ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ ಶಾರುಖ್ ಮಗಳು
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾನೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗ ಅಚಾನಕ್ಕಾಗಿ ಶಾರುಖ್ ಪುತ್ರಿ ಸುಹಾನಾ ಖಾನ್ ನಟನಾ ವೃತ್ತಿಗೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ.
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ಒಂದರಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಟೀಸರ್ ಅನ್ನು ಸ್ವತಃ ಶಾರುಖ್ ಖಾನ್ ಹಂಚಿಕೊಂಡಿದ್ದಾರೆ.
ಜೋಯಾ ಅಖ್ತರ್ ನಿರ್ದೇಶನ ಮಾಡುತ್ತಿರುವ ನೆಟ್‌ಫ್ಲಿಕ್ಸ್ ಸಿನಿಮಾ 'ದಿ ಆರ್ಚಿಸ್'ನಲ್ಲಿ ಸುಹಾನಾ ಖಾನ್ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದೆ. ಬಾಲಿವುಡ್ ಸ್ಟಾರ್‌ಗಳಾದ, ಹೃತಿಕ್ ರೋಷನ್, ಕರಣ್ ಜೋಹರ್, ಅನಿಲ್ ಕಪೂರ್, ಅದಿತಿ ರಾವ್ ಹೈದಿರಿ, ಆಯುಷ್ಮಾನ್ ಖುರಾನಾ, ಅಲೈಕಾ ಅರೋರಾ ಸೇರಿದಂತೆ ಇನ್ನೂ ಹಲವರು ಈ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.

ಆರ್ಚಿಸ್ ಅನ್ನು ಸಿನಿಮಾ ಮಾಡುತ್ತಿರುವ ಜೋಯಾ
ಸಿನಿಮಾದ ಟೀಸರ್ ನೋಡಿದರೆ ಇದು ಮೇಲ್ವರ್ಗದ ಜನರ ಮಕ್ಕಳ ಕತೆ ಎಂಬುದು ಗೊತ್ತಾಗಿತ್ತು, ಸಿನಿಮಾದ ಕತೆಯು 70-80ರ ದಶಕದಲ್ಲಿ ಸ್ಥಿತವಾಗಿದೆ. ಈಗ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಯುವಕ-ಯುವತಿಯರು ಪಿಕ್‌ನಿಕ್‌ಗೆ ಬಂದು ಅಲ್ಲಿ ಪಾರ್ಟಿ ಮಾಡುತ್ತಿರುವ ದೃಶ್ಯಗಳಿವೆ. ಟೀಸರ್‌ನಲ್ಲಿ ಸುಹಾನಾ ಸೇರಿದಂತೆ ಇತರೆ ಪಾತ್ರಗಳನ್ನು, ನಟರನ್ನು ಪರಿಚಯ ಸಹ ಮಾಡಿಸಲಾಗಿದೆ.

ಅಮಿತಾಬ್ ಬಚ್ಚನ್ ಮೊಮ್ಮಗನೂ ಇದ್ದಾನೆ
ಜೋಯಾ ಅಖ್ತರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕೇವಲ ಸುಹಾನಾ ಮಾತ್ರವೇ ಪಾದಾರ್ಪಣೆ ಮಾಡುತ್ತಿಲ್ಲ, ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯಾ ನಂದಾ ಸಹ ನಟನೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬೋನಿ ಕಪೂರ್ ಎರಡನೇ ಮಗಳು, ಜಾನ್ಹವಿ ಕಪೂರ್ ತಂಗಿ ಖುಷಿ ಕಪೂರ್ ಸಹ ನಟಿಸಿದ್ದಾಳೆ. ಸ್ಟಾರ್ ಅಪ್ಪಂದಿರ ಅಥವಾ ಬಾಲಿವುಡ್‌ನ ಬಲಿತ ಕುಟುಂಬಗಳ ಕುಡಿಗಳ ಸಿನಿಮಾ ಇದಾಗಿದೆ! 80 ರ ದಶಕದಲ್ಲಿ ಜನಪ್ರಿಯವಾಗಿದ್ದ ಆರ್ಚಿಸ್ ಕತಾ ಪುಸ್ತಕದ ಕತೆಗಳನ್ನೇ ಜೋಯಾ ಅಖ್ತರ್ ಸಿನಿಮಾ ಮಾಡುತ್ತಿದ್ದಾರೆ.
Recommended Video


ಮಗಳಿಗೆ ನಟನೆಯ ಪಾಠ ಹೇಳಿದ ಶಾರುಖ್ ಖಾನ್
ಮಗಳ ಮೊದಲ ಸಿನಿಮಾದ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶಾರುಖ್ ಖಾನ್, ''ಮಗಳೆ ಸುಹಾನಾ, ನೆನಪಿರಲಿ ನೀನು ಪರ್ಫೆಕ್ಟ್ ಆಗಲು ಸಾಧ್ಯವಿಲ್ಲ. ಆದರೆ ನೀನು ನೀನಾಗಿರುವುದು ಪರ್ಫೆಕ್ಷನ್‌ನ ಹತ್ತಿರಕ್ಕೆ ನಿನ್ನನ್ನು ತರಬಲ್ಲದು. ಸದಾ ದಯಾಳುವಾಗಿರು, ಒಬ್ಬ ನಟ-ನಟಿಗೆ ಬೀಳುವ ಚಪ್ಪಾಳೆ, ಬೈಗುಳ ಎರಡೂ ಸ್ವಂತದ್ದಾಗಿರುವುದಿಲ್ಲ. ಎರಡನ್ನೂ ನಿನ್ನ ಬಳಿ ಇಟ್ಟುಕೊಳ್ಳಬೇಡ. ನಿನ್ನ ವ್ಯಕ್ತಿತ್ವದ ಪ್ರತಿಫಲನ ತೆರೆಯ ಮೇಲೆ ಆಗುತ್ತಿರುತ್ತದೆ ಎಂಬುದು ನೆನಪಿರಲಿ. ನೀನು ಬಹಳ ದೂರ ಬಂದಿದ್ದೀಯ ಮಗಳೆ, ಆದರೆ ಜನರ ಹೃದಯಕ್ಕೆ ತಲುಪುವ ದಾರಿಗೆ ಕೊನೆಯೇ ಇಲ್ಲ. ಮುಂದೆ ಸಾಗುತ್ತಲೇ ಇರು, ಎಷ್ಟು ಸಾಧ್ಯವೊ ಅಷ್ಟು ಜನರ ಮುಖದಲ್ಲಿ ನಗು ಮೂಡಿಸು, ಸದ್ಯಕ್ಕೆ ಲೈಟ್ಸ್, ಕ್ಯಾಮೆರಾ ಆಕ್ಷನ್' ಆಗಿರಲಿ'' ಎಂದು ಪುತ್ರಿಗೆ ಸಲಹೆ ನೀಡಿದ್ದಾರೆ ಶಾರುಖ್ ಖಾನ್.

ಅಮಿತಾಬ್ ಬಚ್ಚನ್ ಸಹ ಮೊಮ್ಮಗನ ಬಗ್ಗೆ ಬರೆದಿದ್ದಾರೆ
ಅಮಿತಾಬ್ ಬಚ್ಚನ್ ಸಹ ಸಿನಿಮಾದ ಟೀಸರ್ ಹಂಚಿಕೊಂಡಿದ್ದು, ''ನಾವೆಲ್ಲ ಆರ್ಚೀಸ್ ಓದಿ ಬೆಳೆದವರು. ಈಗ ನಾವು ನಮ್ಮದೇ ಆದ ಆರ್ಚಿಸ್ ಹೊಂದಲಿದ್ದೇವೆ ಎಂಬುದು ಅದ್ಭುತ. ಇದಕ್ಕೆ ನಿರ್ದೇಶಕಿ ಜೋಯಾ ಅಖ್ತರ್‌ಗೆ ಧನ್ಯವಾದ ಹೇಳಬೇಕು. ನನಗೆ ಇದು ಭಾವುಕ ಸಮಯ, ನಮ್ಮ ಇನ್ನೊಂದು ಪೀಳಿಗೆಯವರು ನಟನಾ ರಂಗಕ್ಕೆ ಬಂದಿದ್ದಾರೆ. ಇವರೆಲ್ಲ ಮುಂದಿನ ಪೀಳಿಗೆಯ ನಟ-ನಟಿಯರಾಗಲಿದ್ದಾರೆ. ಎಲ್ಲರಿಗೂ ಶುಭವಾಗಲಿ. ಕಷ್ಟಪಟ್ಟು ಕೆಲಸ ಮಾಡಿ, ಏಕಾಗ್ರತೆ ಇರಲಿ, ಸದಾ ದಯೆ, ಕರುಣೆ ತುಂಬಿರಲಿ, ಅಗಸ್ತ್ಯ ನನ್ನ ಮೊಮ್ಮಗನೆ, ನೀನು ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದೀಯ'' ಎಂದಿದ್ದಾರೆ.


Click it and Unblock the Notifications











