it and Unblock the Notifications